ADVERTISEMENT

ನಟಿ–ನಿರ್ಮಾಪಕಿ ಹೊಡೆದಾಟ; ಠಾಣೆ ಮೆಟ್ಟಿಲೇರಿದ ಪ್ರಕರಣ

ಸಂಜನಾ– ವಂದನಾ ಡಿಶುಂ ಡಿಶುಂ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 5:09 IST
Last Updated 28 ಡಿಸೆಂಬರ್ 2019, 5:09 IST
ಸಂಜನಾ ಗರ್ಲಾನಿ, ವಂದನಾ ಜೈನ್‌
ಸಂಜನಾ ಗರ್ಲಾನಿ, ವಂದನಾ ಜೈನ್‌   

ಬೆಂಗಳೂರು: ‘ಗಂಡ ಹೆಂಡತಿ’ ಸಿನಿಮಾ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಮತ್ತುಬಾಲಿವುಡ್ ನಿರ್ಮಾಪಕಿ ವಂದನಾ ಜೈನ್‘ಗುಂಡು ಪಾರ್ಟಿ ಗುಂಗಿ’ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ವಂದನಾ ಮೇಲೆ ಸಂಜನಾವಿಸ್ಕಿ ಗ್ಲಾಸ್‌ ಎಸೆದು ರಾದ್ಧಾಂತ ಮಾಡಿದರೆ, ಸಂಜನಾ ಕೈಯನ್ನು ವಂದನಾ ತಿರುವಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಗರದ ಹೋಟೆಲ್‌ ಒಂದರಲ್ಲಿ ಡಿ. 24ರಂದು ರಾತ್ರಿ ಒಂದೇ ಟೇಬಲ್‌ನಲ್ಲಿ ಸಂಜನಾ ಹಾಗೂ ವಂದನಾ ಪಾರ್ಟಿ ಮಾಡಿದ್ದರು.ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ವಿಸ್ಕಿ ಗ್ಲಾಸ್‌ನಿಂದವಂದನಾ ಮೂಗಿಗೆ ಸಂಜನಾ ಹೊಡೆದಿದ್ದಾರೆ ಎನ್ನಲಾಗಿದೆ.

ಈ ಘಟನೆ ಬಳಿಕ ವಂದನಾ ಅವರು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್‌, ‘ಸಂಜನಾ ಅವರು ಗಲಾಟೆ ಮಾಡಿದ್ದಾರೆ ಎಂದು ದೂರು ಬಂದಿದೆ. ವಂದನಾ ಜೈನ್ ಅವರು ದೂರು ನೀಡಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಅಪರಾಧ) ದಾಖಲಾಗಿದೆ. ದೂರುದಾರರು ಹೆಚ್ಚಿನ ತನಿಖೆಗೆ ನ್ಯಾಯಾಲಯದಲ್ಲಿ ಅನುಮತಿ ಪಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ’ ಎಂದಿದ್ದಾರೆ.

ADVERTISEMENT

ತಾಯಿ ನಿಂದಿಸಿದರೂ ಸುಮ್ಮನಿರಬೇಕಾ: ಸಂಜನಾ

‘ವಂದನಾ ಜೈನ್‌ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಕೈಯನ್ನು ತಿರುವಿ,ಮೊಬೈಲ್‌ ಕೂಡ ಕಸಿದುಕೊಂಡಿದ್ದಾರೆ. ಅಲ್ಲದೇ ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಾಯಿಯನ್ನು ನಿಂದಿಸಿದರೂ ನಾನು ಬಾಯಿಮುಚ್ಚಿಕೊಂಡು ಸುಮ್ಮನಿರಬೇಕಾ. ಅವರು ನನ್ನ ಬಳಿ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ದೂರು ದಾಖಲಿಸುತ್ತೇನೆ’ ಎಂದು ಸಂಜನಾ ಪ್ರತಿಕ್ರಿಯಿಸಿದ್ದಾರೆ.

‘ಅಂದು ನಡೆದ ಗಲಾಟೆಯನ್ನು ನನ್ನ ಅಣ್ಣ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಆ ಸಾಕ್ಷ್ಯ ನನ್ನಲ್ಲಿದೆ. ಆದರೆ, ಯಾವುದೇ ಕಾರಣಕ್ಕೂ ನಾನು ಅದನ್ನು ಬಹಿರಂಗಪಡಿಸುವುದಿಲ್ಲ. ಅಗ್ಗದ ಪ್ರಚಾರ ನನಗೆ ಅಗತ್ಯವಿಲ್ಲ’ ಎಂದಿದ್ದಾರೆ.

ವಂದನಾ ಮಾಡಿರುವ ಹಲ್ಲೆಯಿಂದ ಗಾಯಗೊಂಡಿರುವುದಾಗಿ ಆಪಾದಿಸಿರುವ ಸಂಜನಾ,ಡಿ.25ರಂದು ಕೋಲ್ಸ್‌ ಪಾರ್ಕ್‌ ಹಿಂಭಾಗದ ಪ್ರೊಮೊನೇಡ್ ರಸ್ತೆಯ ಸಂತೋಷ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಶುಕ್ರವಾರ ಅವರು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಅವರನ್ನು ಭೇಟಿ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಇಬ್ಬರಿಗೂ ಸಮಾನ ಸ್ನೇಹಿತರಾಗಿರುವವರ ಮೂಲಕ ವಂದನಾ ಅವರನ್ನು ನಾನು ಭೇಟಿ ಮಾಡಿದ್ದೆ. ಅವರು ಒಳ್ಳೆಯವರೆಂದು ಭಾವಿಸಿದ್ದೆ. ಪುಕ್ಕಟೆ ಪ್ರಚಾರ ಗಿಟ್ಟಿಸಲು ಅವರು ನನ್ನನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡಿದ್ದಾರೆ. ನಾನು ನನ್ನ ವೃತ್ತಿಯಲ್ಲಿ ಕಠಿಣ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಏಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಈ ಮಹಿಳೆಯಿಂದ ನನಗೆ ರಕ್ಷಣೆ ಬೇಕಾಗಿದೆ’ ಎಂದೂ ಅಲವತ್ತುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ ವಂದನಾ ಜೈನ್‌ ಅವರನ್ನು ಸಂಪರ್ಕಿಸಿದಾಗ, ‘ನಾನು ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸುವೆ’ ಎಂದಷ್ಟೇ ಹೇಳಿದರು. ಘಟನೆಯ ಬಳಿಕ ವಂದನಾ ಜೈನ್‌ ಅವರು ಕೇರಳಕ್ಕೆ ತೆರಳಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.