ADVERTISEMENT

ಆಡುವ ಗೊಂಬೆಯ ಕಣ್ಣಾಮುಚ್ಚಾಲೆ ಆಟ

ಕೆ.ಎಚ್.ಓಬಳೇಶ್
Published 4 ಜನವರಿ 2019, 12:54 IST
Last Updated 4 ಜನವರಿ 2019, 12:54 IST
‘ಆಡುವ ಗೊಂಬೆ’ ಚಿತ್ರದ ಪೋಸ್ಟರ್‌
‘ಆಡುವ ಗೊಂಬೆ’ ಚಿತ್ರದ ಪೋಸ್ಟರ್‌   

ಚಿತ್ರ: ಆಡುವ ಗೊಂಬೆ

ನಿರ್ಮಾಣ: ಎ. ಶಿವಪ್ಪ, ಕೆ. ವೇಣುಗೋಪಾಲ

ನಿರ್ದೇಶನ: ದೊರೆ– ಭಗವಾನ್

ADVERTISEMENT

ತಾರಾಗಣ: ಸಂಚಾರಿ ವಿಜಯ್, ಅನಂತನಾಗ್‌, ಸುಧಾ ಬೆಳವಾಡಿ, ರಶಿತಾ ಮಲ್ನಾಡ್‌, ನಿರೋಷಾ ಶೆಟ್ಟಿ, ದಿಶಾ ಕೃಷ್ಣಯ್ಯ

ಅಕ್ಕ ಹುಟ್ಟಿದ ಇಪ್ಪತ್ತು ವರ್ಷದ ನಂತರ ಮಾಧವ(ಸಂಚಾರಿ ವಿಜಯ್) ಜನಿಸುತ್ತಾನೆ. ಆತ ಹುಟ್ಟಿದ ತಕ್ಷಣವೇ ಅಮ್ಮ ಸಾಯುತ್ತಾಳೆ. ಆತನನ್ನು ಕಂಡರೆ ಅಪ್ಪನಿಗೆ ಕಡುಕೋಪ. ಕೊನೆಗೆ, ಅಕ್ಕನೇ ಅವನಿಗೆ ಆಸರೆ. ತನ್ನ ಹಿರಿಮಗಳನ್ನು ತಮ್ಮನಿಗೆ ಮದುವೆ ಮಾಡಬೇಕೆಂಬುದು ಅವಳ ಆಸೆ. ಆದರೆ, ಮದುವೆ ದಿನದಂದೇ ಆಕೆಯ ಮಗಳು ಪ್ರೀತಿಸಿದವನ ಜೊತೆಗೆ ಓಡಿಹೋಗುತ್ತಾಳೆ. ಕೊನೆಯ ಮಗಳೊಟ್ಟಿಗೆ ಮಾಧವನ ಮದುವೆ ನಡೆಯುತ್ತದೆ. ಆದರೆ, ಆಕೆಯೂ ಇನ್ನೊಬ್ಬನನ್ನು ಪ್ರೀತಿಸುತ್ತಿರುತ್ತಾಳೆ. ಮಾಧವನ ಬದುಕು ಹೈರಾಣಾಗುತ್ತದೆ.

ಬದುಕಿನಲ್ಲಿ ವಿಧಿಯ ಕಣ್ಣಾಮುಚ್ಚಾಲೆ ಆಟವನ್ನು ‘ಆಡುವ ಗೊಂಬೆ’ಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಭಗವಾನ್. ಇಳಿವಯಸ್ಸಿನಲ್ಲೂ ಕೌಟುಂಬಿಕ ಕಥೆಯನ್ನು ಜನರಿಗೆ ಮುಟ್ಟಿಸುವಲ್ಲಿ ಅವರ ಶ್ರಮ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಪ್ರೀತಿ, ವಾತ್ಸಲ್ಯ, ಸೆಡವುಗಳೊಟ್ಟಿಗೆ ಜೀವನದ ಜೊತೆಗೆ ಚೆಲ್ಲಾಟವಾಡುವ ದುರುಳ ಗುಣವೂ ಇದರಲ್ಲಿದೆ.

‘ಆಡುವ ಗೊಂಬೆ’ ಸಿನಿಮಾ ಸರಳವಾಗಿ ಶುರುವಾಗುತ್ತದೆ. ಅಕ್ಕನ ಮಾತೃ ವಾತ್ಸಲ್ಯ, ಪ್ರೀತಿಸಿದ ಹುಡುಗಿಯನ್ನು ತ್ಯಜಿಸಿ ಅಕ್ಕನ ಪುತ್ರಿಯರನ್ನು ಮದುವೆಯಾಗಿ ವಿಧಿಯಾಟಕ್ಕೆ ಸಿಲುಕುವ ತಮ್ಮನ ಸಂಕಟ ಎಲ್ಲವನ್ನೂ ಸರಳತೆಗೆ ಒಗ್ಗಿಸಲಾಗಿದೆ. ಕೊನೆಗೆ, ಅಕ್ಕ– ತಮ್ಮನ ಬದುಕು ಏನಾಗುತ್ತದೆ ಎನ್ನುವುದೇ ಕಥೆಯ ತಿರುಳು.

ಚಿತ್ರಕಥೆಯಲ್ಲಿ ಅನಿರೀಕ್ಷಿತ ತಿರುವುಗಳಿಗೆ ಬರವಿಲ್ಲ. ಕೆಲವು ಸನ್ನಿವೇಶಗಳಲ್ಲಿ ತೆರೆಯ ಮೇಲಿನ ಈ ತಿರುವುಗಳು ಪ್ರೇಕ್ಷಕರಿಗೆ ರೇಜಿಗೆ ಹುಟ್ಟಿಸುತ್ತವೆ. ಸಂಕಷ್ಟದ ಸುಳಿಗೆ ಸಿಲುಕುವ ನಾಯಕನ ತೊಳಲಾಟದ ಕಥನದಲ್ಲಿನ ತಿರುವುಗಳಲ್ಲಿ ಇನ್ನಷ್ಟು ಗಟ್ಟಿತನ ಇರಬೇಕಿತ್ತು ಎನಿಸುತ್ತದೆ. ಇದು ಕೆಲವೆಡೆ ನಾಟಕೀಯ ಎನಿಸುವುದು ಚಿತ್ರದ ಲೋಪ.

ಮೊದಲಾರ್ಧ ನಾಯಕನ ಪ್ರೇಮದಾಟ, ಹಾಡುಗಳ ನಡುವೆಯೇ ಮುಗಿದು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ಆಗೀಗ ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಆದರೆ, ಬಹುಹೊತ್ತು ಜನರನ್ನು ಹಿಡಿದಿಡಲು ಸೋಲುತ್ತದೆ.

ಸಂಚಾರಿ ವಿಜಯ್, ಅನಂತನಾಗ್, ಸುಧಾ ಬೆಳವಾಡಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಶಿತಾ ಮಲ್ನಾಡ್‌, ನಿರೋಷಾ ಶೆಟ್ಟಿ, ದಿಶಾ ಕೃಷ್ಣಯ್ಯ ಅವರ ಸಂಭಾಷಣೆ ಗಿಳಿಪಾಠ ಒಪ್ಪಿಸಿದಂತಿದೆ. ಜಬೇಜ್‌ ಕೆ. ಗಣೇಶ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ. ಹೇಮಂತ್‌ಕುಮಾರ್‌ ಸಂಗೀತ ಸಂಯೋಜನೆಯ ‘ಆಡಿಸಿ ನೋಡೂ ಬೀಳಿಸಿ ನೋಡೂ...’ ಹಾಡು ಕೇಳಲು ಇಂಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.