ADVERTISEMENT

ಆಸಿಂಕೋಜಿಲ್ಲ ಟೈಟಲ್‌ ಅನಾವರಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 10:45 IST
Last Updated 24 ಏಪ್ರಿಲ್ 2019, 10:45 IST
ಭಾನುಪ್ರಿಯಾ ಶೆಟ್ಟಿ
ಭಾನುಪ್ರಿಯಾ ಶೆಟ್ಟಿ   

‘ಆಸಿಂಕೋಜಿಲ್ಲ'– ಈ ಪದದ ಅರ್ಥ ತಿಳಿಯಲು ಅಲ್ಲಿದ್ದವರು ಮೆದುಳಿಗೆ ಕರಸತ್ತು ನೀಡಿದ್ದರು. ವೇದಿಕೆ ಏರಿದ ಚಿತ್ರದ ನಟ, ನಟಿಯರು ತಮಗೆ ಚಿತ್ರದ ಟೈಟಲ್ ಕೂಡ ಗೊತ್ತಿರಲಿಲ್ಲ ಎಂದಾಗ ನೆರೆದಿದ್ದವರದು ತಬ್ಬಿಬ್ಬುಗೊಳ್ಳುವ ಸರದಿ.

ನಿರ್ದೇಶಕ ಶಮನ್ ಕಥೆಯ ಬಗ್ಗೆ ಗುಟ್ಟು ಕಾಯ್ದುಕೊಂಡು ಕುತೂಹಲ‌ ಮೂಡಿಸಿದರು. ‘ಆಸಿಂಕೋಜಿಲ್ಲ’ದ ಅರ್ಥ ಕೇಳಿದಾಗ ‘ಇದು ನಾವು ಕನ್ನಡಕ್ಕೆ ನೀಡುತ್ತಿರುವ ಹೊಸ ಪದ. ಅದಕ್ಕೆ ಚಿತ್ರ ನೋಡಿದಾಗಲಷ್ಟೇ ಉತ್ತರ ಸಿಗಲಿದೆ’ ಎಂದು ರಹಸ್ಯ ಕಾಯ್ದುಕೊಂಡರು. ಸಿನಿಮಾದಲ್ಲಿ ನಟಿಸಿದವರಿಗೂ ಕಥೆಯ ಎಳೆಯನ್ನು ಬಿಟ್ಟುಕೊಡದಂತೆ ಕಟ್ಟಪ್ಪಣೆ ವಿಧಿಸಿದ್ದರು. ಹಾಗಾಗಿ, ತಮ್ಮ ಪಾತ್ರದ ಬಗ್ಗೆ ಹೇಳಲೂ ನಟ, ನಟಿಯರು ಹಿಂದೇಟು ಹಾಕಿದರು.

‘ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳಿಂದ ವಿಜ್ಞಾನಿಯೊಬ್ಬನಿಗೆ ಬೇಸರವಾಗುತ್ತದೆ. ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವುದು ಅವನ ಆಸೆ. ಹಾಗಾಗಿ, ಕಾಡಿಗೆ ಹೋಗಿ ಹೊಸ ಪ್ರಯೋಗಕ್ಕೆ ಮುಂದಾಗುತ್ತಾನೆ. ಅವನ ತಿಳಿವಳಿಕೆಗೂ ನಿಲುಕದ ಜೀವಿಯೊಂದು ಸೃಷ್ಟಿಯಾಗುತ್ತದೆ. ಅದೇ ಆಸಿಂಕೋಜಿಲ್ಲ’ ಎಂದು ವಿವರಿಸಿದರು ಶಮನ್.

ADVERTISEMENT

ವಿಜ್ಞಾನಿಯ ಜೊತೆಗೆ ನಾಲ್ವರು ಸ್ನೇಹಿತರು ಸೇರಿಕೊಳ್ಳುತ್ತಾರಂತೆ. ಅವರು ಕಾಡಿನಲ್ಲಿ ಯಾವ ಸಮಸ್ಯೆಗೆ ಸಿಲುಕುತ್ತಾರೆ. ಆ ಸಮಸ್ಯೆಯ ಸುಳಿಯಿಂದ ಹೇಗೆ ಹೊರಬರುತ್ತಾರೆ ಎಂಬುದೇ ಚಿತ್ರದ ತಿರುಳು. ಬೆಂಗಳೂರು, ಶಿವಮೊಗ್ಗ, ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.

ಮಂಜುನಾಥ್ ಕೆ.ಸಿ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಸೋಮಶೇಖರ್ ಶೆಟ್ಟಿ ಆರ್ಥಿಕ ಇಂಧನ ಒದಗಿಸಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು, ಅಮೋಘವರ್ಷ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮಂಜುನಾಥ ಹೆಗಡೆ ಅವರದ್ದು.

ವಿಷ್ಣುತೇಜ, ಪ್ರಶಾಂತ್, ತಾರಕ್ ರಾಜ್, ಸೋನಂ ರಾಯ್, ಭಾನುಪ್ರಿಯಾ ಶೆಟ್ಟಿ, ಮೇಘಶ್ರೀ ಹಾಗೂ ರಕ್ಷಿಕಾ ನಟಿಸಿದ್ದಾರೆ. ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿರ್ಮಾಪಕ ಭಾ.ಮ. ಹರೀಶ್ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಿದರು. ನಟ ಸುಮಂತ್ ಶೈಲೇಂದ್ರ ಟ್ರೇಲರ್‌ಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.