ADVERTISEMENT

ಆದ್ಯಾ ಸಿನಿ ಆದ್ಯತೆ!

ಸತೀಶ ಬೆಳ್ಳಕ್ಕಿ
Published 27 ಮೇ 2019, 12:00 IST
Last Updated 27 ಮೇ 2019, 12:00 IST
ಆದ್ಯಾ ಆರಾಧನ್‌
ಆದ್ಯಾ ಆರಾಧನ್‌   

ಹಾಲು ಬೆಳದಿಂಗಳಿನಲ್ಲಿ ಮಿಂದೆದ್ದಂತಹ ಚೆಲುವೆಯ ಕಂಗಳಲ್ಲಿರುವುದು ಕೂಡ ಪೂರ್ಣಚಂದ್ರನ ತೇಜಸ್ಸು. ಕಿತ್ತಳೆ ಬಣ್ಣದ ರಂಗು ಮೆತ್ತಿದ ತುಟಿಬಟ್ಟಲಿನಲ್ಲಿ ಲಾಸ್ಯವಾಡುವ ನಗುವಿನ ಸೊಬಗಿಂತಲೂ; ಆಕೆಯ ಎಡಬದಿಯ ಕೆನ್ನೆಯ ಕೆಳಗಿರುವ ಕಪ್ಪು ಚುಕ್ಕಿಯೇ ನೋಡುಗರ ಕಣ್ಣುಕುಕ್ಕುತ್ತದೆ. ಮಾಡೆಲಿಂಗ್‌ನಲ್ಲಿ ಮಿಂಚು ಹರಿಸಿದ ಚೆಲುವೆ ಆದ್ಯಾ ಆರಾಧನ್‌ ಈಗ ಸಿನಿಮಾರಂಗದಲ್ಲಿ ಎತ್ತರಕ್ಕೆ ಬೆಳೆಯುವ ಕನಸು ಹೊಸೆಯುತ್ತಿದ್ದಾರೆ.

ಟೀವಿ ಜಾಹೀರಾತು, ಡಿಸೈನರ್ಸ್‌ ದಿರಿಸುಗಳಿಗೆ ಮೈಯೊಡ್ಡಿ, ರ‍್ಯಾಂಪ್‌ ಮೇಲೆ ಆತ್ಮವಿಶ್ವಾಸದಿಂದ ನಡೆದ ಆದ್ಯಾ ಅವರ ನಟಿಯಾಗುವ ಕನಸಿಗೆ ಇಂಧನ ತುಂಬಿದ್ದು ಫ್ಯಾಷನ್‌ ಜಗತ್ತು. ಅಲ್ಲಿ ಸಿಕ್ಕ ಜನಪ್ರಿಯತೆಯನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಸಿನಿಮಾರಂಗಕ್ಕೆ ಜಿಗಿದ ಆದ್ಯಾ, ‘ಜೀವನ ಯಜ್ಞ’ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಆದಾದ ನಂತರ, ‘ಒನ್‌ ಲವ್‌ ಟೂ ಸ್ಟೋರಿ’ ಮತ್ತು ‘ರಿವೀಲ್‌’ ಸಿನಿಮಾಗಳಿಗೆ ಬಣ್ಣ ಹಚ್ಚಿ ತಮ್ಮ ಸಿನಿಯಾನ ಮುಂದುವರಿಸಿದರು.

‘ನಟಿಯಾಗಬೇಕು ಎಂಬುದು ನನ್ನ ಚಿಕ್ಕಂದಿನ ಕನಸು. ಹಾಗಾಗಿ, ಚಿತ್ರರಂಗಕ್ಕೆ ನಾನು ಬಯಸಿಯೇ ಬಂದೆ. ಕಾಲೇಜು ಜೀವನಕ್ಕೆ ಕಾಲಿಟ್ಟ ನಂತರ ರೂಪದರ್ಶಿಯಾಗಿ ಕಾಣಿಸಿಕೊಂಡೆ. ಫ್ಯಾಷನ್‌ ಕ್ಷೇತ್ರದಲ್ಲಿ ಸಿಕ್ಕಂತಹ ಯಶಸ್ಸು ನನಗೆ ಚಿತ್ರರಂಗದಲ್ಲಿ ಅವಕಾಶಗಳನ್ನು ತಂದುಕೊಟ್ಟಿತು. ಸದ್ಯಕ್ಕೆ ಈಗ ‘ಒನ್‌ ಲವ್‌ ಟೂ ಸ್ಟೋರಿ’ ಮತ್ತು ‘ರಿವೀಲ್‌’ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈ ಎರಡೂ ಚಿತ್ರಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರಲಿವೆ’ ಎನ್ನುತ್ತಾರೆ ಆದ್ಯಾ.

ADVERTISEMENT

‘ಒಬ್ಬ ಕಲಾವಿದೆಯಾಗಿ ಎಲ್ಲ ರೀತಿಯ ಪಾತ್ರಗಳಿಗೂ ಬಣ್ಣ ಹಚ್ಚಬೇಕು ಎಂಬ ಆಸೆ ಇದೆ. ನನ್ನ ಅಭಿನಯ ಸಾಮರ್ಥ್ಯವನ್ನು ಒರೆಹಚ್ಚುವಂತಹ ಸವಾಲಿನ ಪಾತ್ರಗಳು ಹಾಗೂ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಒಂದೇ ಬಗೆಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದರೆ ಅಭಿನಯಿಸುವವರಿಗೂ ಮತ್ತು ನೋಡುವವರಿಗೂ ಏಕತಾನತೆ ಕಾಡುತ್ತದೆ. ಹಾಗಾಗಿ ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಿರಬೇಕು ಎಂಬುದು ನನ್ನ ಆಶಯ’ ಎಂದು ತಮ್ಮ ಆಯ್ಕೆಯ ವಿಚಾರವನ್ನು ಮುಂದಿಡುತ್ತಾರೆ ಮೈಸೂರಿನ ಚೆಲುವೆ ಆದ್ಯಾ ಆರಾಧನ್‌.

ಸ್ಟಾರ್‌ ನಾಯಕನಟರ ಜತೆಗೆ ಮಾತ್ರ ನಟಿಸಬೇಕು ಎಂಬ ಕನಸು ಆದ್ಯಾ ಅವರಿಗೆ ಇಲ್ಲ. ಎಲ್ಲ ಯುವನಟರ ಜತೆಗೂ ತೆರೆ ಹಂಚಿಕೊಳ್ಳಬೇಕು ಎಂಬ ಆಸೆ ಅವರದ್ದು. ಆದರೆ, ಅವರು ನಿರ್ವಹಿಸುವ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಬೇಕು ಎಂಬುದಷ್ಟೇ ಅವರ ಷರತ್ತು. ಅಂದಹಾಗೆ, ಆದ್ಯಾ ಅವರಿಗೆ ಪ್ರಶಾಂತ್‌ ನೀಲ್‌ ಇಷ್ಟದ ನಿರ್ದೇಶಕರು. ಅವರ ಕಸುಬುದಾರಿಕೆ, ಸಿನಿಮಾ ನಿರ್ಮಿಸುವ ಶೈಲಿ ತುಂಬ ಇಷ್ಟವಂತೆ. ‘ಉಗ್ರಂ’, ‘ಕೆಜಿಎಫ್‌’ ಇವೆರಡೂ ಆದ್ಯಾ ಅವರ ಅಚ್ಚುಮೆಚ್ಚಿನ ಸಿನಿಮಾಗಳು.

‘ರಿವೀಲ್‌’ ಸಿನಿಮಾದಲ್ಲಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ನಾನು ಮತ್ತು ಹೀರೊ ಇನ್ವೆಸ್ಟಿಗೇಷನ್‌ ಡಿಪಾರ್ಟ್‌ಮೆಂಟ್‌ನಲ್ಲಿ ಇರುತ್ತೇವೆ. ಟ್ರೆಷರ್‌ ಹಂಟಿಂಗ್‌ ಸುತ್ತ ನಡೆಯುವ ಕಥೆಯನ್ನು ರೋಚಕವಾಗಿ ನಿರೂಪಿಸಲಾಗಿದೆ. ವಸಿಷ್ಠ ಬಂಟನೂರು ನಿರ್ದೇಶನದ ‘ಒನ್‌ ಲವ್‌ ಟೂ ಸ್ಟೋರಿ’ ಚಿತ್ರದಲ್ಲಿ ನನ್ನದು ಕಾಲೇಜು ವಿದ್ಯಾರ್ಥಿನಿಯ ಪಾತ್ರ. ಎರಡೂ ಚಿತ್ರಗಳ ಕತೆ ತುಂಬ ಚೆನ್ನಾಗಿದೆ. ಎರಡೂ ಚಿತ್ರಗಳಲ್ಲಿ ನನ್ನ ಪಾತ್ರಗಳಿಗೆ ಪ್ರಾಮುಖ್ಯತೆ ಇದೆ. ಓದು ಮುಗಿದಿದೆ. ಚಿಕ್ಕವಳಿದ್ದಾಗ ಕಂಡ ಕನಸು ಈಗಷ್ಟೇ ಕೈಗೂಡುತ್ತಿದೆ. ಹಾಗಾಗಿ, ಚಿತ್ರರಂಗದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ ಅವರು.

‘ಕಲಾವಿದರಿಗೆ ಭಾಷೆ ತೊಡಕಾಗುವುದಿಲ್ಲ. ಯಾವುದೇ ಭಾಷೆಯ ಸಿನಿಮಾಗಳು ಸಿಕ್ಕರೂ ನಟಿಸುತ್ತೇನೆ’ ಎನ್ನುವ ಆದ್ಯಾ ಅವರಿಗೆ ಈಗ ಒಂದು ತೆಲುಗು ಸಿನಿಮಾದಲ್ಲಿ ನಟಿಸುವಂತೆ ಕರೆ ಬಂದಿದೆ. ಆದರೆ, ಅದಿನ್ನೂ ಮಾತುಕತೆಯ ಹಂತದಲ್ಲಿ ಇದೆಯಂತೆ. ಇನ್ನು ಅವರು ಇಷ್ಟಪಡುವಂತಹ ಸ್ಕ್ರಿಪ್ಟ್‌ ಸಿಕ್ಕಿಲ್ಲದಿರುವುದಿಂದ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.

ಉತ್ತಮ ದೇಹಾಕಾರವನ್ನು ಕಾಪಿಟ್ಟುಕೊಂಡಿರುವ ಆದ್ಯಾ ಆರಾಧನ್‌, ಅದಕ್ಕಾಗಿ ನಿತ್ಯವೂ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ತಿನ್ನುವ ಆಹಾರದಲ್ಲಿ ಕಟ್ಟುನಿಟ್ಟು ಮಾಡದ ಆದ್ಯಾ, ಆಹಾರಪ್ರಿಯೆಯೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.