ADVERTISEMENT

‘ಜೂನಿಯರ್‌’ ಹಾಡಿನಲ್ಲಿ ಕಿರೀಟಿ–ಶ್ರೀಲೀಲಾ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 0:09 IST
Last Updated 22 ಮೇ 2025, 0:09 IST
ಕಿರೀಟಿ, ಶ್ರೀಲೀಲಾ 
ಕಿರೀಟಿ, ಶ್ರೀಲೀಲಾ    

‘ಮಾಯಾಬಜಾರ್‌’ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ನಿರ್ದೇಶನದ, ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ‘ಜೂನಿಯರ್‌’ ಜುಲೈ 18ರಂದು ತೆರೆಕಾಣಲಿದೆ. ಚಿತ್ರದ ಮೊದಲ ಹಾಡು ‘ಲೆಟ್ಸ್‌ ಲಿವ್‌ ದಿಸ್‌ ಮೂಮೆಂಟ್‌’ ಇತ್ತೀಚೆಗೆ ರಿಲೀಸ್‌ ಆಗಿದ್ದು, ಹಾಡಿನಲ್ಲಿ ಕಿರೀಟಿ ಹಾಗೂ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. 

ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿರುವ ಈ ಹಾಡಿಗೆ ಕನ್ನಡದಲ್ಲಿ ಪವನ್ ಭಟ್ ಸಾಹಿತ್ಯ ಬರೆದಿದ್ದು,‌ ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ.  

‘ಕಿರೀಟಿಯನ್ನು ಗೆಲ್ಲಿಸಬೇಕು ಎನ್ನುವುದು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞನ ಗುರಿಯಾಗಿತ್ತು. ಹೊಸಬರು ಈ ರೀತಿಯ ಸ್ಕ್ರಿಪ್ಟ್‌ ಆಯ್ಕೆ ಮಾಡಿಕೊಳ್ಳುವುದು ತುಂಬಾ ಕಡಿಮೆ. ತಾನು ಹೀರೊ ಆಗಬೇಕು ಎನ್ನುವತ್ತ ಆತನ ಚಿತ್ತವಿರಲಿಲ್ಲ. ರಾಧಾಕೃಷ್ಣ ಅವರು ಮಾಡಿರುವ ಈ ಕಥೆ ಮನಸ್ಸು ತಟ್ಟುತ್ತದೆ. ಡಬ್ಬಿಂಗ್‌ ಮಾಡಿದ ಸಂದರ್ಭದಲ್ಲಿ ಇದೊಂದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ತೆರೆಕಾಣಲು ಎಷ್ಟು ಸಮಯ ತೆಗೆದುಕೊಂಡಿತು ಎನ್ನುವುದು ಮುಖ್ಯವಲ್ಲ. ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎನ್ನುವುದು ಮುಖ್ಯ. ಈ ಸಿನಿಮಾಗೆ ಆ ಸಾಮರ್ಥ್ಯವಿದೆ’ ಎಂದರು ನಟ ರವಿಚಂದ್ರನ್‌. 

ADVERTISEMENT

ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾತನಾಡಿ, ‘ಭಾವನಾತ್ಮಕ ಕಥೆ ಸಿನಿಮಾದಲ್ಲಿದೆ. ಈ ಹಾಡಿಗೆ ಶ್ರೀಮಣಿ ಅವರು ತೆಲುಗು ಸಾಹಿತ್ಯ ಬರೆದಿದ್ದಾರೆ. ಚಿತ್ರದ ಛಾಯಾಚಿತ್ರಗ್ರಾಹಕರಾದ ಸೆಂಥಿಲ್‌ ಅವರು ಸಿನಿಮಾದ ಬಲ’ ಎಂದರು. 

ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್‌ಮುಖ್‌ ಚಿತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. 

ಸಿನಿಮಾ ಮೂರು ವರ್ಷ ತಡವಾಗಿದೆ. ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಬೆನ್ನಿಗೆ ಪೆಟ್ಟಾಗಿತ್ತು. ಇದರಿಂದಾಗಿ ಒಂದು ವರ್ಷ ಸಂಪೂರ್ಣ ವಿಶ್ರಾಂತಿಯಲ್ಲಿದ್ದೆ. ಇದುವೇ ಸಿನಿಮಾ ವಿಳಂಬವಾಗಲು ಮುಖ್ಯ ಕಾರಣ. ರವಿಚಂದ್ರನ್‌ ಅವರ ಜೊತೆ ಇಪ್ಪತ್ತೈದು ದಿನ ಕೆಲಸ ಮಾಡಲು ಅವಕಾಶ ದೊರಕಿರುವುದು ಪುಣ್ಯ. ಹೊಸ ನಟರಿಗೆ ಇಂತಹ ಅವಕಾಶ ಸಿಗುವುದು ವಿರಳ.
–ಕಿರೀಟಿ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.