ADVERTISEMENT

‘ಶಿಶಿರ’ದಲ್ಲಿ ಬಂದ ಯುವ ನಟ

ಕೆ.ಎಚ್.ಓಬಳೇಶ್
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
ಶಿಶಿರ
ಶಿಶಿರ   

* ಕಿರುತೆರೆ ಪ್ರವೇಶಿಸಿದ್ದು ಹೇಗೆ?
ನಾನು ಎಂ.ಬಿ.ಎ. ಪದವೀಧರ. ಈವೆಂಟ್‌ ಮ್ಯಾನೇಜಿಂಗ್‌ ಸಂಸ್ಥೆ ನಡೆಸುತ್ತಿದ್ದೆ. ಒಮ್ಮೆ ಧಾರಾವಾಹಿಯ ವ್ಯವಸ್ಥಾಪಕರೊಬ್ಬರು ನನ್ನ ಸಂಸ್ಥೆಗೆ ಬಂದರು. ಅದೇ ವೇಳೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಸೊಸೆ’ ಧಾರಾವಾಹಿಗೆ ಆಡಿಷನ್‌ ನಡೆಯುತ್ತಿತ್ತು. ನೀವೇಕೆ ಅದರಲ್ಲಿ ಪಾಲ್ಗೊಳ್ಳಬಾರದು ಎಂದ್ರು. ಅವರ ಸಲಹೆ ಮೇರೆಗೆ ಆಡಿಷನ್‌ಗೆ ಹೋದೆ. ಕಿರುತೆರೆಗೆ ನಾನು ಅಪೇಕ್ಷೆಪಟ್ಟು ಬಂದವನಲ್ಲ. ನನ್ನದು ಅನಿರೀಕ್ಷಿತ ಪ್ರವೇಶ.

* ಧಾರಾವಾಹಿಗಳಲ್ಲಿ ನೀವು ಅಭಿನಯಿಸಿದ ಪಾತ್ರಗಳ ಬಗ್ಗೆ ಹೇಳಿ.
‘ಸೊಸೆ’ಯಲ್ಲಿ ಲವರ್‌ಬಾಯ್‌ ಪಾತ್ರ ಮಾಡಿದ್ದೆ. ಬಳಿಕ ‘ಪುಟ್ಟಗೌರಿ’ಯಲ್ಲಿ ನಟಿಸಿದೆ. ಅಲ್ಲಿ ಗರ್ಭಿಣಿಯಾಗಿರುವ ವಿಧವೆಯನ್ನು ವಿವಾಹವಾಗುವ ಪಾತ್ರ. ತುಂಬ ಭಾವನಾತ್ಮಕವಾದ ಪಾತ್ರವದು. ನಂತರ ‘ಭಾರತಿ’ಯಲ್ಲೂ ಭಿನ್ನವಾದ ಪಾತ್ರದಲ್ಲಿ ಅಭಿನಯಿಸಿದೆ. ಸದ್ಯಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಮಾದಕ ವ್ಯಸನಿಯಾದ ವ್ಯಕ್ತಿಯೊಬ್ಬ ದುಶ್ಚಟದಿಂದ ಹೊರಬಂದು ಸಂಸಾರ, ಬ್ಯುಸಿನೆಸ್‌ ನಡೆಸುವ ಪಾತ್ರ. ಇದು ನನಗೆ ಸವಾಲಿನ ಪಾತ್ರವೂ ಹೌದು.‌

* ಸಿನಿಮಾ ಪ್ರವೇಶಕ್ಕೆ ನಡೆಸಿದ ಕಸರತ್ತು ಹೇಗಿತ್ತು?
ಸಿನಿಮಾದಲ್ಲಿ ನಟಿಸಬೇಕೆಂದು ಹಲವು ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ, ಅವಕಾಶ ಕೇಳಿಕೊಂಡು ಹೋದ ಕಡೆಯಲ್ಲಿ ಅವಮಾನ ಎದುರಿಸಿದ್ದೇ ಹೆಚ್ಚು. ನೀನು ಹೊಸಬ. ನಿನ್ನನ್ನು ನಂಬುವುದು ಹೇಗೆ. ಮೊದಲು ಹಣ ಹೂಡು. ಆ ನಂತರ ಸಿನಿಮಾದ ಮಾತು ಎಂದವರ ಪಟ್ಟಿಯೇ ದೊಡ್ಡದಿದೆ. ನನ್ನದು ಮಧ್ಯಮ ವರ್ಗದ ಕುಟುಂಬ. ಲಕ್ಷಾಂತರ ರೂಪಾಯಿ ವ್ಯಯಿಸುವುದು ಕಷ್ಟಕರ. ನನ್ನ ಮೊದಲ ಸಿನಿಮಾವು ಮುಹೂರ್ತ ನೆರವೇರಿದ ಎರಡು ದಿನದಲ್ಲಿಯೇ ಸ್ಥಗಿತಗೊಂಡಿತು. ಆಗ ನಾನು ಅಕ್ಷರಶಃ ಖಿನ್ನತೆಗೊಳಗಾದೆ. ಧಾರಾವಾಹಿಯ ಶೂಟಿಂಗ್‌ಗೂ ಹೋಗಲಿಲ್ಲ. ಕೊನೆಗೆ, ಹೊಟ್ಟೆಪಾಡಿಗಾಗಿ ಮತ್ತೆ ಶೂಟಿಂಗ್‌ಗೆ ತೆರಳಿದೆ.

ADVERTISEMENT

* ‘ಮಿಸ್ಟರ್‌ ಎಲ್‌ಎಲ್‌ಬಿ’ ಸಿನಿಮಾದಲ್ಲಿ ನಟಿಸಲು ಅವಕಾಶ ಲಭಿಸಿದ್ದು ಹೇಗೆ?
ನನ್ನ ತಂದೆಯವರು ಒಮ್ಮೆ ನಿರ್ದೇಶಕ ರಘುವರ್ಧನ್‌ ಸರ್‌ ಅವರನ್ನು ಭೇಟಿ ಮಾಡಿದರಂತೆ. ನಾನು ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಅವರಿಗೆ ಹೇಳಿದರಂತೆ. ಬಳಿಕ ನಿರ್ದೇಶಕರು ನನ್ನ ಫೋಟೊ ಮತ್ತು ಧಾರಾವಾಹಿಯ ದೃಶ್ಯಗಳನ್ನು ನೋಡಿದ್ದಾರೆ. ನಂತರ ನನಗೆ ನಟಿಸಲು ಅವಕಾಶ ಕಲ್ಪಿಸಿದರು. ಇದು ನನ್ನ ಅದೃಷ್ಟ.

* ಹಿರಿತೆರೆಯಲ್ಲಿಯೇ ಸಕ್ರಿಯವಾಗುವ ಇಚ್ಛೆ ಇದೆಯೇ?
ನನಗೆ ಬದುಕು ನೀಡಿದ್ದು ಕಿರುತೆರೆ. ಅದನ್ನು ನಾನೆಂದಿಗೂ ಮರೆಯಲಾರೆ. ‘ಕುಲವಧು’ ಧಾರಾವಾಹಿ ಮುಗಿಯುವವರೆಗೂ ನಟಿಸುತ್ತೇನೆ. ಬಳಿಕ ಹಿರಿತೆರೆಯಲ್ಲಿ ಸಕ್ರಿಯವಾಗುವ ಆಸೆ ನನ್ನದು.

* ಸಿನಿಮಾಗಳಲ್ಲಿ ನಟಿಸಲು ಅವಕಾಶ ಬರುತ್ತಿವೆಯೇ?
ನಾನು ಮತ್ತು ಚಿಕ್ಕಣ್ಣ ಜೋಡಿಯಾಗಿರುವ ‘ಬಿಲ್‌ಗೇಟ್ಸ್‌’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾ ಏಪ್ರಿಲ್‌ ಅಥವಾ ಮೇ ತಿಂಗಳ ವೇಳೆಗೆ ತೆರೆಗೆ ಬರಲಿದೆ. ‘ಭೂತಕಾಲದ ದರ್ಬಾರ್’ ಚಿತ್ರದ ಶೂಟಿಂಗ್‌ ಅರ್ಧ ಪೂರ್ಣಗೊಂಡಿದೆ. ‘ಛಾಯಾ’ ಎಂಬ ಸಿನಿಮಾಕ್ಕೆ ಸಹಿ ಹಾಕಿದ್ದೇನೆ.

* ಧಾರಾವಾಹಿ ಮತ್ತು ಸಿನಿಮಾ ನಡುವೆ ಹೊಂದಾಣಿಕೆ ಹೇಗೆ ಮಾಡಿಕೊಳ್ಳುತ್ತೀರಿ?
ಸಮಯದ ಹೊಂದಾಣಿಕೆ ಕಷ್ಟಕರ. ಸಿನಿಮಾದಲ್ಲಿ ನಟಿಸಲು ‘ಕುಲವಧು’ ತಂಡ ನನಗೆ ಸಹಕಾರ ನೀಡಿದೆ. ಈ ಧಾರಾವಾಹಿಯ ನಿರ್ಮಾಪಕ ಮಿಲನ ಪ್ರಕಾಶ್‌ ಅವರಿಗೆ ಸಿನಿಮಾ ಜಗತ್ತಿನ ಸಮಸ್ಯೆಗಳ ಅರಿವಿದೆ. ಅವರೇ ಸಮಯ ಹೊಂದಾಣಿಕೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ನಾನು ಅವರಿಗೆ ಆಭಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.