ADVERTISEMENT

ನೂರರಲ್ಲೊಂದೂ ಹಿಟ್‌ ಇಲ್ಲ!

ವಿನಾಯಕ ಕೆ.ಎಸ್.
Published 22 ಮೇ 2025, 23:50 IST
Last Updated 22 ಮೇ 2025, 23:50 IST
   

2024ರ ಅಂತ್ಯದಲ್ಲಿ ಸುದೀಪ್‌ ಅಭಿನಯದ ‘ಮ್ಯಾಕ್ಸ್‌’ ಚಿತ್ರದ ಯಶಸ್ಸಿನಿಂದ ಖುಷಿಯಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಈ ವರ್ಷ ಅತ್ಯಂತ ಕಳಪೆ ವರ್ಷವಾಗಿ ಪರಿಣಮಿಸಿದೆ. 2025ರ ಜನವರಿಯಿಂದ ಈತನಕ 100ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಆದರೆ ಗಳಿಕೆಯಲ್ಲಿ ಯಾವ ಚಿತ್ರವೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ...

‘ಚಿತ್ರಮಂದಿರಗಳಿಗೆ ಜನ ಬರುವುದು ಅಕ್ಷರಶಃ ನಿಂತು ಹೋಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತುಂಬ ಕಳಪೆ. ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ. ಜನರಿಗೆ ನೋಡಲೇ ಬೇಕು ಎನಿಸುವಂಥ ಚಿತ್ರಗಳು ಬರದೇ ಇರುವುದು ಇದಕ್ಕೆ ಕಾರಣವಿರಬಹುದು. ಮೊದಲಾರ್ಧದಲ್ಲಿ ನಿರೀಕ್ಷೆ ಮೂಡಿಸಿದ, ಕುತೂಹಲ ಹುಟ್ಟಿಸಿದ ಸಿನಿಮಾಗಳೂ ಕೂಡ ಕಡಿಮೆ. ಪ್ರಚಾರದ ಹಂತದಿಂದಲೇ ಜನರನ್ನು ಸೆಳೆಯಬೇಕು. ಚಿತ್ರದ ಕಂಟೆಂಟ್‌ಗಳ ಮೂಲಕ ಈ ಚಿತ್ರ ನೋಡಬೇಕೆಂದು ಜನರಲ್ಲಿ ಕುತೂಹಲ ಮೂಡಿಸಬೇಕು. ‘ಯುದ್ಧಕಾಂಡ’ ಮತ್ತು ‘ನೋಡಿದವರು ಏನಂತಾರೆ’ ಚಿತ್ರಗಳಿಗೆ ಸ್ವಲ್ಪ ಮಟ್ಟಿಗೆ ಜನ ಬಂದಿದ್ದಾರೆ. ಆದಾಗ್ಯೂ ಈ ಚಿತ್ರಗಳು ಹಿಟ್‌ ಎನ್ನಲು ಸಾಧ್ಯವಿಲ್ಲ’ ಎನ್ನುತ್ತಾರೆ ಚಿತ್ರ ನಿರ್ಮಾಪಕ, ವಿತರಕ ರವಿಚಂದ್ರ ಎ.ಜೆ. 

‘ಮ್ಯಾಕ್ಸ್‌’ ಯಶಸ್ಸಿನ ಬೆನ್ನಲ್ಲೇ ಜನವರಿ, ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬಂದವು. ಈ ಎರಡು ತಿಂಗಳಲ್ಲಿ ಸುಮಾರು 60 ಸಿನಿಮಾಗಳು ತೆರೆಕಂಡವು. ವಾರಕ್ಕೆ ಹನ್ನೆರಡು ಸಿನಿಮಾಗಳು ತೆರೆಗೆ ಬಂದಿದ್ದೂ ಇದೆ.  ಆದರೆ ಯಾವ ಸಿನಿಮಾಗಳು ಯಶಸ್ಸು ಕಾಣದೆ ನಂತರದ ತಿಂಗಳಲ್ಲಿ ಚಿತ್ರ ಬಿಡುಗಡೆ ಪ್ರಮಾಣ ಕುಸಿಯುತ್ತ ಹೋಯಿತು. ಮಾರ್ಚ್ ಕೊನೆಯ ವಾರದಿಂದ ಸಿನಿಮಾ ಬಿಡುಗಡೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡು, ಚಿತ್ರಮಂದಿರ ಸಮಸ್ಯೆ ಪರಿಹಾರವಾಯಿತು. ಆದಾಗ್ಯೂ ವಾರಕ್ಕೆ ಎರಡೇ ಚಿತ್ರ ಬಿಡುಗಡೆಗೊಂಡರೂ ಜನ ಮಾತ್ರ ಚಿತ್ರಮಂದಿರಗಳತ್ತ ಬರುವುದಿಲ್ಲ ಎಂಬುದು ಸಾಬೀತಾಯಿತು.

ADVERTISEMENT

‘ಒಳ್ಳೆಯ ಸಿನಿಮಾಗಳಿಗೆ ಯಾರೂ ಬೆಂಬಲಕ್ಕೆ ಬರುವುದಿಲ್ಲ. ಕಳಪೆ ಸಿನಿಮಾಗಳನ್ನು ಕೆಲವು ಸ್ಟಾರ್‌ಗಳು ಚಿತ್ರ ನೋಡದೆಯೇ ಪ್ರಚಾರ ಮಾಡುತ್ತಾರೆ ಅನ್ನಿಸುತ್ತದೆ. ನೂರು ದಿನ ಯಶಸ್ವಿ ಪ್ರದರ್ಶನ ಎಂಬ ಹುಸಿ ಪ್ರಚಾರದಿಂದ ಜನ ಬೇಸತ್ತಿದ್ದಾರೆ. ಇತರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ಮೊಬೈಲ್‌ನಲ್ಲಿ ಸುಲಭವಾಗಿ ಸಿಗುತ್ತಿದೆ. ಹೀಗಾಗಿ ಜನ ಸುಲಭವಾಗಿ ಚಿತ್ರಮಂದಿರಗಳಿಗೆ ಬರುವುದಿಲ್ಲ. ಎಲ್ಲರೂ ಅವರವರ ಸಿನಿಮಾ ಬಂದಾಗ ಎದ್ದು ಕೂರುತ್ತಾರೆ. ಬೇರೆ ಉತ್ತಮ ಸಿನಿಮಾ ಬಂದಾಗ ಸುಮ್ಮನಾಗಿ ಬಿಡುತ್ತಾರೆ. ಇದರಿಂದಾಗಿ ಚಿತ್ರೋದ್ಯಮ ಸಂಕಷ್ಟದಲ್ಲಿದೆ’ ಎಂದು ಅಭಿಪ್ರಾಯಪಡುತ್ತಾರೆ ನಿರ್ದೇಶಕ ಹಯವದನ.

ಸ್ಟಾರ್‌ಗಳ ಸಿನಿಮಾವಿಲ್ಲ

ಈ ಆರು ತಿಂಗಳಲ್ಲಿ ‘ಎ’ ಶ್ರೇಣಿಯ ಯಾವ ಸ್ಟಾರ್‌ ಸಿನಿಮಾವೂ ತೆರೆಕಂಡಿಲ್ಲ. ಶರಣ್‌ ಅಭಿನಯದ ‘ಛೂ ಮಂತರ್‌’ ಮಾತ್ರ ತೆರೆಕಂಡಿದ್ದು. ಆದರೆ ಈ ಸಿನಿಮಾ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿ ಚಿತ್ರೋದ್ಯಮಕ್ಕೆ ಹೊಸ ಹುರುಪು ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಶ್ರೀನಗರ ಕಿಟ್ಟಿ, ರಚಿತಾ ರಾಮ್‌ ಅಭಿನಯದ ‘ಸಂಜು ವೆಡ್ಸ್‌ ಗೀತಾ–2’ ತೀರ ಕಳಪೆ ಪ್ರದರ್ಶನ ಕಂಡು ಪ್ರೇಕ್ಷಕರಿಂದ ವ್ಯಾಪಕ ಟೀಕೆ ಎದುರಿಸಿತು. ಚಿಕ್ಕಣ್ಣ, ರಂಗಾಯಣ ರಘು ಮೊದಲಾದವರಿರುವ ‘ಫಾರೆಸ್ಟ್‌’ ಚಿತ್ರ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿದರೂ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲಿಲ್ಲ. ಜನಪ್ರಿಯ ನಟರನ್ನು ಹೊಂದಿರುವ ‘ರುದ್ರ ಗರುಡ ಪುರಾಣ’, ‘ಭುವನಂ ಗಗನಂ’, ‘ಸಿದ್ಲಿಂಗು–2’, ‘ರಾಕ್ಷಸ’, ಯೋಗರಾಜ್‌ ಭಟ್ಟರ ‘ಮನದ ಕಡಲು’ ಚಿತ್ರಗಳು ವ್ಯಾಪಕ ಪ್ರಚಾರದ ನಡುವೆಯೂ ಗಳಿಕೆಯಲ್ಲಿ ಯಶಸ್ಸು ಕಾಣಲಿಲ್ಲ. 

ಗಮನ ಸೆಳೆದವರು...

ಈ ಆರು ತಿಂಗಳಲ್ಲಿ ತೆರೆಕಂಡ ಚಿತ್ರಗಳಲ್ಲಿ ಶೇಕಡಾ 70ರಷ್ಟು ಹೊಸಬರದ್ದು. ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ‘ಅನಾಮಧೇಯ ಅಶೋಕ ಕುಮಾರ್‌’ ‘ಭಾವ ತೀರ ಯಾನ’ ‘ಅಪಾಯವಿದೆ ಎಚ್ಚರಿಕೆ’ ‘ಎಲ್ಲೋ ಜೋಗಪ್ಪ ನಿನ್ನರಮನೆ’ ‘ಅಜ್ಞಾತವಾಸಿ’ ‘ಪಪ್ಪಿ’ ಚಿತ್ರಗಳು ಸ್ವಲ್ಪ ಸದ್ದು ಮಾಡಿದವು. ನವೀನ್‌ ಶಂಕರ್‌ ಅಭಿನಯದ ‘ನೋಡಿದವರು ಏನಂತಾರೆ?’ ಚಿತ್ರ 25 ದಿನಗಳನ್ನು ಪೂರೈಸಿ ಗಳಿಕೆಯಲ್ಲಿಯೂ ತಕ್ಕಮಟ್ಟಿನ ಯಶಸ್ಸು ಸಾಧಿಸಿತು. ಅಜಯ್‌ ರಾವ್‌ ನಟನೆಯ ‘ಯುದ್ಧಕಾಂಡ’ ವಿಭಿನ್ನವಾದ ಕಥೆಯೊಂದಿಗೆ ಒಂದಷ್ಟು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತಂದಿತು. 

ನಿರೀಕ್ಷಿತ ಸಿನಿಮಾಗಳು...

ರಿಷಭ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಅಕ್ಟೋಬರ್‌ 2ರಂದು ತೆರೆ ಕಾಣಲಿದೆ. ಧ್ರುವ ಸರ್ಜಾ ಅಭಿನಯದ ‘ಕೆಡಿ’ ಶಿವರಾಜ್‌ಕುಮಾರ್‌ ಉಪೇಂದ್ರ ನಟನೆಯ ‘45’ ಪ್ರಜ್ವಲ್‌ ದೇವರಾಜ್‌ ನಟನೆಯ ‘ಕರಾವಳಿ’ ಯುವ ರಾಜ್‌ಕುಮಾರ್‌ ‘ಎಕ್ಕ’ ಮುಂದಿನ ಆರು ತಿಂಗಳಲ್ಲಿ ತೆರೆ ಕಾಣಲಿರುವ ನಿರೀಕ್ಷಿತ ಚಿತ್ರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.