ADVERTISEMENT

ದೆಹಲಿಯ ನಿರ್ಭಯಾ ಪ್ರಕರಣ 'ರಂಗನಾಯಕಿ'ಯಾಗಿ ಬೆಳ್ಳಿತೆರೆಗೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:30 IST
Last Updated 5 ಸೆಪ್ಟೆಂಬರ್ 2019, 19:30 IST
ದಯಾಳ್‌ ಪದ್ಮನಾಭನ್‌
ದಯಾಳ್‌ ಪದ್ಮನಾಭನ್‌   

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ದೆಹಲಿಯ ನಿರ್ಭಯ ಪ್ರಕರಣದ ಕಥೆ ನೆನಪಿಸುವ, ನಿರ್ಭಯ ಒಂದು ವೇಳೆ ಬದುಕಿದ್ದರೆ ಸಮಾಜವನ್ನು ಹೇಗೆ ಎದುರಿಸುತ್ತಿದ್ದಳು ಎನ್ನುವ ಸಂದೇಶ ಹೇಳಲು ನಿರ್ದೇಶಕ ದಯಾಳ್‌ ಪದ್ಮನಾಭನ್‌ ಕೈಗೆತ್ತಿಕೊಂಡಿರುವ ‘ರಂಗನಾಯಕಿ’ ವರ್ಜಿನಿಟಿ ವಾಲ್ಯೂಮ್‌–1 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಇದರ ಮೊದಲ ಟ್ರೇಲರ್‌ ಅನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ಹಿರಿಯ ನಟಿ ತಾರಾ ಬಿಡುಗಡೆ ಮಾಡಿದರು.

ಮಸಾಲ ಚಿತ್ರಗಳಿಂದ ಮೆಸೇಜ್‌ ನೀಡುವ ಚಿತ್ರಗಳತ್ತ ಮುಖ ಮಾಡಿರುವ ದಯಾಳ್‌ ಪದ್ಮನಾಭನ್‌ ಪ್ರಯತ್ನಕ್ಕೆ ಚಿತ್ರರಂಗದ ಗಣ್ಯರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ನಿರ್ಭಯ ಪ್ರಕರಣ ನಡೆದಾಗ, ಈ ಪ್ರಕರಣದಲ್ಲಿ ನಾವು ಸಮಾಜಕ್ಕೆ ಹೇಳಬೇಕಾದದ್ದು ಬಹಳಷ್ಟು ಇದೆ ಎನಿಸಿ ನನ್ನ ಮಗಳಿಗೆ ಈ ಬಗ್ಗೆ ಒಂದು ಕಾದಂಬರಿ ಬರೆಯಲು ಹೇಳಿದ್ದೆ. ಕೊನೆಗೆ ನಾನೇ ಕಾದಂಬರಿ ಬರೆದೆ.
ಅದನ್ನು ಸಿನಿಮಾ ಮಾಡುವ ಆಲೋಚನೆ ಬಂದಾಗ,ಎಸ್‌.ವಿ. ನಾರಾಯಣ್‌ ಬಂಡವಾಳ ಹೂಡಲು ಮುಂದೆ ಬಂದರು. ಈಗ ವಾಲ್ಯೂಮ್‌ 2ಕ್ಕೂ ಅವರೇ ಬಂಡವಾಳ ಹೂಡಲು ಆಸಕ್ತರಾಗಿದ್ದಾರೆ. ಎರಡನೇ ಭಾಗದ ಕಥೆಭಾವತೀವ್ರವಾಗಿದ್ದು, ಅದರಲ್ಲಿ ತಾರಾ ‌ಅಭಿನಯಿಸಬೇಕೆಂದು ದಯಾಳ್‌, ಎಲ್ಲರ ಸಮ್ಮುಖದಲ್ಲಿ ಅವರ ಕಾಲ್‌ಶೀಟ್‌ ಕೇಳಿದರು. ಅದಕ್ಕೆ ಅವರು ಸಮ್ಮತಿ ನೀಡುವಂತೆಯೇ ನಸುನಕ್ಕರು.

ADVERTISEMENT

‘ರಂಗನಾಯಕಿ’ಯಾಗಿ ಅಭಿನಯಿಸಿರುವ ಅದಿತಿ ಪ್ರಭುದೇವ, ಕಥೆ ಕೇಳುವಾಗ ನನ್ನ ಅಪ್ಪನೂ ಪಕ್ಕದಲ್ಲೇ ಕುಳಿತಿದ್ದರು. ಕಣ್ಣೀರು ಬಿಟ್ಟರೆ ನನ್ನಲ್ಲಿ ಯಾವುದೇ ಪ್ರಶ್ನೆಗಳು ಬಾಕಿ ಉಳಿದಿರಲಿಲ್ಲ. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡು ಅಭಿನಯಿಸಿದ್ದೇನೆ. ‘ರಂಗನಾಯಕಿ’ ಸಾವಿರಾರು ಮಂದಿ ಶೋಷಿತ ಹೆಣ್ಣುಮಕ್ಕಳ ಪ್ರತಿನಿಧಿಯಾಗಿದ್ದಾಳೆ. ನಮ್ಮ ಜೀವನ ಮತ್ತು ಜೀವಕ್ಕೆ ನಾವೇ ಹೊಣೆ ಎನ್ನುವುದನ್ನು ಈ ಸಿನಿಮಾದಿಂದ ಕಲಿತಿದ್ದೇನೆ ಎಂದು ವಿವರಿಸಿದರು.

ಹಿರಿಯ ನಟಿ ತಾರಾ, ಅತ್ಯಾಚಾರ ಎನ್ನುವುದು ಹೆಣ್ಣುಮಕ್ಕಳಿಗೆ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಆದಿಕಾಲದಿಂದಲೂ ನಡೆಯುತ್ತಿದೆ.ಈ ಪದವೇ ಒಂದು ರೀತಿ ಹೆಣ್ಣಿಗೆ ಶಿಕ್ಷೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.‘ರಂಗನಾಯಕಿ’ ಎನ್ನುವ ಹೆಸರೇ ರೋಮಾಂಚನ ಮೂಡಿಸುತ್ತದೆ. ಈ ಚಿತ್ರದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಮುಟ್ಟಲಿ ಎಂದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ಸಂವಹನ ಕೌಶಲವೇ ನಿರ್ದೇಶಕನ ಶಕ್ತಿ. ದಯಾಳ್‌ಗೆ ಅದು ಚೆನ್ನಾಗಿ ಸಿದ್ಧಿಸಿದೆ. ಕಥೆ ಹೇಳುವ ಅವರ ಕೌಶಲವೇ ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದರು.

ಈ ಸಿನಿಮಾ ನೋಡುವಪ್ರತಿ ಹೆಂಗಸರ ಮನಸ್ಸಿನಲ್ಲಿ ಗೆಲುವು, ಸೋಲಿನ ಅನುಭವ ಮೂಡಿದರೂ, ಕೊನೆಗೆ ‘ರಂಗನಾಯಕಿ’ ಗೆದ್ದಿದ್ದಾಳೆ ಎನ್ನುವ ನಿರಾಳಭಾವ ನೆಲೆಸುತ್ತದೆ ಎನ್ನುವ ಮಾತು ಸೇರಿಸಿದರುನಿರ್ಮಾಪಕ ಎಸ್.ವಿ. ನಾರಾಯಣ್.

ನಾಯಕರಾಗಿ ನಟಿಸಿರುವ ಶ್ರೀನಿ, ತ್ರಿವಿಕ್ರಮ್, ನಟರಾದ ಸುಂದರ್‌,ಚಂದ್ರಚೂಡ್ ಅನಿಸಿಕೆ ಹಂಚಿಕೊಂಡರು. ನಟಿ ಅರ್ಚನಾ ಜೋಯಿಸ್, ‘ಒರಟ’ ಪ್ರಶಾಂತ್, ಬಾ.ಮ. ಹರೀಶ್ ಹಾರೈಸಿದರು.ಹಾಡುಗಳಿಗೆ ಪಲ್ಲವಚಾರ್ಯ ಸಾಹಿತ್ಯ ಬರೆದಿದ್ದಾರೆ. ಕದ್ರಿಮಣಿಕಾಂತ್ ಸಂಗೀತ ಸಂಯೋಜಿಸಿದ್ದಾರೆ.ರಾಕೇಶ್ ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.