‘ನನ್ನ ಗಂಡ ಅಮಾಯಕ. ಅವನೇನೂ ತಪ್ಪು ಮಾಡಿಲ್ಲ’ ಎಂಬುದು ಆಕೆಯ ವಾದ. ಅದನ್ನು ಸಾಬೀತು ಮಾಡುವುದು ಹೇಗೆ? ಗಂಡ ಮಾಡಿದ ಕೃತ್ಯವನ್ನು ತಾನೂ ಮಾಡುವುದು! ಒಂದಾದ ಮೇಲೊಂದರಂತೆ ಕೊಲೆಗಳು!
ಹೀಗೆ ಸರಣಿ ಕೊಲೆ ಮಾಡಿದ್ದು ಬೇರಾರೂ ಅಲ್ಲ. ಬಾಲಿವುಡ್‌ನ ಮಾದಕ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್. ಸಿನಿಮಾ ಪರಿಭಾಷೆಯಲ್ಲೇ ಹೇಳುವುದಾದರೆ ‘ಮಿಸೆಸ್ ಸೀರಿಯಲ್ ಕಿಲ್ಲರ್’.
ಇದು, ಜಾಕ್ವೆಲಿನ್ ನಟಿಸುತ್ತಿರುವ ವೆಬ್ ಸರಣಿಯ ಒಂದೆಳೆ ಕತೆ ಮತ್ತು ಶೀರ್ಷಿಕೆ. ಯುವಜನರ ಬೆರಳತುದಿಗೆ ಎಟಕುವ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಅವರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ‘ನೆಟ್‌ಫ್ಲಿಕ್ಸ್‘ನಲ್ಲಿ ‘ಮಿಸೆಸ್ ಸೀರಿಯಲ್ ಕಿಲ್ಲರ್’ ಪ್ರಸಾರವಾಗಲಿದೆ. ಶಿರೀಶ್ ಕುಂದರ್ ನಿರ್ದೇಶಿಸಲಿರುವ ಈ ವೆಬ್ ಸರಣಿಗೆ ಬಂಡವಾಳ ಹೂಡುತ್ತಿರುವವರು ಫರಾಹ್ ಖಾನ್.
15 ಹೊಸ ಸರಣಿಗಳು!
ಭಾರತೀಯ ಪ್ರೇಕ್ಷಕರ ಅಭಿರುಚಿಗೆ ಹೊಂದುವಂತಹ ಮತ್ತು ಸಮಕಾಲೀನ ಸಂಗತಿಗಳನ್ನು ಕುರಿತಾದ ವೆಬ್ ಸರಣಿಗಳನ್ನು ಹೊರತರಲು ನೆಟ್‌ಫ್ಲಿಕ್ಸ್ ಮುಂದಾಗಿದೆ. ಭಾರತದ್ದೇ 10 ಹೊಸ ಸರಣಿಗಳ ಪ್ರಸಾರ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ತನ್ನದಾಗಿಸಿಕೊಂಡಿದೆ.
ಇದೇ ವೇಳೆ ಮುಂದಿನ ವರ್ಷ ಬರಲಿರುವ ವೆಬ್ ಸರಣಿಗಳ ಕುರಿತೂ ಅದು ಪ್ರಕಟಣೆ ಹೊರಡಿಸಿದೆ. ‘2020ರೊಳಗೆ ಒಟ್ಟು 15 ವೆಬ್ ಸರಣಿಗಳನ್ನು ನೀಡಲಿದ್ದೇವೆ. ‘ಮ್ಯೂಸಿಕ್ ಟೀಚರ್’, ‘ಚಾಪ್‌ಸ್ಟಿಕ್ಸ್’, ‘ಅಪ್‌ಸ್ಟಾರ್ಟ್ಸ್’ ಮತ್ತು ‘ಬುಲ್‌ಬುಲ್’ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ‘ ಎಂದೂ, ಡಿಜಿಟಲ್ ಎಂಟರ್‌ಟೇನ್‌ಮೆಂಟ್ ದಿಗ್ಗಜ ನೆಟ್‌ಫ್ಲಿಕ್ಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.