ADVERTISEMENT

₹100 ಕೋಟಿ ಕ್ಲಬ್‌ ಸೇರಿದ ‘ಮುನಿರತ್ನ ಕುರುಕ್ಷೇತ್ರ’?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 7:41 IST
Last Updated 30 ಆಗಸ್ಟ್ 2019, 7:41 IST
   

‘ಮುನಿರತ್ನ ಕುರುಕ್ಷೇತ್ರ’ ದರ್ಶನ್‌ ನಟನೆಯ 50ನೇ ಚಿತ್ರ. ಅಂಬರೀಷ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ, ರವಿಶಂಕರ್, ಶ್ರೀನಿವಾಸಮೂರ್ತಿ, ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಕಲಾವಿದರ ದಂಡೇ ಇದ್ದ ಈ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡಿತ್ತು. 2ಡಿ ಮತ್ತು 3ಡಿ ರೂಪದಲ್ಲಿ ತೆರೆಕಂಡ ಈ ಚಿತ್ರ ಮೂರೇ ವಾರದಲ್ಲಿ ₹100 ಕೋಟಿ ಕ್ಲಬ್‌ ಸೇರಿದ ದಾಖಲೆ ಬರೆದಿದೆ.

ಈ ಕುರಿತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಡ್ಯದ ದರ್ಶನ್‌ ಸೇನಾ ಸಮಿತಿಯು ಸಿನಿಮಾವು ₹100 ಕೋಟಿ ಕ್ಲಬ್‌ ಸೇರಿದ ಬಗ್ಗೆ ತಯಾರಿಸಿದ ಕೇಕ್‌ ಅನ್ನು ದರ್ಶನ್‌ ಅವರೇ ಕತ್ತರಿಸಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಆ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಕುರುಕ್ಷೇತ್ರ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ತೆರೆಕಂಡಿತ್ತು. ಬಳಿಕ ಹಿಂದಿ, ತಮಿಳು ಮತ್ತು ಮಲಯಾಳದಲ್ಲಿ ಬಿಡುಗಡೆಗೊಂಡಿತು.

ADVERTISEMENT

ಯಶ್‌ ನಟನೆಯ ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರ ₹ 100 ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಚಿತ್ರ. ಈ ಸಿನಿಮಾವೂ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆಕಂಡಿತ್ತು.

‘ಮುನಿರತ್ನ ಕುರುಕ್ಷೇತ್ರ’ ಸಿನಿಮಾವೂ ಹೊಸ ದಾಖಲೆ ಬರೆಯುವತ್ತಾ ಸಾಗುತ್ತಿದ್ದು, ದರ್ಶನ್‌ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಆದರೆ, ಐದು ಭಾಷೆಯಲ್ಲಿ ಸಿನಿಮಾವನ್ನು ವಿತರಣೆ ಮಾಡಿರುವ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಚಿತ್ರದ ಗಳಿಕೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.