ADVERTISEMENT

ಶೈನ್ ಶೆಟ್ಟಿ, ಅಂಕಿತ ಅಮರ್ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಟ್ರೇಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 0:30 IST
Last Updated 15 ಆಗಸ್ಟ್ 2025, 0:30 IST
ಅಂಕಿತ ಅಮರ್‌, ಶೈನ್‌ ಶೆಟ್ಟಿ
ಅಂಕಿತ ಅಮರ್‌, ಶೈನ್‌ ಶೆಟ್ಟಿ   

ಶೈನ್ ಶೆಟ್ಟಿ, ಅಂಕಿತ ಅಮರ್ ಜೋಡಿಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿರ್ಮಿಸಿ, ಸಿ.ಆರ್.ಬಾಬಿ ನಿರ್ದೇಶಿಸಿರುವ ಚಿತ್ರ ಆ.22ರಂದು ತೆರೆ ಕಾಣಲಿದೆ. ಟ್ರೇಲರ್‌ ಬಿಡುಗಡೆ ಸಮಾರಂಭವನ್ನು ಮದುವೆ ಮನೆ ಪರಿಕಲ್ಪನೆಯಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು. ನಟಿಯರಾದ ಶ್ರುತಿ, ಮಾಳವಿಕ ಅವಿನಾಶ್‌ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. 

‘ನಾನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾದ ಸಿ.ಆರ್. ಬಾಬಿ ಅವರಿಗೆ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ನಾನು ಕೂಡ ಚಿತ್ರ ನಿರ್ದೇಶನ ಮಾಡಿ ಎಂದು ಹೇಳುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಚಿತ್ರ ಆರಂಭವಾದ ದಿನದಿಂದಲೂ ನನಗೆ ಚಿತ್ರತಂಡ ನೀಡುತ್ತಿರುವ ಸಹಕಾರ ಅಪಾರ. ಅದರ ಜತೆಗೆ ಶಿವರಾಜಕುಮಾರ್, ಉಪೇಂದ್ರ, ಸುದೀಪ್, ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ನಮ್ಮ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಅನ್ನು ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಚಿತ್ರ ವೀಕ್ಷಣೆ ಮಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ವಿ.ಕೆ ಫಿಲ್ಮ್ಸ್‌ ಮೂಲಕ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ’ ಎಂದರು ಅಜನೀಶ್ ಲೋಕನಾಥ್.

‘ಬಹು ತಾರಾಬಳಗವಿರುವ ನಮ್ಮ ಚಿತ್ರದ ಚಿತ್ರೀಕರಣ ನಿಗದಿತ ಯೋಜನೆಗೂ ಮೂರು ದಿನಗಳ ಮೊದಲೇ ಪೂರ್ಣಗೊಂಡಿತ್ತು. ಅದಕ್ಕೆ ಕಾರಣ‌ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರ. ಚಿತ್ರದ ಹಾಡುಗಳು ಈಗಾಗಲೇ ಸದ್ದು ಮಾಡಿವೆ. ಇದೊಂದು ಸದಭಿರುಚಿಯ ಮನೋರಂಜನೆ ಹೊಂದಿರುವ ಚಿತ್ರ’ ಎಂದರು ನಿರ್ದೇಶಕಿ ಸಿ.ಆರ್.ಬಾಬಿ.

ADVERTISEMENT

‘ಚಿಕ್ಕಂದಿನಿಂದಲೂ ನನಗೆ ನಟನೆಯಲ್ಲಿ ಆಸಕ್ತಿ. ಟಿ.ವಿ ಅಥವಾ ದೊಡ್ಡ ಪರದೆಯಲ್ಲಿ ತಾರೆಯರನ್ನು ನೋಡಿದಾಗ ಇವರೆಲ್ಲಾ ಇಷ್ಟು ಚೆನ್ನಾಗಿ ಹೇಗೆ ಅಭಿನಯಿಸುತ್ತಾರೆ ಎಂದುಕೊಳ್ಳುತ್ತಿದೆ. ಇಂದು ನನಗೂ ಆ ಅವಕಾಶ ಸಿಕ್ಕಿದೆ. ಇದು ನನ್ನ ಎರಡನೇ ಚಿತ್ರ. ಎರಡನೇ ಚಿತ್ರದಲ್ಲೇ ಇಂತಹ ಮಹಾನ್ ತಾರೆಗಳ ಜತೆಗೆ ನಟಿಸುವ ಅವಕಾಶ ಒದಗಿ ಬಂತು‌. ಈ ಅವಕಾಶ ನೀಡಿದ ಇಡೀ ಚಿತ್ರತಂಡಕ್ಕೆ ಋಣಿ’ ಎಂದರು ನಾಯಕಿ ಅಂಕಿತ ಅಮರ್.

ದೇವರಾಜ್‌, ಶ್ರೀಮಾನ್, ವಾಣಿ ಹರಿಕೃಷ್ಣ, ಅಭಿನವ್, ವೇದಿಕಾ ಮುಂತಾದವರು ಚಿತ್ರದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.