ADVERTISEMENT

ಡಿಫರೆಂಟ್ ದೇವಯಾನಿ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 12:39 IST
Last Updated 17 ಮಾರ್ಚ್ 2019, 12:39 IST
ಅರ್ಚನಾ
ಅರ್ಚನಾ   

ಪರಕಾರ ಪ್ರವೇಶ ಎಂಬುದು ಮನುಷ್ಯನನ್ನು ಬಹು ಹಿಂದಿನಿಂದಲೂ ಕಾಡುತ್ತ ಬಂದಿರುವ ವಿಷಯ. ಸಿನಿಮಾ ಮಂದಿಯನ್ನು ಅದು ಕಾಡಿದೆ. ಕಾಡುತ್ತಲೇ ಇದೆ. ಹಾಗಾಗಿಯೇ ನಿರ್ದೇಶಕ ಕಸ್ತೂರಿ ಜಗನ್ನಾಥ್ ಅವರು ಪರಕಾಯ ಪ್ರವೇಶದ ಪರಿಕಲ್ಪನೆ ಇಟ್ಟುಕೊಂಡು ‘ದೇವಯಾನಿ’ ಎನ್ನುವ ಸಿನಿಮಾ ಮಾಡಿದ್ದಾರೆ.

ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಇದರಲ್ಲಿ ಪರಕಾಯ ಪ್ರವೇಶ ಮಾತ್ರವಲ್ಲದೆ, ಆತ್ಮಗಳ ಕುರಿತ ಉಲ್ಲೇಖವೂ ಇದೆ. ಈ ಚಿತ್ರದ ನಾಯಕ ನಟ ಪರಕಾಯ ಪ್ರವೇಶದ ಬಗ್ಗೆ ಪಿಎಚ್‌.ಡಿ ಮಾಡುತ್ತಿರುತ್ತಾನೆ. ನಾಯಕನೇ ಆತ್ಮವಾಗಿ ಬರುವ ಸಂದರ್ಭಗಳೂ ಇದರಲ್ಲಿ ಇವೆ’ ಎಂದರು ಜಗನ್ನಾಥ್. ನಾಯಕನ ಪಾತ್ರ ನಿಭಾಯಿಸಿದವರು ಗೋಪಿಕೃಷ್ಣ.

ಬೆಂಗಳೂರು ಮತ್ತು ದೇವನಹಳ್ಳಿಯಲ್ಲಿ ಇದರ ಚಿತ್ರೀಕರಣ ನಡೆದಿದೆ. ಈ ಚಿತ್ರವನ್ನು ಮುಂದೆ ತೆಲುಗಿಗೆ ಡಬ್ ಮಾಡುವ ಉದ್ದೇಶ ಕೂಡ ಚಿತ್ರತಂಡಕ್ಕೆ ಇದೆ.

ADVERTISEMENT

ದೇವಯಾನಿ ಎಂಬುದು ಚಿತ್ರದಲ್ಲಿ ಬರುವ ಒಂದು ಪಾತ್ರದ ಹೆಸರು ಕೂಡ ಹೌದು. ಎರಡು ಹಾಡುಗಳು, ನಾಲ್ಕು ಫೈಟ್‌ ದೃಶ್ಯಗಳು ಚಿತ್ರದಲ್ಲಿವೆ. ‘ಕೆಟ್ಟದ್ದು ಮಾಡಿದವನನ್ನು ಸಾಯಿಸುವುದೊಂದೇ ಪರಿಹಾರ ಅಲ್ಲ ಎಂಬ ಸಂದೇಶ ಇರುವ ಸಿನಿಮಾ ಇದು’ ಎಂದು ಚಿತ್ರತಂಡ ಹೇಳಿದೆ.

ಚಿತ್ರದ ನಾಯಕನ ಹೆಸರು ಗೋಪಿಕೃಷ್ಣ. ರಾಗಾ ಮತ್ತು ಅರ್ಚನಾ ನಾಯಕಿಯರು. ರಾಗಾ ಅವರದ್ದು ವೈದ್ಯೆಯ ಪಾತ್ರ. ಅರ್ಚನಾ ಅವರದ್ದು ಶ್ರೀಮಂತ ಶಾಸಕನ ಮಗಳ ಪಾತ್ರ. ‘ಕಾಲೇಜಿನ ಹುಡುಗಿಯರಿಗೆ ತೊಂದರೆ ಕೊಡುವವರಿಗೆ ಡಿಫರೆಂಟ್‌ ಆಗಿ ತೊಂದರೆ ಕೊಡುವ ದೇವಯಾನಿ ನಾನೇ’ ಎಂದು ಹೇಳಿದವರು ಅರ್ಚನಾ.

ನಿರ್ದೇಶಕ ಜಗನ್ನಾಥ್ ಅವರು ಕನ್ನಡಿಗರು. ನಿರ್ಮಾಪಕ ಟಿ. ಸುಲ್ತಾನ್ ಅವರು ತೆಲುಗು ಭಾಷಿಕರು. ಅವರಿಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾದಾಗಲೆಲ್ಲ ದುಭಾಷಿಯನ್ನು ಇಟ್ಟುಕೊಂಡು ಸಂವಹನ ನಡೆಸುತ್ತಿದ್ದರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.