ADVERTISEMENT

‘ಅವೆಂಜರ್ಸ್‌’ಗೆ ರಜನಿ ರೋಬೊ ಪ್ರೇರಣೆಯಂತೆ!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 6:31 IST
Last Updated 4 ಏಪ್ರಿಲ್ 2019, 6:31 IST
‘ಎಂಥಿರನ್‌’ನಲ್ಲಿ ರಜನಿಕಾಂತ್‌, ಐಶ್ವರ್ಯಾ ರೈ ಬಚ್ಚನ್‌
‘ಎಂಥಿರನ್‌’ನಲ್ಲಿ ರಜನಿಕಾಂತ್‌, ಐಶ್ವರ್ಯಾ ರೈ ಬಚ್ಚನ್‌   

ರಜನಿಕಾಂತ್‌–ಐಶ್ವರ್ಯಾ ರೈ ಬಚ್ಚನ್‌ ಜೋಡಿ ರೋಬೊಗಳಾಗಿ ನಟಿಸಿದ ಆ್ಯಕ್ಷನ್ ಥ್ರಿಲ್ಲರ್‌ಚಿತ್ರ ‘ರೋಬೊ’ ಹಾಲಿವುಡ್‌ ನಿರ್ದೇಶಕರನ್ನೂ ಸೆಳೆದಿದೆ ಎಂದರೆ ನಂಬುತ್ತೀರಾ?ಅತ್ಯಂತ ಕುತೂಹಲ ಹುಟ್ಟಿಸಿರುವ ಇಂಗ್ಲಿಷ್‌ ಸರಣಿ ‘ಅವೆಂಜರ್ಸ್‌ ಎಂಡ್‌ಗೇಮ್‌’ನ ಸಹ ನಿರ್ದೇಶಕ ಜೋ ರಸ್ಸೊ ಮಾತನ್ನು ಕೇಳಿದರೆ ಈ ಮಾತನ್ನು ನಂಬಲೇಬೇಕು.

ತಮಿಳಿನಲ್ಲಿ ‘ಎಂಥಿರನ್‌’ ಶೀರ್ಷಿಕೆಯಲ್ಲಿ ತೆರೆಕಂಡ ಸೂಪರ್‌ ಹಿಟ್‌ ಚಿತ್ರ ‘ರೋಬೊ’ದಿಂದ ಪ್ರೇರಣೆ ಪಡೆದು ತಮ್ಮ ಸೂಪರ್‌ಮ್ಯಾನ್‌ ಸರಣಿಯ ಕೊನೆಯ ಆವೃತ್ತಿಯ ಕತೆ ಹೆಣೆದಿರುವುದಾಗಿ ರಸ್ಸೊ ಹೇಳಿಕೊಂಡಿದ್ದಾರೆ!

ಆ್ಯಂಟನಿ ಮತ್ತು ರಸ್ಸೊ ನಿರ್ದೇಶನದಲ್ಲಿಮಾರ್ವೆಲ್‌ ಸ್ಟುಡಿಯೋಸ್‌ ನಿರ್ಮಿಸಿರುವ ‘ಅವೆಂಜರ್ಸ್‌ ಎಂಡ್‌ಗೇಮ್‌’ಇದೇ 26ರಂದು ಬಿಡುಗಡೆಯಾಗಲಿದೆ. ಸರಣಿಯ ನಿರ್ದೇಶಕ ಜೋ ರಸ್ಸೊ ಭಾರತದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಪ್ರಚಾರ ಕಾರ್ಯದ ವೇಳೆ ಅವರು ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ADVERTISEMENT

‘ಅವೆಂಜರ್ಸ್‌ ಎಂಡ್‌ಗೇಮ್‌’ ಏಕಕಾಲಕ್ಕೆ ಜಗತ್ತಿನಾದ್ಯಂತ ತೆರೆಗೆ ಬರಲಿದೆ. ರಾಬರ್ಟ್‌ ಡೌನೆ ಜೂನಿಯರ್‌, ಕ್ರಿಸ್‌ ಇವಾನ್ಸ್‌, ಮಾರ್ಕ್‌ ರಫೆಲೊ, ಕ್ರಿಸ್‌ ಹೆಮ್ಸ್‌ವರ್ತ್‌ ಮತ್ತು ಸ್ಕಾರ್ಲೆಟ್‌ ಜೊಹಾನ್ಸನ್‌ ಅವರು ಈ ಸರಣಿಯ ಕೊನೆಯ ಆವೃತ್ತಿಯಲ್ಲಿ ಮುಖ್ಯಪಾತ್ರಗಳನ್ನು ಮಾಡಿದ್ದಾರೆ.

‘ರೋಬೊ ನೋಡಿದಾಗಿನಿಂದಲೂ ನನ್ನನ್ನು ಆವರಿಸಿಕೊಂಡಿತ್ತು. ಅದರ ಪ್ರೇರಣೆಯಿಂದಲೇ ನನ್ನ ಸರಣಿಯ ಕ್ಲೈಮ್ಯಾಕ್ಸ್‌ ವಿನ್ಯಾಸಗೊಳಿಸಿದೆ. ಅವೆಂಜರ್ಸ್‌: ಏಜ್‌ ಆಫ್‌ ಅಲ್ಟ್ರಾನ್‌ ಎಂಬ ಹೆಸರಿನ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲಾ ಸಣ್ಣ ಅಲ್ಟ್ರಾನ್‌ಗಳು ಸೇರಿ ದೊಡ್ಡ ಅಲ್ಟ್ರಾನ್‌ ರೂಪುಗೊಳ್ಳುವ ದೃಶ್ಯಕ್ಕೆ ‘ರೋಬೊ’ ಸಿನಿಮಾವೇ ಸ್ಫೂರ್ತಿ’ ಎಂದು ರಸ್ಸೊ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗವನ್ನು ಬಹಳ ಕುತೂಹಲದಿಂದ ಗಮನಿಸುತ್ತಿರುತ್ತಾರೆ ರಸ್ಸೊ. ಸಲ್ಮಾನ್‌ ಖಾನ್‌ ನಟನೆಯ ‘ದಭಾಂಗ್‌’ ಸರಣಿಯನ್ನೂ ಅವರು ನೋಡಿದ್ದಾರಂತೆ. ದಭಾಂಗ್‌ನ ಎರಡೂ ಚಿತ್ರಗಳಲ್ಲಿ ಬಳಕೆಯಾಗಿರುವ ಕ್ಯಾಮೆರಾ ಕೌಶಲಕ್ಕೆ ಶಿರಬಾಗಿ ನಮಿಸುವುದಾಗಿಯೂ ರಸ್ಸೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.