ADVERTISEMENT

‘ಎಎಂಬಿ’ಯಲ್ಲಿ ‘2.0’ ಮೊದಲ ಪ್ರದರ್ಶನ!

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:30 IST
Last Updated 19 ನವೆಂಬರ್ 2018, 19:30 IST
ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನ ಒಳಾಂಗಣ ವಿನ್ಯಾಸ
ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನ ಒಳಾಂಗಣ ವಿನ್ಯಾಸ   

ಟಾಲಿವುಡ್‌ನ ಪ್ರಿನ್ಸ್‌ ಎಂದೇ ಖ್ಯಾತರಾದ ನಟ ಮಹೇಶ್ ಬಾಬು, ನಟನೆಯ ಜೊತೆಗೆ ಇಷ್ಟು ದಿನ ರಿಯಲ್‌ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇವುಗಳೆರಡರ ಜೊತೆಗೆ ಅವರು ಮಲ್ಟಿಪ್ಲೆಕ್ಸ್‌ ಸಿನಿಮಾ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.

ಹೈದರಾಬಾದ್‌ನ ಗಚಿಬೌಲಿ ಪ್ರದೇಶದಲ್ಲಿ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್‌‌ ನಿರ್ಮಿಸಿದ್ದಾರೆ. ಆಂಧ್ರಪ್ರದೇಶದ ಸಿನಿಮಾ ವಿತರಣಾ ಸಂಸ್ಥೆಗಳ ಪೈಕಿ ಒಂದಾಗಿರುವ ಏಷ್ಯನ್ ಸಿನಿಮಾಸ್ ಜೊತೆಗೂಡಿ ಎಎಂಬಿ ಸಿನಿಮಾಸ್ ನಿರ್ಮಿಸಿದ್ದಾರೆ ಮಹೇಶ್.

ಅಂದಹಾಗೇ ‘ಎಎಂಬಿ ಸಿನಿಮಾ’ ಅಂದರೆ ಏಷ್ಯನ್ ಮಹೇಶ್ ಬಾಬು ಸಿನಿಮಾಸ್ ಎಂಬ ಮಾತುಗಳು ಟಾಲಿವುಡ್‌ನ ಅಂಗಳದಲ್ಲಿ ಕೇಳಿಬಂದಿದ್ದು, ಈ ಬಗ್ಗೆ ಮಹೇಶ್ ಬಾಬು ಅಧಿಕೃತವಾಗಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಎಎಂಬಿ ಸಿನಿಮಾಸ್ ಅನ್ನು ಬಹುಕೋಟಿ ವೆಚ್ಚದಲ್ಲಿ ವೈಭವಪೂರಿತವಾಗಿ ನಿರ್ಮಿಸಲಾಗಿದೆ. ಈ ಮಲ್ಟಿಪ್ಲೆಕ್ಸ್‌‌ನಲ್ಲಿ ಮೊದಲ ಬಾರಿಗೆ ತೆರೆ ಕಾಣುವ ಸಿನಿಮಾದ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.

ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಹಾಗೂ ಅಮೀರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ ಪ್ರದರ್ಶನದ ಮೂಲಕವೇ ‘ಎಎಂಬಿ ಸಿನಿಮಾಸ್’ ಪ್ರಾರಂಭಿಸಲು ಈ ಹಿಂದೆ ಮಹೇಶ್ ನಿರ್ಧರಿಸಿದ್ದರಂತೆ. ಆದರೆ, ಅಮೀರ್ ಖಾನ್ ಬ್ಯುಸಿಯಾಗಿದ್ದರಿಂದ ಆ ನಿರ್ಧಾರಕ್ಕೆ ತಡೆಬಿದ್ದಿತ್ತು.

ಹೀಗಾಗಿ, ಭಾರಿ ದೃಶ್ಯದೌತಣ ಉಣಬಡಿಸುವ ಮೂಲಕ ಎಎಂಬಿಗೆ ತನ್ನ ಅಭಿಮಾನಿಗಳನ್ನು ಸ್ವಾಗತಿಸಲು ಮಹೇಶ್ ಬಾಬು ಸಿದ್ಧರಾಗಿದ್ದಾರಂತೆ. ನಟರಾದ ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ‘2.0’ ಸಿನಿಮಾ ಪ್ರದರ್ಶನದ ಮೂಲಕ ಎಎಂಬಿ ಸಿನಿಮಾಸ್ ಉದ್ಘಾಟಿಸಲು ನಿರ್ಧರಿಸಿದ್ದಾರಂತೆ. ಉದ್ಘಾಟಕರಾಗಿ ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ‘2.0’ ಡಿಸೆಂಬರ್ 29ಕ್ಕೆ ತೆರೆಕಾಣಲಿದ್ದು, ಎಎಂಬಿ ಉದ್ಘಾಟನೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ, ‘ಎಎಂಬಿ ಸಿನಿಮಾಸ್‌’ ಕಟ್ಟಡದ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸದ ಚಿತ್ರಗಳು ವೈರಲ್ ಆಗಿವೆ. ಇದೇ ಮಾದರಿಯ ಮಲ್ಟಿಪ್ಲೆಕ್ಸ್‌‌ಗಳನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸುಮಾರು 20 ಕಡೆ ನಿರ್ಮಿಸಲು ಮಹೇಶ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಮಹೇಶ್ ಬಾಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.