ADVERTISEMENT

ಸಂಕ್ರಾಂತಿ ಕಾಮಿಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST
ಸಂಕ್ರಾಂತಿ ಕಾಮಿಡಿ ಉತ್ಸವ
ಸಂಕ್ರಾಂತಿ ಕಾಮಿಡಿ ಉತ್ಸವ   

ಉದಯ ಕಾಮಿಡಿ ತಂಡ ಹೊಸ ವರ್ಷದಲ್ಲಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಸಂಕ್ರಾಂತಿ ಹಬ್ಬಕ್ಕೆ ರಸದೌತಣ ನೀಡುವುದು ತಂಡದ ಗುರಿ. ಮಾಧ್ಯಮದವರು ಕಾರ್ಯಕ್ರಮ ಆಯೋಜಿಸುವುದು ಸರ್ವೇಸಾಮಾನ್ಯ. ಆದರೆ, ಈ ಬಾರಿ ಹೊಸಕೋಟೆಯ ಕೆ. ಸತ್ಯಾವರ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ‘ಸಂಕ್ರಾಂತಿ ಕಾಮಿಡಿ ಉತ್ಸವ’ ಆಯೋಜಿಸಿದ್ದು ವಿಶೇಷ.

ಕಾಮಿಡಿ ತಂಡದ ಕಲಾವಿದರು ಆ ಹಳ್ಳಿಗೆ ತೆರಳಿ ಗ್ರಾಮಸ್ಥರೊಂದಿಗೆ ನಕ್ಕು ನಲಿದ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದಿದೆ. ಸುಗ್ಗಿ ಹಬ್ಬದ ಅಂಗವಾಗಿ ಜನವರಿ 15ರಂದು ಕಾಮಿಡಿ ಉತ್ಸವ ಪ್ರಸಾರವಾಗಲಿದೆ.

ಹ್ಯಾಪಿ ಫ್ಯಾಮಿಲಿ: ಹೊಸ ವರ್ಷದಲ್ಲಿ ಉದಯ ಕಾಮಿಡಿ ತಂಡದಿಂದ ಮೂಡಿ ಬರಲಿರುವ ಮತ್ತೊಂದು ವಿಭಿನ್ನ ಕಾರ್ಯಕ್ರಮ ‘ಹ್ಯಾಪಿ ಫ್ಯಾಮಿಲಿ’.

ADVERTISEMENT

ಆಧುನಿಕ ಯುಗದ ನಾಗಾಲೋಟದಲ್ಲಿ ನಗರ ಪ್ರದೇಶಗಳಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆ ಕಣ್ಮರೆಯಾಗಿದೆ. ಗಂಡ, ಹೆಂಡತಿ, ಇಬ್ಬರು ಮಕ್ಕಳಿದ್ದರೆ ಸುಖೀ ಕುಟುಂಬ ಎಂಬ ಕಲ್ಪನೆ ಬೇರೂರಿದೆ.

ಈ ಕಾಲದಲ್ಲೂ ಕೆಲವರು ಅವಿಭಕ್ತ ಕುಟುಂಬದಲ್ಲಿ ನಂಬಿಕೆ ಇಟ್ಟಿದ್ದು ಒಟ್ಟಿಗೆ ಬದುಕಿನ ಬಂಡಿ ಎಳೆಯುತ್ತಿರುವುದು ಉಂಟು. ಅಂತಹ ಮನೆಗೆ ಭೇಟಿ ನೀಡಿ ಮನೆ ಮಂದಿಯ ಜತೆ ನಕ್ಕುನಲಿದು, ಎಲ್ಲರಿಗೂ ವಿವಿಧ ಕ್ರೀಡೆ ಆಡಿಸಿ ತುಂಬು ಕುಟುಂಬದಲ್ಲಿರುವ ಖುಷಿಯನ್ನು ಜನರಿಗೆ ಪರಿಚಯ ಮಾಡಿಕೊಡುವುದೇ ಈ ಕಾರ್ಯಕ್ರಮದ ಧ್ಯೇಯ. ಈ ಕಾರ್ಯಕ್ರಮ ಜನವರಿ 22ರಿಂದ ಸಂಜೆ 7ಕ್ಕೆ ಉದಯ ಕಾಮಿಡಿಯಲ್ಲಿ ಪ್ರಸಾರವಾಗಲಿದೆ.

ಹಳ್ಳಿ ಹಬ್ಬ: ಉದಯ ಕಾಮಿಡಿ ತಂಡದ ಕಾರ್ಯಕ್ರಮಗಳಲ್ಲಿ ‘ಹಳ್ಳಿ ಹಬ್ಬ’ವೂ ಒಂದಾಗಿದೆ. ಹಳ್ಳಿಯ ಸೊಗಡು, ಅಲ್ಲಿನ ಸಂಸ್ಕೃತಿ ಬಿಂಬಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮ ಜನರಿಗೆ ಮನರಂಜನೆ ನೀಡಲಿದೆ.

ಹಾಸನ ಜಿಲ್ಲೆಯ ಮಡೆನೂರು, ತುಮಕೂರು ಜಿಲ್ಲೆಯ ಬೆಳ್ಳಾವಿ ಹಾಗೂ ಅರೆಯೂರು, ಚಿತ್ರದುರ್ಗದ ಚಿಕ್ಕಗೊಂಡನಹಳ್ಳಿ, ಮಂಡ್ಯದ ಹೊನ್ನಾವರ, ಮೈಸೂರಿನ ಎಚ್‍.ಡಿ. ಕೋಟೆ, ಶಿವಮೊಗ್ಗದ ಶಂಕರಘಟ್ಟ, ಚಿಕ್ಕಮಗಳೂರಿನ ಕಡೂರು ಹಾಗೂ ಮಾಗಡಿಯ ತಿಪ್ಪಸಂದ್ರ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ.

ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ಆಯೋಜಿಸಲು ವಾಹಿನಿ ನಿರ್ಧರಿಸಿದೆ. ಜತೆಗೆ ಇನ್ನಷ್ಟು ವಿಭಿನ್ನ ಕಾರ್ಯಕ್ರಮಗಳು ಹಾಗೂ ನೆಚ್ಚಿನ ನಾಯಕ ನಟರ ಹೊಸ ಕಾಮಿಡಿ ದೃಶ್ಯಗಳನ್ನು ಪ್ರಸಾರ ಮಾಡಲಾಗುವುದು ಎಂದು ವಾಹಿನಿಯ ಮುಖ್ಯಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.