ADVERTISEMENT

ಬೆನ್‌ ಈಸ್‌ ಬ್ಯಾಕ್‌: 14ಕ್ಕೆ ಭಾರತದಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:00 IST
Last Updated 10 ಡಿಸೆಂಬರ್ 2018, 20:00 IST
ಜೂಲಿಯಾ ರಾಬರ್ಟ್ಸ್‌ ಮತ್ತು ಲುಕಾಸ್‌ ಹೆಜಸ್‌
ಜೂಲಿಯಾ ರಾಬರ್ಟ್ಸ್‌ ಮತ್ತು ಲುಕಾಸ್‌ ಹೆಜಸ್‌   

ಇಂಗ್ಲಿಷ್‌ ಸಿನಿಮಾ‌ಪ್ರಿಯರು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ‘ಬೆನ್‌ ಈಸ್ ಬ್ಯಾಕ್‌’ ಇದೇ 14ರಂದು ಭಾರತದಲ್ಲಿ ತೆರೆಕಾಣಲಿದೆ. ಯಶಸ್ವಿ ಚಿತ್ರಗಳ ನಿರ್ದೇಶಕರಾದ ಪೀಟರ್‌ ಸಿಂಪ್ಸನ್‌ ಹೆಜಸ್ ಚಿತ್ರಕತೆ, ನಿರ್ದೇಶನವಿರುವ ಈ ಚಿತ್ರವನ್ನು ಪಿವಿಆರ್ ಪಿಕ್ಚರ್ಸ್‌ ಬಿಡುಗಡೆ ಮಾಡಲಿದೆ.

ತಾಯಿ ಮತ್ತು ಮಗನ ನಡುವಿನ ಮನೋಜ್ಞ ಕತೆಯುಳ್ಳ ‘ಬೆನ್‌ ಈಸ್‌ ಬ್ಯಾಕ್‌’ ಚಿತ್ರದ ನಾಯಕ–ನಾಯಕಿಯೂ ಅವರೇ. ಅಮೆರಿಕದ ನಟಿ, ನಿರ್ಮಾಪಕಿ ಜೂಲಿಯಾ ರಾಬರ್ಟ್ಸ್‌ ತಾಯಿಯಾಗಿ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಲುಕಾಸ್‌ ಹೆಜಸ್‌ ಕಾಣಿಸಿಕೊಂಡಿದ್ದಾರೆ.

ಅಮೆರಿಕದಲ್ಲಿ, ಹಿಟ್‌ ಚಿತ್ರಗಳ ನಟಿ ಎಂದೇ ಗುರುತಿಸಿಕೊಂಡಿರುವ ಜೂಲಿಯಾ ನಟನೆ ಈ ಚಿತ್ರದ ಜೀವಾಳ ಎಂದು ಅಮೆರಿಕದ ಚಿತ್ರ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಲಿ ಬರ್ನ್ಸ್‌ ಎಂಬ ಹೆಸರಿನ ತಾಯಿಯ ಪಾತ್ರ ಮಾಡಿದ್ದಾರೆ ಜೂಲಿಯಾ.

ADVERTISEMENT

ಮಾದಕದ್ರವ್ಯ ವ್ಯಸನಿ ಮಗ ಬೆನ್‌ಗೆ ದುರ್ಘಟನೆಯೊಂದರಲ್ಲಿ ಸುಟ್ಟ ಗಾಯಗಳಾಗುವುದು ಮತ್ತು ಕ್ರಿಸ್ಮಸ್ ಹಿಂದಿನ ದಿನ ಅವನು ಮನೆಗೆ ಮರಳುವವರೆಗಿನ ಘಟನೆಗಳು ಚಿತ್ರದಲ್ಲಿವೆ. ಅಷ್ಟೂ ಘಟನೆಗಳು 24 ಗಂಟೆಯೊಳಗೆ ನಡೆದಿರುತ್ತವೆ. ಹಾಗಾಗಿ, ಒಂದೇ ದಿನದ ದಿನಚರಿಯನ್ನು ಸಿನಿಮಾವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನಬಹುದು.ನಿರ್ದೇಶಕ ಪೀಟರ್‌ ಸಿಂಪ್ಸನ್‌ ಹೆಜಸ್‌, ತಮ್ಮ ಸಿನಿಮಾಗಳ ಮೂಲಕ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿರುವ ಬಹುಮುಖಿ ಪ್ರತಿಭೆ. ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಕ್ಷೇತ್ರದಲ್ಲಿ ಪಳಗಿದವರು. ಅವರ ಪ್ರತಿಭೆಯನ್ನೆಲ್ಲ ಎರಡಕ ಹೊಯ್ದಂತೆ ಮೂಡಿಬಂದಿದೆ ‘ಬೆನ್‌ ಈಸ್‌ ಬ್ಯಾಕ್‌’ ಎಂದು ವಿಮರ್ಶಕರು ಹೊಗಳಿದ್ದಾರೆ. ಚಿತ್ರದ ಪ್ರಮುಖ ಪಾತ್ರ ಬೆನ್‌ ಆಗಿ ನಟಿಸಿರುವ ಲುಕಾಸ್‌ ಹೆಜಸ್‌, ಪೀಟರ್‌ ಮಗನೇ.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಟೊರಾಂಟೊ ಚಲನಚಿತ್ರೋತ್ಸವದಲ್ಲಿ ಜಾಗತಿಕ ಪ್ರದರ್ಶನ ಕಂಡಾಗಲೇ ಚಿತ್ರದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಭಾರತದಲ್ಲಿ ಕೂಡಾ ‘ಬೆನ್‌ ಈಸ್‌ ಬ್ಯಾಕ್‌’ ಉತ್ತಮ ಗಳಿಕೆ ಮಾಡಲಿದೆ ಎಂಬುದು ಪಿವಿಆರ್‌ ಪಿಕ್ಚರ್ಸ್‌ ಆಶಯ. ಇದೇ ಡಿಸೆಂಬರ್‌ ಎಂಟರಂದು ವಿಶ್ವದ ವಿವಿಧ ಭಾಗಗಳಲ್ಲಿ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.