ADVERTISEMENT

‘36ರ ಹರೀಶ’ನಿಗೆ ಮಾರ್ಚ್‌ 4ಕ್ಕೆ ಮದುವೆ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 12:23 IST
Last Updated 20 ಫೆಬ್ರುವರಿ 2022, 12:23 IST
ಹರೀಶ ವಯಸ್ಸು 36 ಚಿತ್ರದ ಪೋಸ್ಟರ್‌
ಹರೀಶ ವಯಸ್ಸು 36 ಚಿತ್ರದ ಪೋಸ್ಟರ್‌   

ಚಿತ್ರದಲ್ಲಿ ಹೀರೋ ಸಹಜವಾಗಿರಬೇಕು. ಅಂಥ ಪಾತ್ರ ನನಗಿಷ್ಟ. ಇಲ್ಲಿನ ಪಾತ್ರ ನನ್ನ ವ್ಯಕ್ತಿತ್ವಕ್ಕೂ, ವೃತ್ತಿಗೂ ತುಂಬಾ ಹತ್ತಿರದಲ್ಲಿದೆ. ಹಾಗಾಗಿ ಈ ಪಾತ್ರಕ್ಕೆ ಒಪ್ಪಿಕೊಂಡೆ.

ಹೀಗೆಂದು ತುಂಬಾ ಸರಳ ಮತ್ತು ವಿನಯದಿಂದ ಒಪ್ಪಿಕೊಂಡರು ಯೋಗೀಶ್ ಶೆಟ್ಟಿ.

‘ಹರೀಶ ವಯಸ್ಸು 36’ ಚಿತ್ರದ ನಾಯಕ ಯೋಗೀಶ್‌. ಈ ಕಥೆ ಕೇಳುವವರೆಗೆ ಯೋಗೀಶ್‌ ಅವರಿಗೆ ಮದುವೆ ಆಗಿರಲಿಲ್ಲವಂತೆ. ಚಿತ್ರದ ಮಾತುಕತೆಗಳು ನಡೆಯುತ್ತಿದ್ದಂತೆಯೇ ಹುಡುಗಿ ನಿಶ್ಚಯವಾಗಿ ಮದುವೆಯೂ ಆಯಿತಂತೆ.

ADVERTISEMENT

ಯೋಗೀಶ್‌ ಅವರು ಕಾಸರಗೋಡಿನ ಮಂಜೇಶ್ವರದವರು. ಮನಃಶಾಸ್ತ್ರಜ್ಞ,ಸಮಾಜ ಸೇವಕ. ಸರ್ಕಾರಿ ಇಲಾಖೆಯೊಂದರಲ್ಲಿ ಆಪ್ತ ಸಮಾಲೋಚಕರು. ಯಕ್ಷಗಾನಪಟು. ಅಚ್ಚಗನ್ನಡದ ಸ್ವಚ್ಛ ಮಾತು ಅವರದ್ದು. ಮಂಗಳೂರಿನ ಸಂಕೇತ ತಂಡದಲ್ಲಿ ಕಲಾವಿದನೂ ಹೌದು.

ಚಿತ್ರದಲ್ಲಿ ತೋರಿಸಿದ್ದು 36ರ ತುಮುಲಗಳು

‘36 ಕಳೆದರೂ ಉದ್ಯೋಗ ಸಿಗದಿರುವುದು, ಉದ್ಯೋಗ ಸಿಗದ ಕಾರಣಕ್ಕೆ ಮದುವೆ ಆಗದಿರುವುದು, ಅಂಥವರು ಸಮಾಜದಲ್ಲಿ ಗೇಲಿಗೊಳಗಾಗುವುದು... ಹೀಗೆ ಒಂದಕ್ಕೊಂದು ಕೊಂಡಿಯಂತಿರುವ ಸಮಸ್ಯೆಗಳನ್ನು ನೋಡುತ್ತಲೇ ಇದ್ದೇನೆ. ಅನೇಕರು ಬೇರೆ ಬೇರೆ ಕಾರಣಗಳಿಂದ ಒಂಟಿಯಾಗಿ ಉಳಿದ ಪ್ರಕರಣಗಳನ್ನೂ ಹೇಳಿಕೊಂಡದ್ದಿದೆ. ಹಾಗಾಗಿ ಆ ಅನುಭವ ಕಥನಗಳು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಕಾರಣವಾದವು’ ಎಂದರು ಯೋಗೀಶ್‌.

ಹೆಚ್ಚು ಸಿನಿಮಾಗಳನ್ನು ವೀಕ್ಷಿಸುತ್ತಾರಂತೆ ಯೋಗೀಶ್‌. ‘ಹಾಸ್ಯವೂ ಇದೆ. ಭಿನ್ನವಾದ ತಿರುಳೂ ಇದೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂದರು ಅವರು.

ನಿರ್ದೇಶಕ ಗುರುರಾಜ್‌ ಜೇಷ್ಠ, ಯೋಗೀಶ್‌ ಅವರಲ್ಲಿ ಹರೀಶನ ಪಾತ್ರ ಸೃಷ್ಟಿ ಮಾಡಿದ್ದಾರೆ. ಅವರೂ ಸಂಕೇತ ತಂಡದಲ್ಲಿದ್ದವರು. ಸ್ಟುಡಿಯೋ, ನಿರ್ಮಾಣ ಚಟುವಟಿಕೆಗಳಲ್ಲಿ ಅನುಭವಿಯೂ ಹೌದು.

ಶ್ವೇತಾ ಅರೆಹೊಳೆ ಈ ಚಿತ್ರದ ನಾಯಕಿ. ಸದ್ಯ ಕನ್ನಡ ಎಂ.ಎ. ಓದುತ್ತಿದ್ದಾರೆ. ರಂಗಭೂಮಿಯ ಹಿನ್ನೆಲೆ ಉಳ್ಳವರು. ‘ನಂದಗೋಕುಲ ಡ್ಯಾನ್ಸ್‌ ಆ್ಯಂಡ್‌ ಥಿಯೇಟರ್‌’ ತಂಡವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ‘ಇದೊಂದು ಅನಿರೀಕ್ಷಿತ ಅವಕಾಶ ಮತ್ತು ಅನುಭವ’ ಎಂದರು ಶ್ವೇತಾ.

‘ಹರಿಶಣ್ಣಂಗೆ ವಯಸ್ಸು 36.. ಮದುವೆಯಾಗಿಲ್ಲ ಅಂತ ಬೇಜಾರು’ ಎಂಬ ಶೀರ್ಷಿಕೆ ಹಾಡನ್ನು ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ. ಟ್ರೇಲರ್‌ ಕೂಡಾ ಮೆಚ್ಚುಗೆ ಗಳಿಸಿದೆ.ಹಿರಿಯ ನಟ ಉಮೇಶ್, ಮಂಜುಳಾ ಜನಾರ್ದನ್‌ ರೋಹಿಣಿ ಜಗರಾಮ್, ಪ್ರಕಾಶ್ ತೂಮಿನಾಡು ತಾರಾಗಣದಲ್ಲಿದ್ದಾರೆ.

ಶಿರಡಿ ಸಾಯಿ ಬಾಲಾಜಿ ಫಿಲ್ಮ್ ಬ್ಯಾನರ್ ಅಡಿ ಲಕ್ಷ್ಮಿಕಾಂತ್ ಎಚ್.ವಿ.ರಾವ್, ತ್ರಿಲೋಕ್ ಝಾ, ಚಿಂತಕುಂಟ ಶ್ರೀದೇವಿ, ಆರ್ ದೀಪಾ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.

ಚಿತ್ರ ಮಾರ್ಚ್‌ 4ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.