ADVERTISEMENT

ಇರಾನಿನಿಂದ ಬಂದ ಬಾಲಿವುಡ್‌ ಪ್ರೇಮಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 11:56 IST
Last Updated 3 ಏಪ್ರಿಲ್ 2020, 11:56 IST
ಸಜ್ಜಾದ್ ಡಲಾಫ್ರೂಜ್
ಸಜ್ಜಾದ್ ಡಲಾಫ್ರೂಜ್    

ನಟನೆಯ ಕಡೆ ಪ್ರೀತಿ ಬೆಳೆಸಿಕೊಳ್ಳುವುದಕ್ಕೂ ಮೊದಲೇ ತಾವು ಬಾಲಿವುಡ್ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾಗಿ ಹೇಳುತ್ತಾರೆ ಇರಾನಿ ನಟ ಸಜ್ಜದ್ ಡೆಲಾಫ್ರೂಜ್. ‘ನನಗೆ ಒಳ್ಳೆಯ ‍ಪಾತ್ರಗಳು, ಒಳ್ಳೆಯ ಕೆಲಸ ಸಿಗುತ್ತಿರುವಷ್ಟು ಕಾಲ ನಾನು ನನ್ನ ಬಗ್ಗೆ ಯಾರು ಏನು ಅಂದುಕೊಳ್ಳುತ್ತಾರೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ’ ಎನ್ನುವ ಮಾತು ಹೇಳುತ್ತಾರೆ.

ಅಕ್ಷಯ್ ಕುಮಾರ್ ಅಭಿನಯದ ‘ಬೇಬಿ’ ಚಿತ್ರದಲ್ಲಿ ಸಜ್ಜದ್ ಅವರು ಮೊದಲು ಕಾಣಿಸಿಕೊಂಡರು. ಇದರಲ್ಲಿ ಅವರು ವೈದ್ಯನ ಪಾತ್ರ ನಿಭಾಯಿಸಿದ್ದರು. ನಂತರ, ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಹಾಗೂ ನೀರಜ್ ಪಾಂಡೆ ನಿರ್ದೇಶನದ ‘ಸ್ಪೆಷಲ್ ಆಪ್ಸ್’ ವೆಬ್ ಸರಣಿಯಲ್ಲಿ ಸಜ್ಜದ್ ಅವರು ಖಳನಾಗಿ ಕಾಣಿಸಿಕೊಂಡರು.

‘ನನ್ನ ಅಭಿನಯದ ಬಗ್ಗೆ ಕೆಲವರು ತೀರ್ಮಾನ ಮಾಡಿರುವಂತಿದೆ. ಇದು ನನ್ನಂತೆಯೇ ಹಲವು ನಟರ ಜೀವನದಲ್ಲಿ ಆಗುತ್ತದೆ. ನನ್ನ ಗಮನ ಈಗ ಇರುವುದು ಚೆನ್ನಾಗಿ ಕೆಲಸ ಮಾಡುವುದರತ್ತ. ಚೆನ್ನಾಗಿ ಕೆಲಸ ಮಾಡುವುದರ ಪರಿಣಾಮವಾಗಿ ಟೈಗರ್ ಜಿಂದಾ ಹೈನಲ್ಲಿ ಹಾಗೂ ಸ್ಪೆಷಲ್ ಆಪ್ಸ್‌ನಲ್ಲಿ ನನ್ನನ್ನು ಭಿನ್ನವಾಗಿ ಕಾಣಲು ಸಾಧ್ಯವಾಯಿತು. ನಾನು ಬಾಲಿವುಡ್‌ನಲ್ಲಿ ಬಾಳಬೇಕು, ಇದು ನನ್ನ ಗುರಿ’ ಎಂದು ಅವರು ಹೇಳುತ್ತಾರೆ.

ADVERTISEMENT

‘ಸ್ಪೆಷಲ್ ಆಪ್ಸ್‌ಗೆ ಸಿಕ್ಕಿರುವ ಸ್ಪಂದನ ತೀರಾ ಅನಿರೀಕ್ಷಿತ. ನೀರಜ್ ಪಾಂಡೆ ಅವರ ಜೊತೆ ಕೆಲಸ ಮಾಡಲು ನಾನು ಬಯಸಿದ್ದೆ. ಈಗ ನನ್ನ ಅಭಿನಯಕ್ಕೆ ಪ್ರಶಂಸೆ ಸಿಗುತ್ತಿದೆ’ ಎಂದು ಸಜ್ಜದ್ ಖುಷಿ ಹಂಚಿಕೊಂಡಿದ್ದಾರೆ. ಇರಾನ್‌ನಲ್ಲಿ ಜನಿಸಿದ ಸಜ್ಜದ್ ಅವರು ಶಾರ್ಜಾದಲ್ಲಿ ಭಾರತೀಯ ಸಮುದಾಯದ ನಡುವೆ ಬೆಳೆದವರು. ಹಿಂದಿ ಸಿನಿಮಾಗಳು ಹಾಗೂ ಸಂಗೀತದ ಕಡೆ ಸೆಳೆತ ಶುರುವಾಗಿದ್ದು ಆವಾಗ.

‘ನನಗೆ ಬಾಲಿವುಡ್ ಮೇಲೆ ಪ್ರೀತಿ ಇತ್ತು. ಹಾಗಾಗಿಯೇ ನಾನು ಭಾರತಕ್ಕೆ ಬರಲು ಬಯಸಿದ್ದೆ. ಸಾರ್ವಜನಿಕ ಸಂಪರ್ಕಾಧಿಕಾರಿಯ ಕೆಲಸ ನನಗೆ ಬೇಸರ ತರಿಸಿತು. ಹಾಗಾಗಿ, ಆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಬಾಲಿವುಡ್ ಕಡೆ ಮುಖ ಮಾಡಿದೆ. ಇಲ್ಲಿ ಒಂದು ಜಾಗ ಕಂಡುಕೊಳ್ಳಲು ನನಗೆ ಏಳು ವರ್ಷಗಳು ಬೇಕಾದವು’ ಎಂದು ಸಜ್ಜದ್ ತಮ್ಮ ಪಯಣ ನೆನಪಿಸಿಕೊಳ್ಳುತ್ತಾರೆ. ಸಜ್ಜದ್ ಅವರು ಪಾರ್ಸಿ, ಟರ್ಕಿಶ್, ಅರೇಬಿಕ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.