ADVERTISEMENT

‘ಬಿಂಬ’ಕ್ಕೆ ಸಿಗದ ಪ್ರಶಸ್ತಿ: ನಟ, ನಿರ್ದೇಶಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 6:47 IST
Last Updated 15 ಜನವರಿ 2020, 6:47 IST
ನಟ ಶ್ರೀನಿವಾಸ ಪ್ರಭು ಮತ್ತು ನಿರ್ದೇಶಕ ಜಿ. ಮೂರ್ತಿ
ನಟ ಶ್ರೀನಿವಾಸ ಪ್ರಭು ಮತ್ತು ನಿರ್ದೇಶಕ ಜಿ. ಮೂರ್ತಿ   

ಬೆಂಗಳೂರು: 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ‘ಬಿಂಬ’ ಚಿತ್ರವನ್ನು ಆಯ್ಕೆ ಮಾಡದ ಬಗ್ಗೆ ನಟ ಶ್ರೀನಿವಾಸ ಪ್ರಭು ಮತ್ತು ನಿರ್ದೇಶಕ ಜಿ. ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯ ಕೆಲವರು ಒಳ್ಳೆಯ ಅನ್ನ ತಿನ್ನುವ ಕೆಲಸ ಮಾಡಿಲ್ಲ, ಗೊಬ್ಬರ ತಿನ್ನುವ ಕೆಲಸ ಮಾಡಿದ್ದಾರೆ’ ಎಂದು ಮೂರ್ತಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಪ್ರಶಸ್ತಿಗೆ ಚಲನಚಿತ್ರಗಳನ್ನು, ಕಲಾವಿದರನ್ನು ಆಯ್ಕೆ ಮಾಡುವ ಸಮಿತಿಯು ಬಿಂಬ ಸಿನಿಮಾವನ್ನು ಏಕೆ ಪರಿಗಣಿಸಲಿಲ್ಲ? ವಿಶ್ವದಲ್ಲಿ ಯಾರೂ ಇಂಥದ್ದೊಂದು ಸಿನಿಮಾ ಮಾಡಿಲ್ಲ. ಸಿನಿಮಾವನ್ನು ಹೇಗೆ ನೋಡಬೇಕು ಎಂಬ ಅರಿವೇ ಸಮಿತಿಗೆ ಇಲ್ಲ’ ಎಂದು ಮೂರ್ತಿ ದೂರಿದರು.

ADVERTISEMENT

‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸಂಸ ಅವರ ಬಗ್ಗೆ ಗೊತ್ತಿಲ್ಲದವರೇ ನಮ್ಮ ಸಿನಿಮಾ ವೀಕ್ಷಿಸಲು ಬಂದಿದ್ದರು. 2018ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆಯಾದವರ ಬಗ್ಗೆ ನಮಗೆ ತಕರಾರು ಇಲ್ಲ. ಅಖಿಲ ಭಾರತ ಮಟ್ಟದಲ್ಲಿ ದಾಖಲೆ ಬರೆದ ಈ ಚಿತ್ರಕ್ಕೆ ಅವರೇ ಕರೆದು ಮನ್ನಣೆ ನೀಡಬೇಕಿತ್ತು. ಆದರೆ, ಚಿತ್ರವನ್ನು ಸ್ಮರಿಸುವ ಸೌಜನ್ಯ ಕೂಡ ಅವರಲ್ಲಿ ಇಲ್ಲ’ ಎಂದು ಪ್ರಭು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಸಿನಿಮಾ ಅಷ್ಟೊಂದು ನಿಕೃಷ್ಟವೇ? ಒಂದು ಒಳ್ಳೆಯ ಚಿತ್ರಕ್ಕೆ ಬೆನ್ನು ತಟ್ಟಲು ಕೂಡ ಆಗದೇ? ಪ್ರಯೋಗಶೀಲತೆಗೆ ಬೆಲೆ ಇಲ್ಲವೇ? ಈ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದಿದ್ದರೆ ಸಂಸ ಅವರ ಬಗ್ಗೆ ಒಂದಿಷ್ಟು ಜನರಿಗೆ ಗೊತ್ತಾಗುತ್ತಿತ್ತು. ಸಂಸ ಅವರ ಕಾರಣಕ್ಕಾಗಿ ನಾವು ಪ್ರಶಸ್ತಿಗೆ ಆಸೆಪಟ್ಟೆವು. ಆಯ್ಕೆ ಸಮಿತಿಯಲ್ಲಿ ಇದ್ದ ಎಷ್ಟು ಜನರಿಗೆ ಸಂಸ ಬಗ್ಗೆ ಗೊತ್ತು ಎಂಬುದನ್ನು ನೋಡಬೇಕು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.