ADVERTISEMENT

ಚಿತ್ರಗಳು ತೆರೆಗೆ: ಸ್ಯಾಂಡಲ್‌ವುಡ್‌ ‘ಲಕ್ಕಿವೀಕ್‌’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 19:30 IST
Last Updated 29 ಡಿಸೆಂಬರ್ 2022, 19:30 IST
ಅಪೂರ್ವ ಭಾರದ್ವಾಜ್
ಅಪೂರ್ವ ಭಾರದ್ವಾಜ್   

ಚಂದನವನದ ಲಕ್ಕಿವೀಕ್‌ ಎಂದೇ ಪ್ರಸಿದ್ಧಿಯಾಗಿರುವ ಡಿಸೆಂಬರ್‌ ಕೊನೆಯ ಶುಕ್ರವಾರ; ಇಂದು(ಡಿ.30) ಸಾಲು ಸಾಲು ಕನ್ನಡ ಚಿತ್ರಗಳು ತೆರೆಗೆ ಬರುತ್ತಿವೆ. ಈ ಪೈಕಿ ‘ಪದವಿಪೂರ್ವ’, ‘...ಜಮಾಲಿಗುಡ್ಡ’, ‘ಮೇಡ್‌ ಇನ್‌ ಬೆಂಗಳೂರು’, ‘ನಾನು ಅದು ಮತ್ತು ಸರೋಜ’ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

ಯೋಗರಾಜ್‌ ಭಟ್‌ ಅವರ ಗರಡಿಯಲ್ಲಿ ಪಳಗಿದ ಹರಿಪ್ರಸಾದ್‌ ಜಯಣ್ಣ ಅವರ ಚೊಚ್ಚಲ ಚಿತ್ರ ‘ಪದವಿಪೂರ್ವ’. ಚಿತ್ರಕ್ಕೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಕುಶಾಲ್‌ ಗೌಡ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘..ಜಮಾಲಿಗುಡ್ಡ’ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಧನಂಜಯ ಅವರಿಗೆ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ.

ಪ್ರದೀಪ್ ಕೆ. ಶಾಸ್ತ್ರಿ ಅವರ ನಿರ್ದೇಶನದ ‘ಮೇಡ್‌ ಇನ್‌ ಬೆಂಗಳೂರು’, ಬೆಂಗಳೂರು ಹಾಗೂ ಸ್ಟಾರ್ಟ್ ಅಪ್
ಸುತ್ತ ಸಾಗುವ ಚಿತ್ರಕಥೆ ಹೊಂದಿದೆ. ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಪ್ರೀತಮ್‌ ನಿರ್ದೇಶನದ ಹೊಸ ಚಿತ್ರ ‘ನಾನು, ಅದು ಮತ್ತು ಸರೋಜ’. ಚಿತ್ರದ ಕಥೆ ಮೂರು ಪ್ರಮುಖ ಪಾತ್ರಗಳ ಸುತ್ತ ಸಾಗುತ್ತದೆ.

ADVERTISEMENT

‘ಲೂಸ್ ಮಾದ’ ಯೋಗಿ, ದತ್ತಣ್ಣ ಹಾಗೂ ಅಪೂರ್ವ ಭಾರದ್ವಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ವಿನೋದ್ ಧಯಾಳನ್ ಅವರ ‘ಜೋರ್ಡನ್‌’ ಸಿನಿಮಾ ಕೂಡಾ ತೆರೆಕಾಣುತ್ತಿದ್ದು,‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಹೇಂದ್ರ ಪ್ರಸಾದ್, ‘ಕವಲು ದಾರಿ’ ಖ್ಯಾತಿಯ ಸಂಪತ್ ಮೈತ್ರೇಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾಗಳ ಜೊತೆಗೆ ಲಕ್ಕಿವೀಕ್‌ನಲ್ಲಿ ಒಂದಿಷ್ಟು ಹೊಸಬರ ಸಿನಿಮಾಗಳೂ ಗಾಂಧಿನಗರಕ್ಕೆ ಲಗ್ಗೆ ಇಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.