ADVERTISEMENT

ಬೆಳ್ಳಿತೆರೆಗೆ ಡಾ.ರಾಜ್ ಕುಟುಂಬದ ಯುವ ರಾಜ್‌ಕುಮಾರ್‌ ಎಂಟ್ರಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:30 IST
Last Updated 26 ಏಪ್ರಿಲ್ 2020, 19:30 IST
ಯುವರಾಜ್ ಕುಮಾರ್
ಯುವರಾಜ್ ಕುಮಾರ್   

ವರನಟ ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆಗೆ ಎಂಟ್ರಿ ಕೊಡಲು ವೇದಿಕೆ ಅಣಿಯಾಗಿದೆ. ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಮಂಗಳಾ ದಂಪತಿಯ ಎರಡನೇ ಪುತ್ರ ಯುವ ರಾಜ್‌ಕುಮಾರ್‌ ಯಾನೆ ಗುರು ರಾಜ್‌ಕುಮಾರ್‌ ಹೀರೊ ಆಗಿ ಬಣ್ಣದಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಮೊದಲ ಚಿತ್ರದ ಪೋಸ್ಟರ್‌ ರಾಜ್‌ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.

ಇನ್ನೂ ಹೆಸರಿಡದ (ಯುವ 01) ಚಿತ್ರದ ಪೋಸ್ಟರ್‌ ಚಿತ್ರರಸಿಕರ ಗಮನ ಸೆಳೆಯುತ್ತಿದೆ. ಈ ಚಿತ್ರ ನಿರ್ದೇಶಿಸುತ್ತಿರುವುದು ಪುನೀತ್‌ ರುದ್ರನಾಗ್. ನಿರ್ದೇಶಕ ಪ್ರಶಾಂತ್‌ ನೀಲ್‌ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದ ‘ರುಗ್ಗ’ ಪಾತ್ರದಲ್ಲಿಯೂ ಅವರು ಗಮನ ಸೆಳೆದಿದ್ದರು. ಗಾಯಕರೂ ಆಗಿರುವ ಪುನೀತ್‌ ಹಾಡಿರುವ ‘ಸಲಾಂ ರಾಖಿ ಭಾಯ್‌’ ಹಾಡು ಚಿತ್ರರಸಿಕರ ಮನ ಸೆಳೆದಿದೆ. ಅಣ್ಣ ವಿನಯ್‌ ರಾಜ್‌ಕುಮಾರ್‌ ನಟನೆಯ ‘ರನ್‌ ಆ್ಯಂಟನಿ’ ಚಿತ್ರದ ಮೂಲಕ ಯುವ ರಾಜ್‌ಕುಮಾರ್‌ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು.

‘ಈ ಚಿತ್ರಕ್ಕಾಗಿ ಮೂರು ರೀತಿಯ ಕಥೆ– ಚಿತ್ರಕಥೆ ಮಾಡಿಕೊಂಡಿದ್ದೇನೆ. ಮೊದಲು ಚಿತ್ರರಸಿಕರಿಗೆಟೀಸರ್‌ ತೋರಿಸಿ ಅವರಿಂದ ಬರುವ ಅಭಿಪ್ರಾಯ ಆಧರಿಸಿ ಚಿತ್ರ ಮಾಡುವುದು ನನ್ನ ಉದ್ದೇಶ. ಟೀಸರ್‌ ನೋಡಿದ ನಂತರ ನಿರ್ಮಾಪಕರು ಇದಕ್ಕೆ ಬಂಡವಾಳ ಹೂಡಲಿ ಎನ್ನುವ ಮುಕ್ತ ಅವಕಾಶವನ್ನು ತೆರೆದಿಟ್ಟಿದ್ದೇವೆ. ಪೋಸ್ಟರ್‌ ಬಿಡುಗಡೆಯಾದ ಬಳಿಕ ನನ್ನನ್ನು ಸಂಪರ್ಕಿಸುವ ನಿರ್ಮಾಪಕರಸಂಖ್ಯೆ ಹೆಚ್ಚಾಗಿದೆ’ ಎಂದರು ಪುನೀತ್‌ ರುದ್ರನಾಗ್‌.

ADVERTISEMENT

‘ಕದಂಬರ ಕಾಲದ ಗರುಡ ತಂಡದಲ್ಲಿದ್ದ ಪರಾಕ್ರಮಿ ಸೇನಾನಿಗಳರೋಚಕ ಕಥೆಗಳೇ ನನಗೆ ಈ ಚಿತ್ರದ ಕಥೆ, ಚಿತ್ರಕಥೆ ಹೆಣೆಯಲು ಸ್ಫೂರ್ತಿ. ಪ್ರಶಾಂತ್‌ ನೀಲ್‌ ಅವರೊಟ್ಟಿಗೂ ಕಥೆಯ ಬಗ್ಗೆ ಚರ್ಚಿಸಿ, ಟಿಪ್ಸ್‌ ಪಡೆದಿದ್ದೇನೆ. ರಾಜ್‌ ಕುಟುಂಬದ ಇಮೇಜ್‌ ಮತ್ತು ಯುವ ರಾಜ್‌ಕುಮಾರ್‌ ಅವರ ಪ್ರತಿಭೆಗೆ ಧಕ್ಕೆಯಾಗದಂತೆ ಚಿತ್ರ ಮಾಡಬೇಕಾದ ದೊಡ್ಡ ಸವಾಲು ನನ್ನ ಮುಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.