ADVERTISEMENT

ವಿಮಾನ ದುರಂತ: ಹೃದಯ ಒಡೆದಿದೆ; ಆಘಾತ ವ್ಯಕ್ತಪಡಿಸಿದ ಬಾಲಿವುಡ್ ಸೆಲೆಬ್ರಿಟಿಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 11:04 IST
Last Updated 12 ಜೂನ್ 2025, 11:04 IST
   

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ ಕುರಿತಂತೆ ಅಕ್ಷಯ್ ಕುಮಾರ್, ಸನ್ನಿ ದೇವಲ್, ರಿತೇಶ್ ದೇಶಮುಖ್, ಕಂಗನಾ ರನೌತ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಎಐ 171 ಏರ್ ಇಂಡಿಯಾ ವಿಮಾನವು ಟೇಕಾಫ್ ಬಳಿಕ ವಿಮಾನ ನಿಲ್ದಾಣದ ಹೊರವಲಯದಲ್ಲಿ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು.

‘ಏರ್ ಇಂಡಿಯಾ ವಿಮಾನ ಪತನದಿಂದ ಆಘಾತವಾಗಿದ್ದು, ಮಾತೇ ಬರುತ್ತಿಲ್ಲ. ಪ್ರಯಾಣಿಕರು ಸುರಕ್ಷಿತವಾಗಿರಲಿ ಎಂದು ಈ ಸಮಯದಲ್ಲಿ ಪ್ರಾರ್ಥನೆ ಮಾತ್ರ ಮಾಡಬಹುದು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ADVERTISEMENT

ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದು ಸನ್ನಿ ದೇವಲ್ ಹೇಳಿದ್ದಾರೆ.

ಅಪಘಾತದಲ್ಲಿ ಮೃತ ಪ್ರಯಾಣಿಕರು, ಅವರ ಕುಟುಂಬ ಸದಸ್ಯರು ಮತ್ತು ಅದರಿಂದ ಹಾನಿಗೊಳಗಾದ ಎಲ್ಲರಿಗೂ ನನ್ನ ಹೃದಯ ಮಿಡಿಯುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಅವರೆಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಈ ದುರಂತದಲ್ಲಿ ಮೃತರ ಕುಟುಂಬ ಸದಸ್ಯರ ನೋವು ೂಹಿಸಲೂ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನೋವು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ನಟಿ ಪರಿಣಿತಿ ಚೋಪ್ರಾ ಬರೆದುಕೊಂಡಿದ್ದಾರೆ.

ವಿಮಾನ ಅಪಘಾತದ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದೇನೆ. ಇದು ಹೃದಯ ವಿದ್ರಾವಕ ಎಂದು ರಿತೇಶ್ ಹೇಳಿದ್ದಾರೆ.

ನಟರಾದ ರಣದೀಪ್ ಹೂಡಾ ಮತ್ತು ಸೋನು ಸೂದ್ ಸಹ ತಮ್ಮ ಸಂತಾಪ ಸೂಚಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದ ಬಗ್ಗೆ ಕೇಳಿ ಹೃದಯ ಒಡೆದಿದೆ. ಸಂತ್ರಸ್ತರ ಪರವಾಗಿ ನನ್ನ ಪ್ರಾರ್ಥನೆ ಇವೆ. ಬದುಕುಳಿದವರಿಗೆ ಮತ್ತು ರಕ್ಷಣಾ ತಂಡಗಳಿಗೆ ದೇವರು ಶಕ್ತಿ ನೀಡಲಿ ಎಂದು ಆಶಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ಈ ದುಃಖದ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ರಣದೀಪ್ ಹೇಳಿದ್ದಾರೆ.

ಅಹಮದಾಬಾದ್‌ನ ವಿಮಾನ ಅಪಘಾತವು ಅತ್ಯಂತ ದುರಂತದ ಮತ್ತು ನೋವಿನಿಂದ ಕೂಡಿದ ಸುದ್ದಿಯಾಗಿದೆ. ಎಲ್ಲರ ಸುರಕ್ಷತೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ದೇವರು ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಟಿ, ರಾಜಕಾರಣಿ ಕಂಗನಾ ರನೌತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.