ADVERTISEMENT

ನೆನಪಿನ ಯಾನ ಈ ‘ದೂರದರ್ಶನ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 11:31 IST
Last Updated 17 ಜೂನ್ 2022, 11:31 IST
ಪೃಥ್ವಿ ಅಂಬಾರ್‌
ಪೃಥ್ವಿ ಅಂಬಾರ್‌   

‘ದಿಯಾ’ ಸಿನಿಮಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬಾರ್‌ ‘ದೂರದರ್ಶನ’ ಹೊತ್ತು ಬರುತ್ತಿದ್ದಾರೆ. ವಿಭಿನ್ನ ಕಥಾಹಂದರದ ಈ ಸಿನಿಮಾದ ಟೈಟಲ್‌ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು.

ಸುಂದರವಾದ ಗ್ರಾಮ. ಏನು ಇಲ್ಲದೇ ಇದ್ದರೂ ಎಲ್ಲವೂ ದೊರಕುವ ಸಣ್ಣ ಪೇಟೆ. ನಾಟಕ, ಹರಿಕಥೆ, ಭಜನೆ, ವಾಲಿಬಾಲ್ ಇಷ್ಟೇ ಮನರಂಜನೆ ಎಂದುಕೊಂಡಾಗ ‘ದೂರದರ್ಶನ’ದ ಪ್ರವೇಶ. ಮುಂದೇನು ಎನ್ನುವುದೇ ಸಿನಿಮಾ ಕಥೆ. ಹೀಗೆ ಆಕರ್ಷಕವಾದ ಟೈಟಲ್ ಟೀಸರ್ ಪ್ರೇಕ್ಷಕರನ್ನು ಆಕರ್ಷಿಸಿದೆ.

ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿ.ವಿ ಬಂದ ಮೇಲೆ ಏನಾಗುತ್ತದೆ? ಎನ್ನುವುದು ಕಥಾವಸ್ತು. ಅಂದಿನ ಕಾಲಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ಸಿನಿಮಾ ಕಟ್ಟಿಕೊಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಸುಕೇಶ್ ಶೆಟ್ಟಿ. ಸುಕೇಶ್ ಅವರಿಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಈ ಹಿಂದೆ ಅವರು ಸಂಭಾಷಣೆಕಾರರಾಗಿ, ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ADVERTISEMENT

ಪೃಥ್ವಿ ಅಂಬಾರ್‌ ನಾಯಕನಾಗಿ ನಟಿಸಿದ್ದು, ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ‘ಉಗ್ರಂ’ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರರು ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಸಿನಿಮಾವನ್ನು ರಾಜೇಶ್ ಭಟ್ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ‘ಉಗ್ರಂ’ ಮಂಜು ಜವಾಬ್ದಾರಿ ಹೊತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ ಸಂಗೀತ, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿಜಿ ಸಂಭಾಷಣೆ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.