ADVERTISEMENT

‘ಗಿಫ್ಟ್ ಬಾಕ್ಸ್' ಕನವರಿಕೆಯಲ್ಲಿ ದೀಪ್ತಿ ಮೋಹನ್

ಸತೀಶ ಬೆಳ್ಳಕ್ಕಿ
Published 17 ಸೆಪ್ಟೆಂಬರ್ 2018, 12:21 IST
Last Updated 17 ಸೆಪ್ಟೆಂಬರ್ 2018, 12:21 IST
ದೀಪ್ತಿ ಮೋಹನ್‌
ದೀಪ್ತಿ ಮೋಹನ್‌   

ದೇಸಿ ಹಾಗೂ ಮಾಡರ್ನ್ ಲುಕ್ ಎರಡಕ್ಕೂ ಹೊಂದುವ ದೇಹಸಿರಿಯನ್ನು ಹೊಂದಿರುವ ನಟಿ ದೀಪ್ತಿ ಮೋಹನ್ ಈಗ ‘ಗಿಫ್ಟ್ ಬಾಕ್ಸ್'ನ ಕನವರಿಕೆಯಲ್ಲಿದ್ದಾರೆ. ವಿಶಿಷ್ಟ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದೀರಿ, ಚಿತ್ರಕ್ಕೆ ಆ ಶೀರ್ಷಿಕೆ ಇಟ್ಟಿರುವುದರ ಹಿಂದಿನ ಗುಟ್ಟೇನು? ಎಂದು ಕೇಳಿದರೆ, ‘ಅದು ಸಸ್ಪೆನ್ಸ್, ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು' ಎಂದು ನಕ್ಕರು ದೀಪ್ತಿ.

ಈ ಹಿಂದೆ ‘ಪಲ್ಲಟ' ಎಂಬ ಸಿನಿಮಾ ನಿರ್ದೇಶಿಸಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರಘು ಎಸ್.ಪಿ. ಅವರೇ ‘ಗಿಫ್ಟ್ ಬಾಕ್ಸ್' ಸಿನಿಮಾದ ನಿರ್ದೇಶಕರು. ಈ ಸಿನಿಮಾದಲ್ಲಿ ನಟಿ ದೀಪ್ತಿ ಮೋಹನ್ ‘ಲಾಕ್ಡ್ ಇನ್ ಸಿಂಡ್ರೋಮ್'ನಿಂದ ಬಳಲುವ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ‘‘ಗಿಫ್ಟ್‌ ಬಾಕ್ಸ್‌’ ಅದ್ಭುತ ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರಿಗೂ ಈ ಸಿನಿಮಾದಿಂದ ಉತ್ತಮ ಹೆಸರು, ಕೀರ್ತಿ ಬರುತ್ತದೆ’ ಎಂಬ ಆತ್ಮವಿಶ್ವಾಸ ವಕ್ತಪಡಿಸುತ್ತಾರೆ ದೀಪ್ತಿ.

‘‘ಈ ಸಿನಿಮಾದಲ್ಲಿನ ಲುಕ್ ಕುರಿತು ಈಗಲೇ ಗುಟ್ಟು ಬಿಟ್ಟುಕೊಡುವಂತಿಲ್ಲ. ಚಿತ್ರಕ್ಕಾಗಿ ಸ್ಪೆಶಲ್ ಮೇಕಪ್ ಬಳಕೆ ಮಾಡಲಾಗಿದೆ. ಈ ಚಿತ್ರದಲ್ಲಿ ನನ್ನನ್ನು ನೋಡಿದ ಪ್ರೇಕ್ಷಕರು ‘ಇವಳೇನಾ ದೀಪ್ತಿ ಮೋಹನ್' ಎಂದು ಶಾಕ್ ಆಗುತ್ತಾರೆ’’ ಎನ್ನುವ ಆರು ಅಡಿ ಎತ್ತರದ ಸೂಪರ್‌ ಮಾಡೆಲ್‌ ದೀಪ್ತಿ ‘ಗಿಫ್ಟ್ ಬಾಕ್ಸ್' ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಹೇಳಿದ್ದು ಹೀಗೆ:

ADVERTISEMENT

‘ಗಿಫ್ಟ್ ಬಾಕ್ಸ್ ಲವ್‌, ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ. ಲಾಕ್ಡ್ ಇನ್ ಸಿಂಡ್ರೋಮ್ ಆಧರಿಸಿಯೇ ಈ ಸಿನಿಮಾವನ್ನು ರೂಪಿಸಲಾಗಿದೆ. ಲಾಕ್ಡ್ ಇನ್ ಸಿಂಡ್ರೋಮ್ ಅಂದರೆ ನಾವು ಟ್ರಾಪ್ ಆದಹಾಗೆ. ಅಂದರೆ, ಆ ವ್ಯಕ್ತಿಗೆ ಎಲ್ಲರೂ ಮಾತನಾಡುವುದು ಕೇಳಿಸುತ್ತದೆ, ಅವರ ಚಲನವಲನಗಳು ತಿಳಿಯುತ್ತವೆ. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸಲು ಆಗುವುದಿಲ್ಲ. ‘ಗುಜಾರಿಶ್' ಸಿನಿಮಾದಲ್ಲಿ ಹೃತಿಕ್ ರೋಷನ್ ಅವರು ನಿರ್ವಹಿಸಿದಂತಹ ಪಾತ್ರ ಇದು. ಆದರೆ, ಆ ಸಿನಿಮಾದಲ್ಲಿ ಅವರು ಮಾತನಾಡುವುದಕ್ಕೆ ಸಾಧ್ಯ ಆಗುತ್ತಿತ್ತು. ಆದರೆ, ಲಾಕ್ಡ್ ಇನ್ ಸಿಂಡ್ರೋಮ್ ಇದ್ದವರಿಗೆ ಇಡೀ ದೇಹ ಶಕ್ತಿ ಕಳೆದುಕೊಂಡಿರುತ್ತದೆ. ಮಾತನಾಡುವುದಕ್ಕೂ ಆಗುವುದಿಲ್ಲ.

‘ಗಿಫ್ಟ್ ಬಾಕ್ಸ್' ಸಿನಿಮಾದಲ್ಲಿ ನನ್ನದು ಸವಾಲಿನ ಪಾತ್ರ. ಆ ಪಾತ್ರಕ್ಕೆ ನಾಲ್ಕೈದು ಛಾಯೆಗಳಿವೆ. ಈ ಸಿನಿಮಾದಲ್ಲಿ ನಾನು ಸುರಭಿ ಎನ್ನುವ ಪಾತ್ರ ನಿರ್ವಹಿಸಿದ್ದೇನೆ. ನಾನು ನಿರ್ವಹಿಸಿರುವ ಪಾತ್ರಕ್ಕೂ ನನ್ನ ನಿಜ ಜೀವನಕ್ಕೂ ತುಂಬ ಸಾಮ್ಯತೆ ಇದೆ. ನಾನು ಸದಾಕಾಲ ನನ್ನ ಮನಸ್ಸಿಗೆ ಇಷ್ಟವಾಗುವಂತೆ ಇರುತ್ತೇನೆ. ಅದೇರೀತಿಯ ಪಾತ್ರವನ್ನೇ ಈ ಸಿನಿಮಾದಲ್ಲೂ ಮಾಡಿದ್ದೇನೆ. ಹಾಗಾಗಿ, ಈ ಕ್ಯಾರೆಕ್ಟರ್‌ಗೆ ನಾನು ತುಂಬ ರಿಲೇಟ್ ಮಾಡಿಕೊಳ್ಳುತ್ತೇನೆ. ಬಿಂದಾಸ್ ಆಗಿದ್ದ ಸುರಭಿ, ಲಾಕ್ಡ್ ಇನ್ ಸಿಂಡ್ರೋಮ್‌ಗೆ ತುತ್ತಾದ ನಂತರ ಅವಳ ಬದುಕು ಹೇಗೆ ಬದಲಾಗುತ್ತದೆ. ಒಬ್ಬ ಮಗಳಾಗಿ, ಫ್ರೆಂಡ್ ಆಗಿ, ಲವರ್ ಆಗಿ ಸುರಭಿ ಹೇಗಿದ್ದಳು, ಆನಂತರ ಹೇಗಾದಳು ಎಂಬುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಮೇಕಪ್ ಮ್ಯಾನ್ ಉಮಾ ಮಹೇಶ್ವರ್ ಅವರು ನನ್ನ ಪಾತ್ರಕ್ಕೆ ಒಂದೊಳ್ಳೆ ಲುಕ್ ಕೊಟ್ಟಿದ್ದಾರೆ. ಒಟ್ಟಾರೆಯಾಗಿ, ನನ್ನ ಪಾತ್ರ ತುಂಬ ಇಂಟರೆಸ್ಟಿಂಗ್ ಆಗಿದೆ'.

‘ಗಿಫ್ಟ್ ಬಾಕ್ಸ್' ಚಿತ್ರದಲ್ಲಿ ಗಿಫ್ಟ್ ಬಾಕ್ಸ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರ ಸುತ್ತಲೇ ಕತೆ ಹರಡಿಕೊಂಡಿದೆ. ಚಿತ್ರದಲ್ಲಿ ಸಸ್ಪೆನ್ಸ್, ಲವ್ ಜತೆಗೆ ಸಾಮಾಜಿಕ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಾಗಿದೆಯಂತೆ. ರಾಷ್ಟ್ರ ಪ್ರಶಸ್ತಿ ವಿಜೇತರಾದ ಮಹಾವೀರ್ ಸಾಬಣ್ಣನವರ್ ಅವರು ಈ ಸಿನಿಮಾಕ್ಕೆ ‘ಸಿಂಕ್ ಸೌಂಡ್ ಟೆಕ್ನಾಲಜಿ’ ಮಾಡಿದ್ದಾರೆ. ಇಂತಹದ್ದೊಂದು ಹೊಸ ತಂತ್ರಜ್ಞಾನದೊಂದಿಗೆ ಕೆಲಸ ಮಾಡಿದ್ದು ಕೂಡ ದೀಪ್ತಿಗೆ ಕೂಡ ಹೊಸ ಅನುಭವ ನೀಡಿದೆಯಂತೆ.

ಅಂದಹಾಗೆ, ‘ಗಿಫ್ಟ್ ಬಾಕ್ಸ್' ಸಿನಿಮಾಕ್ಕೆ ವಾಸು ದೀಕ್ಷಿತ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಹ ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದೀಪ್ತಿ ಮೋಹನ್ ಎಂಜಿಅರ್ ಮೊಮ್ಮಗನ ಜತೆಗೆ ತಮಿಳು ಚಿತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಪರಿಣಾಮಕಾರಿ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾವಂತೆ. ಲವ್ ಸ್ಟೋರಿ ಜತೆಗೆ ಜಲ್ಲಿಕಟ್ಟು ಕ್ರೀಡೆಯನ್ನು ಮೇಳೈಸಿ ರೂಪುಗೊಳ್ಳುತ್ತಿರುವ ಸಿನಿಮಾ ಬಗ್ಗೆಯೂ ಅವರಿಗೆ ಅಪಾರ ನಿರೀಕ್ಷೆಗಳಿವೆ.

‘ನಾನು ಇಲ್ಲಿಯವರೆಗೆ ನಟಿಸಿರುವ ಎಲ್ಲ ಸಿನಿಮಾಗಳಿಗಿಂತಲೂ ಗಿಫ್ಟ್ ಬಾಕ್ಸ್ ಚಿತ್ರ ತುಂಬ ವಿಭಿನ್ನ ಚಿತ್ರ. ಈ ಸಿನಿಮಾ ಚಿತ್ರದ ಎಲ್ಲ ಕಲಾವಿದರಿಗೂ ಒಂದು ಬೆಂಜ್ ಮಾರ್ಕ್ ಸೆಟ್ ಮಾಡುತ್ತದೆ’ ಎಂದು ಹೇಳುವಾಗ ದೀಪ್ತಿ ಮಾತುಗಳಲ್ಲಿ ಆತ್ಮವಿಶ್ವಾಸ ಪುಟಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.