ADVERTISEMENT

‘ರಾಜಮಾರ್ತಾಂಡ’: ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 11:39 IST
Last Updated 9 ಮೇ 2022, 11:39 IST
ಧ್ರುವ ಸರ್ಜಾ
ಧ್ರುವ ಸರ್ಜಾ   

ನಟ ದಿವಂಗತ ಚಿರಂಜೀವಿ ಸರ್ಜಾ(ಚಿರು) ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಜೂನ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಚಿರು ಅವರ ಪಾತ್ರಕ್ಕೆ ತಮ್ಮ, ನಟ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಇದರ ತುಣುಕೊಂದನ್ನು ಧ್ರುವ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಕೆ.ರಾಮ್‌ನಾರಾಯಣ್‌ ನಿರ್ದೇಶನದ ಈ ಆ್ಯಕ್ಷನ್‌ ಚಿತ್ರದ ಟ್ರೇಲರ್‌ಗೆ ಈಗಾಗಲೇ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. 2020ರ ಜೂನ್‌ 7ರಂದು ಚಿರಂಜೀವಿ ನಿಧನರಾಗಿದ್ದರು. ಹೀಗಾಗಿ ಜೂನ್‌ನಲ್ಲೇ ಅವರ ಚಿತ್ರ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಚಿರಂಜೀವಿ ಅವರ ಅಕಾಲಿಕ ನಿಧನದಿಂದಾಗಿ ಅವರ ಪಾತ್ರದ ಡಬ್ಬಿಂಗ್‌ ಉಳಿದಿತ್ತು. ಹೀಗಾಗಿ ಧ್ರುವ ಸರ್ಜಾ ಆ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ನಟ ದರ್ಶನ್ ಕೂಡಾ ಸಿನಿಮಾಗೆ ವಾಯ್ಸ್ ಓವರ್ ಕೊಡುವ ಸಾಧ್ಯತೆ ಇದೆ.

ಚಿರು ಪುತ್ರ ರಾಯನ್ ರಾಜ್ ಸರ್ಜಾ ಕೂಡಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿರು ಅವರ 101 ಅಡಿ ಎತ್ತರದ ಕಟೌಟ್ ಹಾಗೂ ರಾಯನ್ ರಾಜ್ ಸರ್ಜಾ ಅವರ 51 ಅಡಿ ಎತ್ತರದ ಕಟೌಟ್ ನಿಲ್ಲಿಸಲು ತಂಡ ನಿರ್ಧರಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.