ADVERTISEMENT

‘ಬಟರ್‌ಫ್ಲೈ’ ಆದ ಪಾರುಲ್‌!

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
‘ಬಟರ್‌ಫ್ಲೈ’ ಆದ ಪಾರುಲ್‌!
‘ಬಟರ್‌ಫ್ಲೈ’ ಆದ ಪಾರುಲ್‌!   

ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಕಿಲ್ಲಿಂಗ್‌ ವೀರಪ್ಪನ್’ ಚಿತ್ರದಲ್ಲಿ ಪೊಲೀಸರಿಗೆ ಮಾಹಿತಿ ನೀಡುವವಳಾಗಿ ಕಾಣಿಸಿಕೊಂಡ ನಟಿ ಪಾರುಲ್ ಯಾದವ್ ಈಗ ಪಾತರಗಿತ್ತಿಯಾಗಿದ್ದಾರೆ! ಅಂದರೆ, ರಮೇಶ್ ಅರವಿಂದ ನಿರ್ದೇಶನದ ‘ಬಟರ್‌ ಫ್ಲೈ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಜೊತೆಗೆ, ಸಿನಿಮಾದ ಸಹ ನಿರ್ಮಾಪಕಿಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಸುದ್ದಿಗೋಷ್ಠಿ ನಂತರ ಮಾತಿಗೆ ಸಿಕ್ಕಿದ್ದ ಪಾರುಲ್, ಈ ಸಿನಿಮಾ ಬಗ್ಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಂಡರು. ಅವರ ಮಾತುಗಳ ಆಯ್ದ ಭಾಗ ಇಲ್ಲಿದೆ.

ಸಹ ನಿರ್ಮಾಪಕಿಯಾಗಲು ಕಾರಣ?

ADVERTISEMENT

‘ಮಹಿಳಾ ಕೇಂದ್ರಿತ ಸಿನಿಮಾಗಳು ಬಾಲಿವುಡ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಯಾರಾಗುತ್ತಿವೆ. ಆದರೆ, ಕನ್ನಡದಲ್ಲಿ ಅಷ್ಟು ಸಂಖ್ಯೆಯಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ತಯಾರಾಗುತ್ತಿಲ್ಲ. ಮಹಿಳಾ ಕೇಂದ್ರಿತ ಸಿನಿಮಾಗಳನ್ನು ನಿರ್ಮಿಸಿದರೆ, ಅವು ಬಾಕ್ಸ್‌ ಆಫೀಸ್‌ನಲ್ಲಿ ಹಣ ಗಳಿಸದಿರಬಹುದು ಎಂಬ ಕಾರಣಕ್ಕೆ ಅಂತಹ ಸಿನಿಮಾ ನಿರ್ಮಾಣಕ್ಕೆ ಹಿಂದೇಟು ಹಾಕಲಾಗುತ್ತಿದೆ. ಆದರೆ, ಮನು ಕುಮಾರನ್‌ (ಬಟರ್‌ಫ್ಲೈ ಸಿನಿಮಾ ನಿರ್ಮಾಪಕ) ಧೈರ್ಯ ತೋರಿದ್ದಾರೆ.’

‘ನಾನು ಕ್ವೀನ್‌ ಸಿನಿಮಾ ವೀಕ್ಷಿಸಿದ ನಂತರ ಕೆಲವರಿಗೆ ಕರೆ ಮಾಡಿ, ಈ ಸಿನಿಮಾದ ರಿಮೇಕ್ ಮಾಡಬೇಕು ಎಂದು ಹೇಳಿಕೊಂಡೆ. ಈ ಸಿನಿಮಾದಲ್ಲಿನ ಪಾತ್ರವನ್ನು ಕರ್ನಾಟಕ, ತಮಿಳುನಾಡು ಸೇರಿದಂತೆ ಎಲ್ಲ ಪ್ರದೇಶಗಳ ಹೆಣ್ಣು ಮಕ್ಕಳು ತಮ್ಮದೆಂದು ಹೇಳಿಕೊಳ್ಳಬಹುದು. ಆದರೆ, ನಾನು ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ಒಮ್ಮೆ ಅಭಿನಯಿಸಿದರೆ, ಯಾವ ಹೀರೊ ಕೂಡ ನನ್ನ ಜೊತೆ ಕೆಲಸ ಮಾಡಲು ಮುಂದೆ ಬರುವುದಿಲ್ಲ ಎಂದು ಕೆಲವರು ಎಚ್ಚರಿಸಿದ್ದರು.’

‘ನಾನು ಅಂತಹ ಮಾತುಗಳನ್ನು ಒಪ್ಪಲಿಲ್ಲ. ಈ ಸಿನಿಮಾ ಮಾಡಲೇಬೇಕು ಎಂದು ನಿರ್ಧರಿಸಿದೆ. ಈ ಸಿನಿಮಾದ ರಿಮೇಕ್‌ ಅನ್ನು ನಾಲ್ಕು ಭಾಷೆಗಳಲ್ಲಿ (ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ) ಮಾಡುವುದು ಮನು ಕುಮಾರನ್ ಅವರ ಆಲೋಚನೆ. ಈ ಸಿನಿಮಾದ ರಿಮೇಕ್‌ನಲ್ಲಿ ನಾನು ಸೃಜನಾತ್ಮಕವಾಗಿ ತೊಡಗಿಕೊಂಡಿದ್ದ ಕಾರಣ, ಸಿನಿಮಾ ತಂಡದವರೇ ನನ್ನನ್ನು ನಿರ್ಮಾಪಕಿಯಾಗಿಯೂ ತೊಡಗಿಕೊಳ್ಳುವಂತೆ ಹೇಳಿದರು.’

ಆಕೆಯ ಖುಷಿ...

‘ಹೆಣ್ಣು ಒಳ್ಳೆಯ ತಾಯಿ, ಮಗಳು, ತಂಗಿ, ಹೆಂಡತಿ ಆಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಆಕೆಯ ಖುಷಿ ಬಗ್ಗೆ ನಾವು ಆಲೋಚಿಸಿರುವುದಿಲ್ಲ. ಈ ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳೂ ಇವೆ. ಒಂದು ಒಳ್ಳೆಯ ಸಂದೇಶವೂ ಇದೆ. ಬಟರ್‌ಫ್ಲೈ ಸಿನಿಮಾವು, ತಾನು ಹೇಳಬೇಕಿರುವ ಸಂದೇಶವನ್ನು ಹಾಸ್ಯಮಯವಾಗಿ ರವಾನೆ ಮಾಡುತ್ತದೆ.’

‘ಈ ಸಿನಿಮಾ ಬಿಡುಗಡೆ ಆದ ನಂತರ ಹುಡುಗರು ಮಾತ್ರವೇ ಸಿನಿಮಾ ವೀಕ್ಷಿಸಲು ಹೋಗಬಾರದು. ಅವರು ತಮ್ಮ ತಾಯಿ, ಸಹೋದರಿಯರನ್ನೂ ಕರೆದುಕೊಂಡು ಹೋಗಬೇಕು.’

‘ಈ ಸಿನಿಮಾದ ನಾಯಕಿ ಗೋಕರ್ಣದ ಯುವತಿ. ಆಕೆಯ ಹೆಸರು ಪಾರ್ವತಿ. ಗಂಡ ಆಗುವವನಿಂದ ಮೋಸ ಹೋಗುವ ಆಕೆ ಒಬ್ಬಳೇ ಹನಿಮೂನ್‌ಗೆ ಹೋಗುತ್ತಾಳೆ. ಇಡೀ ಪ್ರಕ್ರಿಯೆಯಲ್ಲಿ ಆಕೆ ತನ್ನನ್ನು ತಾನು ಕಂಡುಕೊಳ್ಳುತ್ತಾಳೆ. ಹೆಣ್ಣುಮಕ್ಕಳು ತಮ್ಮನ್ನು ತಾವು ಪ್ರೀತಿಸಿಕೊಳ್ಳಬೇಕು. ಹಾಗಾದಾಗ, ಸಂಬಂಧಗಳು ಮುರಿದುಬಿದ್ದಾಗ ತಲೆಮೇಲೆ ಆಕಾಶ ಬಿದ್ದಂತೆ ಅವರಿಗೆ ಆಗುವುದಿಲ್ಲ ಎಂಬುದು ಇಲ್ಲಿರುವ ಸಂದೇಶ.’

ಕನ್ನಡ ಕಲಿತದ್ದು

‘ನಾನು ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದವಳಲ್ಲ. ನಾನು ಸಾಮಾನ್ಯವಾಗಿ ಇಲ್ಲಿನ ಸಿನಿಮಾಗಳಲ್ಲಿ ಅಭಿನಯಿಸುವಾಗ, ಸಂಭಾಷಣೆ ಹೇಳಲು ಬೇರೆಯವರ ನೆರವು ಪಡೆದುಕೊಳ್ಳುತ್ತೇನೆ. ಆದರೆ ಈ ಸಿನಿಮಾದಲ್ಲಿ ಕ್ಯಾಮೆರಾ ಎದುರು ನಿಂತಾಗ ಸಂಭಾಷಣೆಯನ್ನು ನೀವಾಗಿಯೇ ಹೇಳಬಲ್ಲಿರಾ ಎಂದು ರಮೇಶ್ ಕೇಳಿದ್ದರು. ಅದು ಆಗದು ಎಂದು ಹೇಳಿದ್ದೆ. ಅವರು ಏನೂ ಹೇಳಲಿಲ್ಲ. ಆದರೆ ಅವರ ಮುಖದಲ್ಲಿ ಬೇಸರ ಕಂಡಿತು. ನಾನು ಹತ್ತು ದಿನಗಳ ಬಿಡುವು ಪಡೆದುಕೊಂಡು, ಒಬ್ಬ ಕನ್ನಡ ಮೇಷ್ಟ್ರನ್ನು ಗೊತ್ತುಮಾಡಿಕೊಂಡೆ. ಅವರಿಂದ ನಾನು ಅಷ್ಟೂ ಸಂಭಾಷಣೆ ಕಲಿತುಕೊಂಡೆ. ನಂತರ, ಕ್ಯಾಮೆರಾ ಎದುರು ನಿಂತು ಬೇರೊಬ್ಬರ ಸಹಾಯ ಇಲ್ಲದೆಯೇ ಸಂಭಾಷಣೆಗಳನ್ನು ಹೇಳಿದೆ.’

‘ಮಹಿಳಾ ಕೇಂದ್ರಿತ ಎನ್ನುವ ಸಿನಿಮಾಗಳಲ್ಲಿ ಗ್ಲಾಮರ್‌ ಕೂಡ ಇರುತ್ತದೆ. ಇಲ್ಲಿ ಹಾಗಲ್ಲ. ಪೋಸ್ಟರ್‌ನಲ್ಲಿ ನಾನು ಮೇಕಪ್‌ ಇಲ್ಲದೆಯೇ ಕಾಣಿಸಿಕೊಂಡಿದ್ದೇನೆ. ನಾನು ಯಾವತ್ತೂ ಗ್ಲಾಮರ್‌ ಸಿನಿಮಾ ಮಾಡಿಲ್ಲ. ನನಗೆ ನನ್ನ ಅಭಿನಯದಲ್ಲಿ ತುಸು ವಿಶ್ವಾಸ ಇದೆ!’

33 ಕೋಟಿ ವೆಚ್ಚ

‘ಸಿನಿಮಾಕ್ಕಾಗಿ ಫ್ರಾನ್ಸ್‌ನಲ್ಲಿ 40ಕ್ಕೂ ಹೆಚ್ಚು ದಿನಗಳ ಶೂಟಿಂಗ್ ನಡೆಸಿದ್ದೇವೆ. ಇಲ್ಲಿಂದಲೇ ಇಡ್ಲಿ ಮಾಡುವವರನ್ನು ಕರೆದುಕೊಂಡು ಹೋಗಿದ್ದೆವು. ಈ ಸಿನಿಮಾಕ್ಕಾಗಿ ನಾವು ಇದುವರೆಗೆ ಒಟ್ಟಾರೆ ₹ 33 ಕೋಟಿ ಖರ್ಚು ಮಾಡಿದ್ದೇವೆ. ಚಿತ್ರೀಕರಣ ಇನ್ನೂ ಬಾಕಿ ಇದೆ. ಕನ್ನಡ ಸಿನಿಮಾಕ್ಕಾಗಿ ನಾವು ಗೋಕರ್ಣ ಮತ್ತು ಪ್ಯಾರಿಸ್‌ಗೆ ಮತ್ತೆ ಹೋಗಬೇಕಿದೆ.’

***

ನಾನು ಒಂದೂವರೆ ವರ್ಷದಿಂದ ಬೇರೆ ಯಾವ ಸಿನಿಮಾದಲ್ಲೂ ಕೆಲಸ ಮಾಡಿಲ್ಲ. ‘ಬಟರ್‌ಫ್ಲೈ’ ಸಿನಿಮಾಕ್ಕಾಗಿಯೇ ನನ್ನ ಸಮಯ ವಿನಿಯೋಗಿಸಿದ್ದೇನೆ. ಬಾಹುಬಲಿ ಸಿನಿಮಾಕ್ಕಾಗಿ ಪ್ರಭಾಸ್ ಮೂರು ವರ್ಷ ಕೆಲಸ ಮಾಡಿದ್ದರು. ಕಲಾವಿದ ತನ್ನ ಸಿನಿಮಾವನ್ನು ಪ್ರೀತಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ.
–ಪಾರುಲ್ ಯಾದವ್, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.