ADVERTISEMENT

ವಿಷ್ಣುವರ್ಧನ್‌ ಪುಣ್ಯಭೂಮಿ: ಡಿ.17ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 19:48 IST
Last Updated 30 ನವೆಂಬರ್ 2023, 19:48 IST
ವಿಷ್ಣುವರ್ಧನ್‌
ವಿಷ್ಣುವರ್ಧನ್‌   

ಬೆಂಗಳೂರು: ನಟ ದಿವಂಗತ ವಿಷ್ಣುವರ್ಧನ್‌ ಅವರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಡಿ.17ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಡಾ.ವಿಷ್ಣುವರ್ಧನ್‌ ಅಭಿಮಾನಿ ಸಂಘಗಳ ಒಕ್ಕೂಟ ಬೃಹತ್‌ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. 

‘ಅಭಿಮಾನ್‌ ಸ್ಟುಡಿಯೊದಲ್ಲಿ ಡಾ.ವಿಷ್ಣುವರ್ಧನ್‌ ಅವರ ಪುಣ್ಯಭೂಮಿ ಇದೆ. ಅಭಿಮಾನ್‌ ಸ್ಟುಡಿಯೊ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ, ಪ್ರತಿವರ್ಷದ ವಿಷ್ಣುವರ್ಧನ್‌ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ. ಈ ಕುರಿತಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರನ್ನು ಭೇಟಿಮಾಡಿ ಅಹವಾಲನ್ನು ಸಲ್ಲಿಸಲಾಗಿದೆ. ನಟನಿಗೆ ಎರಡೆರಡು ಕಡೆ ಸ್ಮಾರಕ, ಪುಣ್ಯಭೂಮಿ ಮಾಡುವುದು ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ವೆಚ್ಚ ಮತ್ತು ಪುಣ್ಯಭೂಮಿ ಅಭಿವೃದ್ಧಿಗೆ ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುವುದಾಗಿ ತಿಳಿಸಿರುತ್ತೇವೆ. ಆದರೂ ಯಾವುದೇ ಸೂಕ್ತಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಬೃಹತ್‌ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದು ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

‘ನಾಡಿನ ಎಲ್ಲಾ ಕನ್ನಡಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಆದಿಯಾಗಿ ಡಾ.ವಿಷ್ಣುವರ್ಧನ್‌ ಅವರ ಒಡನಾಡಿಗಳೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.