ADVERTISEMENT

ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ; ಸುರೇಶ್‌– ಭಾಮ ಮಾತಿನ ಚಕಮಕಿ

ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 21:56 IST
Last Updated 15 ಮಾರ್ಚ್ 2022, 21:56 IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ   

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಕಾರ್ಯದರ್ಶಿ ಎನ್‌.ಎಂ. ಸುರೇಶ್‌ ಮತ್ತು ನಿರ್ಮಾಪಕ ಭಾ.ಮ. ಹರೀಶ್‌ ಅವರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ.

ವಾಣಿಜ್ಯ ಮಂಡಳಿಗೆ ಕೂಡಲೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಸದಸ್ಯರ ಗುಂಪೊಂದು ಹಾಲಿ ಪದಾಧಿಕಾರಿಗಳಿಗೆ ಒತ್ತಾಯಿಸಿತ್ತು. ಈ ಸಂಬಂಧ ಚರ್ಚಿಸಲು ಸಭೆ ಕರೆಯಲಾಗಿತ್ತು.

‘ಚುನಾವಣೆ ಸಂಬಂಧಿಸಿ ಮಾತನಾಡಿ ಎಂದರೆ ಎನ್.ಎಂ. ಸುರೇಶ್‌ ಅವರು ವಿಷಯಾಂತರ ಮಾಡಲು ಮುಂದಾದರು. ಆಗ ವಿಷಯಾಂತರ ಮಾಡಬೇಡಿ. ಚುನಾವಣೆ ನಡೆಸುವ ಬಗ್ಗೆ ಹೇಳಿ ಎಂದು ಕೋರಿದೆ. ಈ ಸಂದರ್ಭ ಸಣ್ಣ ಮಾತಿನ ಚಕಮಕಿ ನಡೆದಿದೆ’ ಎಂದು ಭಾ.ಮ. ಹರೀಶ್‌ ಹೇಳಿದರು.

ADVERTISEMENT

ಏಪ್ರಿಲ್‌ 15ರ ಒಳಗೆ ಚುನಾವಣೆ ನಡೆಸುವಂತೆ ಜಿಲ್ಲಾ ಸಹಕಾರ, ಸಂಘ ಸಂಸ್ಥೆಗಳ ನೋಂದಣಾಧಿಕಾರಿಯವರು ಮಂಡಳಿಗೆ ಸೂಚಿಸಿದ್ದರು.

‘ಕೋವಿಡ್‌, ಲಾಕ್‌ಡೌನ್‌, ಮಂಡಳಿಯ ಲೆಕ್ಕಪತ್ರಗಳ ನಿರ್ವಹಣೆ ಇತ್ಯಾದಿ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಾವೇ ಕೋರಿದ್ದೇವೆ. ಏಪ್ರಿಲ್‌ 15ರ ಒಳಗೆ ಚುನಾವಣಾ ವೇಳಾಪಟ್ಟಿಸಿದ್ಧಪಡಿಸಿ ಪ್ರಕಟಿಸುತ್ತೇವೆ. ಸದಸ್ಯರ ನೋಂದಣಿ, ಅವರಿಗೆ ಮತದಾನದ ಅರ್ಹತೆಗೆ ಬೇಕಾದ ಕಾಲಾವಕಾಶ ಸಂಬಂಧಿಸಿ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ. ಅವುಗಳನ್ನು ನಿವಾರಿಸಿ ಖಂಡಿತವಾಗಿಯೂ ಚುನಾವಣೆ ನಡೆಸುತ್ತೇವೆ’ ಎಂದು ಕಳೆದ ವಾರ ಎನ್‌.ಎಂ. ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದರು.

ಇಂದಿನ ಘಟನೆಯ ಬಗ್ಗೆ ಪ್ರತಿಕ್ರಿಯೆಗೆ ಸುರೇಶ್‌ ಅವರು ಸಂಪರ್ಕಕ್ಕೆಸಿಗಲಿಲ್ಲ.

‘ಎರಡು ದಿನಗಳ ಒಳಗೆ ಚುನಾವಣೆ ಸಂಬಂಧಿಸಿದಂತೆ ಸ್ಪಷ್ಟಪಡಿಸಬೇಕು. ಇಲ್ಲವಾದರೆ ಮಾರ್ಚ್‌ 21ರಿಂದ ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು ಭಾ.ಮ. ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.