ADVERTISEMENT

ಮಾಲೂರು ಸಿನಿಮಾ ಪಾಠಶಾಲೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
ಮಾಲೂರು ಶ್ರೀನಿವಾಸ್‌
ಮಾಲೂರು ಶ್ರೀನಿವಾಸ್‌   

ಕೋರಿಯೋಗ್ರಾಫರ್ ಮಾಲೂರು ಶ್ರೀನಿವಾಸ್‌ ‘ನವರಸ ನಟನ ಅಕಾಡೆಮಿ’ ಎಂಬ ಹೆಸರಿನ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಅವರ ಜತೆಗೆ ಎಸ್‌. ನಾರಾಯಣ್‌ ಮತ್ತು ಎಸ್‌. ಮಹೇಂದರ್‌ ಕೂಡ ಕೈಜೋಡಿಸಿದ್ದಾರೆ. ಅಕಾಡೆಮಿಯ ಪ್ರಾಂಶುಪಾಲರಾಗಿ ಎಸ್‌. ನಾರಾಯಣ್‌ ಮತ್ತು ಪ್ರಧಾನ ನಿರ್ದೇಶಕರಾಗಿ ಎಸ್‌. ಮಹೇಂದರ್‌ ಕಾರ್ಯನಿರ್ವಹಿಸಲಿದ್ದಾರೆ. ಇತ್ತೀಚೆಗೆ ಸದಾಶಿವನಗರದಲ್ಲಿ ಈ ಅಕಾಡೆಮಿ ಕಾರ್ಯಾರಂಭ ಮಾಡಿದೆ.

ಅಕಾಡೆಮಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಎಸ್. ನಾರಾಯಣ್, ‘ಇದು ಕೇವಲ ಅಭಿನಯವನ್ನಷ್ಟೇ ಕಲಿಸುವ ಶಾಲೆ ಅಲ್ಲ. ಸಂಕಲನ, ಛಾಯಾಗ್ರಹಣ, ನೃತ್ಯ, ಸಾಹಸ, ಕುದುರೆ ಸವಾರಿ, ಈಜು... ಹೀಗೆ ಚಿತ್ರರಂಗಕ್ಕೆ ಬರುವವರಿಗೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಪರಿಣತಿ ಇರಬೇಕೋ ಅವೆಲ್ಲವನ್ನೂ ಕಲಿಸುವ ಶಾಲೆ’ ಎಂದರು.

ADVERTISEMENT

‘ಯಾವುದೇ ಸಿದ್ಧತೆಯಿಲ್ಲದ ಕಚ್ಚಾ ವ್ಯಕ್ತಿ ಇಲ್ಲಿಗೆ ಬಂದರೂ, ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಹೀಗೆ ಹಲವು ವಿಷಯಗಳನ್ನು ಕಲಿಸಿ ಹೊರಗೆ ಕಳಿಸಲಾಗುತ್ತದೆ. ಎಲ್ಲವನ್ನೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿಯೇ ಮಾಡುವುದರಿಂದ ಸಾಕಷ್ಟು ಕಲಿಯುತ್ತಾರೆ. ಕೋರ್ಸ್‌ನ ಕೊನೆಯಲ್ಲಿ ವಿದ್ಯಾರ್ಥಿಗಳೇ ರಚಿಸಿರುವ ಕಿರುಚಿತ್ರಗಳಲ್ಲಿ ಕೆಲವನ್ನು ಆಯ್ದು ಪುರಸ್ಕರಿಸುವ ಯೋಚನೆಯೂ ಇದೆ’ ಎಂದು ಮತ್ತೋರ್ವ ನಿರ್ದೇಶಕ ಎಸ್. ಮಹೇಂದರ್ ಮಾಹಿತಿ ನೀಡಿದರು.

ಮಾಲೂರು ಶ್ರೀನಿವಾಸ್‌ ಅವರಿಗೆ ಇಂಥದ್ದೊಂದು ತರಬೇತಿ ಸಂಸ್ಥೆ ಕಟ್ಟಬೇಕು ಎನ್ನುವುದು ನಿನ್ನೆಮೊನ್ನೆಯ ಕನಸಲ್ಲ.  ಮದ್ರಾಸಿನಲ್ಲಿ ಚಲನಚಿತ್ರ ತರಬೇತಿ ಪಡೆದುಕೊಳ್ಳುತ್ತಿದ್ದಾಗಲೇ ಅವರಿಗೆ ‘ಕನ್ನಡಿಗರು ಸಿನಿಮಾ ತರಬೇತಿ ಪಡೆದುಕೊಳ್ಳಬೇಕು ಎಂದರೆ ಇಷ್ಟು ದೂರ ಯಾಕೆ ಬರಬೇಕು. ಅಲ್ಲಿಯೇ ತರಬೇತಿ ಸಿಗುವಂತಾಗಬೇಕು’ ಎಂಬ ಆಲೋಚನೆ ಬಂದಿತ್ತಂತೆ.

ಈ ಶಾಲೆಯಲ್ಲಿ ಆರು ತಿಂಗಳ ಕೋರ್ಸ್‌ ಇರುತ್ತದೆ. ಮೊದಲ ಬ್ಯಾಚ್‌ಗೆ ಒಟ್ಟು 110 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕೋರ್ಸ್‌ ಶುಲ್ಕ ₹35,000. ಮಾಹಿತಿಗೆ www.navarasanatana.com ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.