ADVERTISEMENT

ಚಿತ್ರರಂಗದ ಸಂಗೀತ ಸಂತ ಇಳಯರಾಜ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 10:41 IST
Last Updated 21 ನವೆಂಬರ್ 2019, 10:41 IST
   

1980ರ ದಶಕದ ಮಾತಿದು. ತಮಿಳು ಚಿತ್ರಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದೆ. ನಾವು ನಾಲ್ಕು ಜನ ಗೆಳೆಯರು ಒಟ್ಟಿಗೆ ಒಂದು ಬಾಡಿಗೆ ಕೋಣೆಯಲ್ಲಿ ವಾಸವಾಗಿದ್ದೆವು.ಕೊಯಮತ್ತೂರಿನ ಸೌಂಡ್‌ ಎಂಜಿನಿಯರ್‌ ರಾಜಮಾಣಿಕ್ಯಂ, ನಿರ್ದೇಶಕರಾದ ಎನ್‌. ವೆಂಕಟೇಶ್, ಗೋಕುಲಕೃಷ್ಣ ಮತ್ತು ನಾನು ರೂಂ ಮೇಟ್ಸ್‌. ಆ ಪೈಕಿ ನಾನೊಬ್ಬನೇ ಕನ್ನಡಿಗ. ಉಳಿದ ಮೂವರು ತಮಿಳಿಗರು.

ಕನ್ನಡಿಗರಾದ ಜಿ.ಕೆ. ವೆಂಕಟೇಶ್‌ ಆಗ ತಮಿಳು ಫಿಲ್ಮ್‌ ಇಂಡಸ್ಟ್ರಿಯಲ್ಲಿ ಸ್ಟಾರ್‌ಸಂಗೀತ ನಿರ್ದೇಶಕ.ಅವರ ತಂಡದಲ್ಲಿ ಇಳಿಯರಾಜಾ ಗಿಟಾರ್ ನುಡಿಸುತ್ತಿದ್ದರು. ನನ್ನ ಸ್ನೇಹಿತ ರಾಜಮಾಣಿಕ್ಯಂ ಮತ್ತು ಇಳಯರಾಜಾ ಸ್ನೇಹಿತರು. ಇದರಿಂದಾಗಿ ನಮಗೂ ಸ್ನೇಹಿತರಾಗಿದ್ದರು.

ಜಿ.ಕೆ. ವೆಂಕಟೇಶ್‌ ಕನ್ನಡಿಗರಾದ್ದರಿಂದ ನನಗೂ ಹೆಚ್ಚು ಪರಿಚಿತರಾಗಿದ್ದರು. ಅವರನ್ನು ಭೇಟಿಯಾಗಲು ಹೋಗುತ್ತಿದ್ದೆ. ಇದರಿಂದ ಇಳಯರಾಜ ನನಗೂ ಸ್ನೇಹಿತರಾದರು. ನನ್ನ ಜತೆ ರೂಂನಲ್ಲಿ ಇದ್ದವರ ಪೈಕಿ ರಾಜಮಾಣಿಕ್ಯಂ ಸ್ಥಿತಿವಂತ. ಇಳಯರಾಜ ಆಗಾಗ ಒಂದು, ಎರಡು ಅಥವಾ ಐದು ರೂಪಾಯಿ ಹಣವನ್ನುರಾಜಮಾಣಿಕ್ಯಂನಿಂದ ಸಾಲ ಪಡೆಯುತ್ತಿದ್ದರು.

ADVERTISEMENT
ಬಸವರಾಜು

ಎಂದಿಗೂ ಹೆಚ್ಚು ಮಾತನಾಡಿದವರಲ್ಲ. ಒಂದು ಅಪ್ಯಾಯಮಾನವಾದ ಸ್ನೇಹದ ಕಿರುನಗೆ. ಸಾದಾ, ಸೀದಾ ವ್ಯಕ್ತಿತ್ವ. ಈ ನಡುವೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲು ತೊಡಗಿದರು. ನಾವು ನಾಲ್ಕು ಜನ ಸ್ನೇಹಿತರು ಸಿನಿಮಾ ನಿರ್ಮಿಸುವ ಹುಚ್ಚು ಹಿಡಿಸಿಕೊಂಡು ಓಡಾಡುತ್ತಿದ್ದೆವು.

ಅಷ್ಟೋತ್ತಿಗಾಗಲೇ ಚಿತ್ರ ನಿರ್ಮಿಸಬೇಕು ಎಂಬ ಹುಳು ನಮ್ಮೆಲ್ಲರ ತಲೆಯನ್ನು ಹೊಕ್ಕಿತ್ತು. ಹಣಕಾಸಿನ ಅಡಚಣೆಯ ನಡುವೆಯೂ 1986ರಲ್ಲಿರೇವತಿ,ಸುರೇಶ್ ಬಾಬು, ಮನೋರಮಾ ಮತ್ತು ಗೌಂಡಮಣಿ ಅವರನ್ನು ಹಾಕಿಕೊಂಡು ‘ಮರಗದ ವೀಣೆ’ ಎಂಬ ತಮಿಳು ಚಿತ್ರ ನಿರ್ಮಿಸಲು ಮುಂದಾದೆವು. ಗೋಪಿಕೃಷ್ಣ ಸ್ವಲ್ಪ ಹಣ ಹಾಕಿದ. ಉಳಿದವರೆಲ್ಲರೂ ಉಚಿತವಾಗಿ ಕೆಲಸ ಮಾಡುವ ಕರಾರು ಮಾಡಿಕೊಂಡೆವು. ನಾನು ಛಾಯಾಗ್ರಹಣ ಮಾಡಿದೆ. ಚಿತ್ರಕ್ಕೆ ಯಾರಿಂದ ಸಂಗೀತ ಕೊಡಿಸುವುದು ಎಂಬ ಪ್ರಶ್ನೆ ಎದುರಾದಾಗ ನಮ್ಮ ಮುಂದಿದ್ದ ಏಕೈಕ ಆಯ್ಕೆ ಇಳಯರಾಜ!

ಅದಾಗಲೇ ಅವರು ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಕಲ್ಯಾಣ ಎಂಬುವವರು ಅವರ ಅಸಿಸ್ಟೆಂಟ್‌ ಆಗಿದ್ದರು. ಅವರು ನಮಗೆಲ್ಲರಿಗೂ ಕೂಡ ಸ್ನೇಹಿತರಾಗಿದ್ದರು. ಅವರ ಮೂಲಕ ಇಳಯರಾಜ ಅವರಿಗೆ ಸುದ್ದಿ ತಲುಪಿಸಿದೆವು. ‘ನಮ್ಮ ಸಿನಿಮಾಕ್ಕೆ ನೀನೇ ಮ್ಯೂಸಿಕ್‌ ಮಾಡಬೇಕು’ ಎಂದು ರಾಜಮಾಣಿಕ್ಯಂ ಮನವಿ ಮಾಡಿಕೊಂಡ. ಸಂಗೀತ ನೀಡಲು ಸಂತೋಷದಿಂದ ಒಪ್ಪಿಕೊಂಡ ಇಳಯರಾಜ ಒಂದು ಷರತ್ತು ಮುಂದಿಟ್ಟರು.

ಈ ಕೆಲಸವನ್ನು ನಾನು ಉಚಿತವಾಗಿ ಮಾಡುವೆ. ಒಂದು ನಯಾ ಪೈಸೆಯನ್ನೂ ಪಡೆಯುವುದಿಲ್ಲ. ಇದಕ್ಕೆ ಒಪ್ಪಿದರೆ ಮಾತ್ರ ಸಂಗೀತ ನೀಡುವೆ ಎಂದರು. ಕಷ್ಟ ಕಾಲದಲ್ಲಿ ಸ್ನೇಹಿತ ರಾಜಮಾಣಿಕ್ಯಂ ನೀಡಿದ ಸಹಾಯವನ್ನು ನೆನಪಿಸಿಕೊಂಡರು. ಅಸಿಸ್ಟೆಂಟ್‌ ಮತ್ತು ಮ್ಯೂಸಿಕ್‌ ತಂಡದ ಮ್ಯಾನೇಜರ್ ಕಲ್ಯಾಣ ಅವರನ್ನು ಕರೆಸಿ, ನಮ್ಮಿಂದ ಹಣ ಪಡೆಯದಂತೆ ಸೂಚನೆ ನೀಡಿದರು. ಮ್ಯೂಸಿಕ್‌ ನೀಡುವ ಕಲಾವಿದರಿಗೆ ತಾವೇ ಹಣ ನೀಡುವುದಾಗಿ, ಚಿತ್ರತಂಡದಿಂದ ಪುಡಿಗಾಸನ್ನೂ ಪಡೆಯಬಾರದು ಎಂದುತಾಕೀತು ಮಾಡಿದರು.

ಹೊಸಬರು ಚಿತ್ರ ಮಾಡುತ್ತಿದ್ದಾರೆ. ಕಡಿಮೆ ಸಂಭಾವನೆ ಪಡೆಯುವಂತೆಪರಿಚಿತ ಗಾಯಕರಿಗೆ ಮನವಿ ಮಾಡಿದರು. ಸಂಗೀತ ನೀಡಿದ ಸ್ಟುಡಿಯೊಗೆ ಮಾತ್ರ ಬಾಡಿಗೆ ನೀಡಿದ್ದೆವು. ಆ ಕಾಲದಲ್ಲಿ ಇಳಯರಾಜಾ ಒಂದು ಚಿತ್ರಕ್ಕೆ ₹5 ರಿಂದ ₹6 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಎನ್ನುವುದು ನೆನಪಿರಲಿ. ಕಡಿಮೆ ಖರ್ಚಿನಲ್ಲಿ‘ಮರಗದ ವೀಣೆ’ ಅದ್ಭುತವಾಗಿ ಮೂಡಿಬಂತು.ಇಳಯರಾಜ ಸಂಗೀತ ಚಿತ್ರದ ಹೈಲೈಟ್‌ ಆಗಿತ್ತು.

ನಮಗೆ ಸಹಾಯ ಮಾಡಿದ್ದಾಗಿ ಅವರು ಎಲ್ಲಿಯೂ, ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಅವರಿಂದ ಅನೇಕರು ನೆರವು ಪಡೆದಿದ್ದಾರೆ. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು, ಅನ್ನ ಇಕ್ಕಿದವರನ್ನು ಅವರು ಇಂದಿಗೂ ಮರೆತಿಲ್ಲ. ಭಾರತೀಯ ಚಿತ್ರರಂಗ ಕಂಡ ಅಪರೂಪದ ಸಂಗೀತ ನಿರ್ದೇಶಕ. ಅವರೊಬ್ಬ ಸ್ವರ ಮಾಂತ್ರಿಕ. ಸಂಗೀತ ಲೋಕದ ಸಂತ. ಯಶಸ್ಸಿನ ಮೇರು ಶಿಖರದಲ್ಲಿದ್ದರೂ ಒಂದಿಷ್ಟು ಅಹಂ ಅವರ ತಲೆ ಹೊಕ್ಕಿಲ್ಲ.ಇಂತಹ ಸಾತ್ವಿಕ ಗುಣವೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.