ADVERTISEMENT

‘ದ್ರೋಣ’ ತೆರೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:30 IST
Last Updated 27 ಫೆಬ್ರುವರಿ 2020, 19:30 IST
ಸ್ವಾತಿ ಶರ್ಮ
ಸ್ವಾತಿ ಶರ್ಮ   

ಮೂಲಸೌಕರ್ಯ ಅಲಭ್ಯ, ಮಕ್ಕಳ ಹಾಜರಾತಿ ಕೊರತೆ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಮತ್ತೊಂದೆಡೆ ಮಧ್ಯಮ ವರ್ಗದ ಜನರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗಳ ಈ ದುಃಸ್ಥಿತಿಗೆ ಇನ್ನೂ ಹಲವು ಕಾರಣಗಳಿವೆ. ಇದರ ಸುತ್ತವೇ ‘ದ್ರೋಣ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಅಂದಹಾಗೆ ಮಾರ್ಚ್ 6ರಂದು ಸಿನಿಮಾ ತೆರೆ ಕಾಣುತ್ತಿದೆ.

ಮೊದಲ ಬಾರಿಗೆ ಶಿವರಾಜ್‌ಕುಮಾರ್‌ ಅವರು ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರು ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದು ಕೌಟುಂಬಿಕ ಕಥಾಹಂದರದ ಕಥೆ. ಸೆಂಟಿಮೆಂಟ್, ಹಾಸ್ಯ ಕೂಡ ಇದೆಯಂತೆ. ತಮಿಳು ಮತ್ತು ಮಲಯಾಳ ಚಿತ್ರಗಳಲ್ಲಿ ನಟಿಸಿರುವ ಇನಿಯಾ ಇದರ ನಾಯಕಿ.

ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ನಡೆಯಿತು. ನಟ ಪುನೀತ್ ರಾಜ್‍ಕುಮಾರ್‌ ಅಣ್ಣನ ಚಿತ್ರದ ಬಗ್ಗೆ ಮಾತನಾಡಿದರೆ ಮನೆಯವರನ್ನು ಹೊಗಳಿದಂತೆ ಆಗುತ್ತದೆ ಎನ್ನುತ್ತಲೇ ಮಾತು ಆರಂಭಿಸಿದರು. ‘ಶೈಕ್ಷಣಿಕ ವ್ಯವಸ್ಥೆ ಕುರಿತ ಚಿತ್ರ ಇದಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದರು.

ADVERTISEMENT

‘ರಾಧಿಕಾ ಅವರಂತಹ ನಟಿ ಸಿಕ್ಕಿದರೆ ಮತ್ತೊಮ್ಮೆ ಅಣ್ಣ–ತಂಗಿಯಂತಹ ಸಿನಿಮಾ ಮಾಡುತ್ತೇನೆ’ ಎಂದು ಘೋಷಿಸಿದರು ನಟ ಶಿವರಾಜ್‌ಕುಮಾರ್‌.

ಶೂಟಿಂಗ್‌ ಮಾಡುವಾಗ ಅವರಿಗೆ ಕಾಲೇಜು ದಿನಗಳು ನೆನಪಿಗೆ ಬಂದವಂತೆ. ಆಗ ವಿದ್ಯಾರ್ಥಿಯಂತೆಯೇ ನಟಿಸಿದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. ‘ಮೊದಲ ಚಿತ್ರ ‘ಆನಂದ್’ನಲ್ಲಿ ನನ್ನ ಹೆಸರು ಆನಂದ್ ಎಂದು ಹೇಳುವ ಡೈಲಾಗ್‍ನಂತೆಯೇ ನಾನು ಇಲ್ಲಿಯವರೆಗೂ ಇದ್ದೇನೆ; ಎಂದಿಗೂ ಬದಲಾಗಿಲ್ಲ. ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬುದೇ ಈ ಸಿನಿಮಾದ ಸಂದೇಶ’ ಎಂದು ವಿವರಿಸಿದರು.

ಪ್ರಮೋದ್ ಚಕ್ರವರ್ತಿ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ನಿಭಾಯಿಸಿದ್ದಾರೆ.

ಯುವಜೋಡಿಗಳಾದ ಸ್ವಾತಿ ಶರ್ಮ ಮತ್ತು ವಿಜಯ್‍ ಕಿರಣ್ ಅನುಭವ ಹಂಚಿಕೊಂಡರು.

ರಂಗಾಯಣ ರಘು, ರವಿಕಿಶನ್, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ. ರಾಮ್‍ಕ್ರಿಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಜಗದೀಶ್ ವಾಲಿ ಅವರದು. ಬಸವರಾಜ ಅರಸು ಅವರ ಸಂಕಲನವಿದೆ. ಡಾಲ್ಫಿನ್ ಮಿಡಿಯಾ ಸಂಸ್ಥೆಯಡಿ ಮಹದೇವ್‌ ಬಿ., ಸಂಗಮೇಶ್‌ ಬಿ. ಮತ್ತು ಶೇಶು ಚಕ್ರವರ್ತಿ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.