ADVERTISEMENT

ಕಷ್ಟದ ಮಳೆಯಲ್ಲಿ ಕಲ್ಲಾದ ಆಯುಷ್ಮಾನ್

ವಿಶಾಖ ಎನ್.
Published 5 ನವೆಂಬರ್ 2018, 19:30 IST
Last Updated 5 ನವೆಂಬರ್ 2018, 19:30 IST
ಆಯುಷ್ಮಾನ್ ಖುರಾನಾ
ಆಯುಷ್ಮಾನ್ ಖುರಾನಾ   

ಸೆಪ್ಟೆಂಬರ್ 14 ಆಯುಷ್ಮಾನ್ ಖುರಾನಾ ಜನ್ಮದಿನ. ಬಾಲ್ಯದಿಂದಲೇ ಇಷ್ಟಪಟ್ಟ ಹುಡುಗಿ ತಾಹಿರಾ ಕಶ್ಯಪ್ ಈಗ ಅವರ ಮಡದಿ. ಈ ವರ್ಷ ಆ ದಿನ ಇಬ್ಬರೂ ಆಸ್ಪತ್ರೆಗೆ ಹೋದರು. ತಾಹಿರಾ ಪರೀಕ್ಷೆಗೆ ಒಳಪಡಬೇಕಾಯಿತು. ವೈದ್ಯರ ಎದುರಲ್ಲಿ ಕುಳಿತಾಗ, ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು. ‘ಜೀರೊ ಸ್ಟೇಜ್ ಕ್ಯಾನ್ಸರ್’ ಅದು. ಶಸ್ತ್ರಚಿಕಿತ್ಸೆಯಿಂದ ಗುಣಮುಖವಾಗಬಹುದು ಎಂಬ ಭರವಸೆಯೂ ವೈದ್ಯರಿಂದ ಸಿಕ್ಕಿತು.

ತಕ್ಷಣ ತಾಹಿರಾಗೆ ಸಣ್ಣ ಸಂಕಟ. ಅದಕ್ಕಿಂತ ಹೆಚ್ಚು ಆತಂಕದ ನಿರಿಗೆಗಳು ಆಯುಷ್ಮಾನ್ ಮುಖದಲ್ಲಿ. ಇಬ್ಬರೂ ಹತ್ತು ಹದಿನೈದು ನಿಮಿಷ ಕೈ ಕೈ ಹಿಡಿದು ಮಾತನಾಡಿದರು. ‘ಆರೋಗ್ಯದ ಸಮಸ್ಯೆ ಎದುರಾಗಿದೆ. ಅದಕ್ಕೆ ಅಳುತ್ತಾ ಇದ್ದರೆ ಪ್ರಯೋಜನವಿಲ್ಲ. ಮನೆಯಲ್ಲಿ ಎರಡು ಪುಟ್ಟ ಮಕ್ಕಳಿವೆ–ಆರು ವರ್ಷದ ಮಗಳು ವಿರಾಜ್‌ವೀರ್, ನಾಲ್ಕು ವರ್ಷದ ಮಗ ವರುಷ್ಕಾ. ಅವರ ಎದುರು ಗೋಳು ಸುರಿದುಕೊಂಡು ಕೂತರೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿಬಿಡುತ್ತದೆ. ಮನೆಗೆ ಹೋಗುವಾಗ ನಗುನಗುತ್ತಲೇ ಹೆಜ್ಜೆ ಹಾಕಬೇಕು’– ಹೀಗೆ ಇಬ್ಬರೂ ಸಂಕಲ್ಪ ಮಾಡಿದರು.

ಬೆಳಿಗ್ಗೆ ವೈದ್ಯಕೀಯ ಪರೀಕ್ಷೆ ಕೊಟ್ಟ ಶಾಕ್‌ ಅನ್ನು ಸಂಜೆ ಹೊತ್ತಿಗೆ ಇಬ್ಬರೂ ಮರೆಯಬೇಕಿತ್ತು. ಸೀದಾ ‘ಮನ್‌ಮರ್ಜಿಯಾ’ ಹಿಂದಿ ಸಿನಿಮಾ ನೋಡಲು ಹೋದರು. ತನ್ನ ಅಮ್ಮನಿಗೊಂದು ಆಪರೇಷನ್ ಆಗುತ್ತದೆ ಎನ್ನುವುದೂ ಮಕ್ಕಳಿಗೆ ಬೇಗ ಗೊತ್ತಾಯಿತು. ವಕ್ಷಸ್ಥಳದಿಂದ ಹೊರಬಂದ ಎರಡು ಪೈಪ್‌ಗಳಿಗೆ ಸಿಕ್ಕಿಸಿದ ಕಂಟೇನರ್‌ಗಳಲ್ಲಿ ಇದ್ದ ಸ್ವಲ್ಪ ಪ್ರಮಾಣದ ರಕ್ತವನ್ನು ರೋಗಿಯ ಸಮವಸ್ತ್ರ ಧರಿಸಿದ್ದ ತಾಹಿರಾ ಇಡೀ ಜಗತ್ತಿಗೆ ತೋರಿಸಿದ್ದು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಾಕುವ ಮೂಲಕ. ರೋಗವನ್ನು ‘ಸಕಾರಾತ್ಮಕವಾಗಿ ಸ್ವೀಕರಿಸಿದ್ದರ ಫಲವಿದು’ ಎಂದು ಆಯುಷ್ಮಾನ್ ಹೇಳಿಕೊಂಡಿದ್ದರು.

ADVERTISEMENT

ಚಂಡೀಗಡದಲ್ಲಿ ಹುಟ್ಟಿದ ಆಯುಷ್ಮಾನ್ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಬೀದಿ ನಾಟಕಗಳನ್ನು ಆಡಿ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದವರು. ಎಂಟಿವಿ ‘ರೋಡೀಸ್‌’ನಲ್ಲಿ ವಿಜಯಿ ಆಗಿ ಹದಿನಾಲ್ಕು ವರ್ಷಗಳೇ ಸರಿದಿವೆ. ಟೀವಿ ನಿರೂಪಣೆ, ಸ್ವರ ಸಂಯೋಜನೆ, ಹಾಡುಗಾರಿಕೆ ಎಂದೆಲ್ಲ ಸಾಣೆಗೊಡ್ಡಿಕೊಂಡ ಈ ಬಹುಮುಖ ಪ್ರತಿಭೆಗೆ ಈಗೀಗ ನಟನಾಗಿ ಅದೃಷ್ಟ ಖುಲಾಯಿಸುತ್ತಿದೆ.

‘ವಿಕಿ ಡೋನರ್’ ಹಿಂದಿ ಸಿನಿಮಾ ತೆರೆಕಂಡು ಆರು ವರ್ಷಗಳೇ ಆದವು. ಆಮೇಲೆ ದೊಡ್ಡ ಮಟ್ಟದಲ್ಲಿ ಅವರು ಸದ್ದು ಮಾಡಲು ಆಗಿರಲಿಲ್ಲ. ಈಗ ‘ಅಂಧಾಧುನ್’ ಹಿಂದಿ ಸಿನಿಮಾ ಯಶಸ್ಸು ಒಂದು ಕಡೆ. ‘ಬಧಾಯಿ ಹೋ’ ಸಿನಿಮಾ ಭಾವತೀವ್ರ ಅನುಭವದ ಕಾರಣಕ್ಕೆ ಜನರನ್ನು ಆಕರ್ಷಿಸುತ್ತಿರುವುದು ಇನ್ನೊಂದು ಕಡೆ. ಹೀಗೆ ಸಂತಸದ ಕ್ಷಣಗಳು ಒದಗಿಬರುವ ಹೊತ್ತಿಗೇ ಪತ್ನಿಯ ಅನಾರೋಗ್ಯದ ಸಂಗತಿ ಅವರನ್ನು ಸಹಜವಾಗಿಯೇ ಬಾಧಿಸಿತು. ಕೆಲವೇ ವಾರಗಳಲ್ಲಿ ಅದರಿಂದ ಅವರು, ತಾಹಿರಾ ಇಬ್ಬರೂ ಹೊರಬಂದಿದ್ದಾರೆನ್ನುವುದು ಪ್ರೇರಕ ಸಂಗತಿ.

‘ನನ್ನಪ್ಪ (ಪಿ. ಖುರಾನಾ) ಜನರಿಗೆ ಭವಿಷ್ಯ ಹೇಳುತ್ತಿದ್ದರು. ಆದರೆ, ನಾನು ಹುಟ್ಟುವ ಮೊದಲು ಅಮ್ಮನಿಗೆ (ಪೂನಂ ಖುರಾನಾ) ಐದು ಸಲ ಅಬಾರ್ಷನ್‌ ಆಗಿತ್ತು. ಆ ಸಂಕಟಗಳನ್ನು ಮೀರಿ ನನಗೆ ಜನ್ಮವಿತ್ತಳು. ಆಮೇಲೆ ನನ್ನ ತಮ್ಮ (ಅಪಾರ್‌ಶಕ್ತಿ ಖುರಾನಾ) ಅಕಸ್ಮಾತ್ತಾಗಿ ಹುಟ್ಟಿದ. ಅಪ್ಪನ ಭವಿಷ್ಯದಲ್ಲಿ ಈ ಸಂಗತಿಗಳು ಗೊತ್ತೇ ಆಗಿರಲಿಲ್ಲ’ ಎಂದು ಆಯುಷ್ಮಾನ್ ಹಿಂದೊಮ್ಮೆ ತಮಾಷೆಯಾಗಿ ಹೇಳಿಕೊಂಡಿದ್ದರು. ಅಪಾರ್‌ಶಕ್ತಿ ಕೂಡ ಈಗ ನಟನಾಗಿ ಅದೃಷ್ಟ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

‘ಬಂದದ್ದೆಲ್ಲ ಬರಲಿ ಆ ದೇವನ ದಯೆಯೊಂದಿರಲಿ’ ಎಂದು ಸಾಮಾನ್ಯ ಭಕ್ತನಂತೆ ದೇವರ ಎದುರೂ ನಿಲ್ಲುವ ಆಯುಷ್ಮಾನ್, ತಾವು ಸೈಕಲ್ ಹೊಡೆದ ದಿನಗಳನ್ನು ಇನ್ನೂ ಮರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.