ADVERTISEMENT

ಮಂಡ್ಯದಲ್ಲಿ ‘ಆನೆಬಲ’ ಧ್ವನಿಸುರುಳಿ ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:47 IST
Last Updated 5 ಅಕ್ಟೋಬರ್ 2019, 13:47 IST

ಮಂಡ್ಯ: ಜನತಾ ಟಾಕೀಸ್‌ ವತಿಯಿಂದ ನಿರ್ಮಿಸಿರುವ ಆನೆಬಲ ಚಲನಚಿತ್ರ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಜೆ 5.30ಕ್ಕೆ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ.

ಮಾಜಿ ಶಾಸಕ, ನಿರ್ಮಾಪಕ ಇ.ಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎರಡು ಕ್ವಿಂಟಲ್‌ ತೂಕದ ಮುದ್ದೆಯನ್ನು ಚಲನಚಿತ್ರ ನಿರ್ದೇಶಕ ಯೋಗರಾಜ್‌ಭಟ್‌ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ವಿ.ನಾಗೇಂದ್ರ ಪ್ರಸಾದ್‌, ಐಪಿಎಸ್‌ ಅಧಿಕಾರಿ ಡಾ.ಎ.ಎನ್‌.ಪ್ರಕಾಶ್‌ಗೌಡ, ಮಾಜಿ ಶಾಸಕ ಎ.ರಾಜು, ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಡಿ.ಎಂ.ವಿಶ್ವನಾಥ್‌ ಪಾಲ್ಗೊಳ್ಳಲಿದ್ದಾರೆ.

ರಾಗಿ ಮುದ್ದೆ ಕೇಂದ್ರೀಕೃತವಾಗಿ ಅದರ ಮಹತ್ವ ಸಾರುವ ಚಿತ್ರ ಇದಾಗಿದ್ದು, ಅಂದಾಜು ₹2.5ಕೋಟಿ ವೆಚ್ಚದಲ್ಲಿ ಜಿಲ್ಲೆಯ ನೈಸರ್ಗಿಕ ತಾಣಗಳಲ್ಲಿ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ. ಬಿಡುಗಡೆ ಸಮಾರಂಭದಲ್ಲಿ ಸರಿಗಮಪ ತಂಡದವರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಇದಲ್ಲದೆ ಮಳೆ ಆಶ್ರಿತ ಪ್ರದೇಶದಲ್ಲಿ ಅತೀ ಹೆಚ್ಚು ರಾಗಿ ಬೆಳೆದ ಮೂವರು ರೈತರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಲಾಗುವುದು.

ADVERTISEMENT

ಅಂದಾಜು 80–100 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದ್ದು, ಬೇಡಿಕೆ ಮೇಲೆ ಇನ್ನೂ ಹೆಚ್ಚಿನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುವುದು. ಇದಲ್ಲದೆ ಅಮೆರಿಕಾ ಇಂಗ್ಲೆಂಡ್‌, ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲೂ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಸೂನಗಹಳ್ಳಿ ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.