ADVERTISEMENT

CCSS ಪ್ರಶಸ್ತಿ: 7 ವಿಭಾಗಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರ ನಾಮನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 12:01 IST
Last Updated 22 ಫೆಬ್ರುವರಿ 2022, 12:01 IST
‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ರಾಜ್‌ ಬಿ. ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ
‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ರಾಜ್‌ ಬಿ. ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ   

ರಾಜ್‌ ಬಿ. ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಕ್ರಿಟಿಕ್ಸ್‌ ಚಾಯ್ಸ್‌ ಶಾರ್ಟ್ಸ್‌ ಆ್ಯಂಡ್‌ ಸಿರೀಸ್‌(ಸಿಸಿಎಸ್‌ಎಸ್‌) ಪ್ರಶಸ್ತಿಯ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಕಳೆದ ನವೆಂಬರ್‌ 19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ, ನಂತರದಲ್ಲಿ ಜೀ5 ಒಟಿಟಿ ವೇದಿಕೆಯಲ್ಲೂ ತೆರೆಕಂಡು ದೇಶದಾದ್ಯಂತ ಇರುವ ಪ್ರೇಕ್ಷಕರನ್ನು ತಲುಪಿತ್ತು. ವಿಭಿನ್ನ ಮಾದರಿಯ ಕಥೆ, ರಾಜ್‌ ಬಿ. ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜೀ5 ಒಟಿಟಿಯಲ್ಲಿ ಬಿಡುಗಡೆಯಾದ ಮೂರೇ ದಿನದಲ್ಲಿ ಈ ಸಿನಿಮಾ ದಾಖಲೆ ಬರೆದಿತ್ತು. ಮೊದಲ ಮೂರು ದಿನಗಳಲ್ಲಿ ಒಟ್ಟು 8 ಕೋಟಿ ನಿಮಿಷ ವೀಕ್ಷಣೆಯನ್ನು ಈ ಸಿನಿಮಾ ಕಂಡಿತ್ತು. ಬಾಲಿವುಡ್‌ ನಿರ್ದೇಶಕರಾದ ಅನುರಾಗ್ ಕಶ್ಯಪ್ ಹಾಗೂ ರಾಮ್ ಗೋಪಾಲ್ ವರ್ಮಾ ಕೂಡ ಈ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದರು.

ADVERTISEMENT

ಇದೀಗ ‘ಗರುಡ ಗಮನ ವೃಷಭ ವಾಹನ’ ಸಿನಿಮಾವು ಸಿಸಿಎಸ್‌ಎಸ್‌ ಪ್ರಶಸ್ತಿಯ ಅತ್ಯುತ್ತಮ ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ. ಮಲಯಾಳಂನ ‘ನಾಯಾಟ್ಟು’ ಹಾಗೂ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’, ತಮಿಳಿನ ‘ಜೈ ಭೀಮ್‌’ ಸೇರಿದಂತೆ ಒಟ್ಟು 10 ಸಿನಿಮಾಗಳು ಈ ವಿಭಾಗಕ್ಕೆ ನಾಮನಿರ್ದೇಶನಗೊಂಡಿವೆ.

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಕಲನ ಹಾಗೂ ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲೂ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನಾಮನಿರ್ದೇಶನಗೊಂಡಿದೆ. ಇದೇ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಟ ರಿಷಬ್‌ ಶೆಟ್ಟಿ ನಾಮನಿರ್ದೇಶನಗೊಂಡಿದ್ದಾರೆ.

ಮಂಗಳೂರಿನ ಭೂಗತಲೋಕ, ರೌಡಿಸಂ ಕಥಾಹಂದರ ಹೊಂದಿದ್ದ ಈ ಚಿತ್ರದಲ್ಲಿ, ‘ಹರಿ’ಯ ಪಾತ್ರದಲ್ಲಿ ರಿಷಬ್‌ ಶೆಟ್ಟಿ ಹಾಗೂ ‘ಶಿವ’ನ ಪಾತ್ರದಲ್ಲಿ ರಾಜ್‌ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.