ADVERTISEMENT

ಮಾ.4ರವರೆಗೆ ಚಿತ್ರಸಂತೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 19:31 IST
Last Updated 12 ಫೆಬ್ರುವರಿ 2021, 19:31 IST

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 18ನೇ ಚಿತ್ರಸಂತೆಯು ಮಾ.4ರವರೆಗೆ ವಿಸ್ತರಣೆಯಾಗಿದೆ.

ಕೋವಿಡ್‌ ಕಾರಣ ಈ ಬಾರಿ ಚಿತ್ರಸಂತೆಯನ್ನು ಜ.3ರಿಂದ ಆನ್‌ಲೈನ್‌ ಮೂಲಕ ಆಯೋಜಿಸಿತ್ತು. ಪರಿಷತ್ತಿನ ವೆಬ್‌ ಪೋರ್ಟಲ್‌ ಜತೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ನಲ್ಲಿ ಕೂಡ ಕಲಾಕೃತಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ನೇರವಾಗಿ ಕಲಾವಿದರನ್ನು ಸಂಪರ್ಕಿಸಿ, ಕಲಾಕೃತಿಗಳನ್ನು ಖರೀದಿಸುವ ಅವಕಾಶವನ್ನೂ ಒದಗಿಸಲಾಗಿತ್ತು. ಈವರೆಗೆ ಆನ್‌ಲೈನ್‌ ವೇದಿಕೆಗಳಲ್ಲಿ ಒಟ್ಟು 11.39 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಚಿತ್ರಸಂತೆಗೆ ಆನ್‌ಲೈನ್‌ನಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಕಲಾವಿದರು ಇನ್ನಷ್ಟು ದಿನ ಪ್ರದರ್ಶನ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಮತ್ತೆ ಒಂದು ತಿಂಗಳು ಪ್ರದರ್ಶನ ವಿಸ್ತರಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ತಿಳಿಸಿದ್ದಾರೆ.

ಪರಿಷತ್ತಿನ 5 ಗ್ಯಾಲರಿಗಳ ಜತೆಗೆ ಕಲಾ ತರಗತಿಗಳ 10 ಕೊಠಡಿಗಳನ್ನೂ ಗ್ಯಾಲರಿಗಳನ್ನಾಗಿ ಪರಿವರ್ತಿಸಿ, ಅಲ್ಲಿಯೂ ದೇಶದ ಆಯ್ದ ಮತ್ತು ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಚಿತ್ರಸಂತೆಯಲ್ಲಿ 1,100 ಕಲಾವಿದರು ಭಾಗವಹಿಸಿದ್ದು, ಪ್ರತಿಯೊಬ್ಬರಿಗೂ ‍ಪ್ರತ್ಯೇಕ ಆನ್‌ಲೈನ್ ಪುಟಗಳನ್ನು ಮೀಸಲಿರಿಸಲಾಗಿತ್ತು. ನಮ್ಮ ನಿರೀಕ್ಷೆಗೂ ಮೀರಿ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.