ADVERTISEMENT

‘ಖನನ’ ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:26 IST
Last Updated 4 ಮೇ 2019, 20:26 IST
ಕರಿಷ್ಮಾ ಬರೂಹ 
ಕರಿಷ್ಮಾ ಬರೂಹ    

‘ಜೀವನದಲ್ಲಿ ಪ್ರೀತಿ, ನಂಬಿಕೆ ಮುಖ್ಯವಲ್ಲ. ಪ್ರೀತಿ ಪಡೆಯಲು, ನಂಬಿಕೆ ಉಳಿಯಲು ಸ್ವಾತಂತ್ರ್ಯ ಬೇಕು’ ಎಂದು ಬದುಕಿನ ಪಾಠ ಹೇಳಿದರು ನಟ ಆರ್ಯವರ್ಧನ್.

ಎಸ್‌. ನಲಿಗೆ ಪ್ರೊಡಕ್ಷನ್‌ನಡಿ ನಿರ್ಮಾಣವಾಗಿರುವ ‘ಖನನ’ ಚಿತ್ರ ಇದೇ ಶುಕ್ರವಾರ ಮೂರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.ತಮಿಳಿನಲ್ಲಿ ಇದಕ್ಕೆ ‘ದಗನಂ’ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ ‘ಖನನಂ’ ಎಂದು ಹೆಸರಿಡಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಆಗಮಿಸಿತ್ತು.

ಐದು ಶೇಡ್‌ಗಳಿರುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಆರ್ಯವರ್ಧನ್‌ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದರು. ‘ನಾವೆಲ್ಲರೂ ಹಣದ ಹಿಂದೆ ಬಿದ್ದಿದ್ದೇವೆ. ನೆಮ್ಮದಿಯಿಂದ ಬದುಕುವುದನ್ನು ಮರೆತಿದ್ದೇವೆ’ ಎಂದು ಅವರು ಮಾತು ವಿಸ್ತರಿಸಿದರು.

ADVERTISEMENT

ಪಾಪ ಮಾಡುವಾಗ ಆನಂದ ಇರುತ್ತದೆ. ಆದರೆ, ಅದರ ಪರಿಣಾಮ ಭೀಕರವಾಗಿರುತ್ತದೆ. ಪಾಪ ಶಾಪವಾಗಿ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ.

ನಿರ್ದೇಶಕ ರಾಧ ಅವರಿಗೆ ಇದು ಮೊದಲ ಚಿತ್ರ. ‘ಚಿತ್ರದ ಸನ್ನಿವೇಶಗಳು ವಿಭಿನ್ನವಾಗಿವೆ. ಅರ್ಧಗಂಟೆ ಕಾಲ ಕ್ಲೈಮ್ಯಾಕ್ಸ್‌ ಇರಲಿದೆ. ನೋಡುಗರಿಗೆ ಹೊಸತನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುವ ವಿಶ್ವಾಸ ಅವರ ಮಾತಿನಲ್ಲಿತ್ತು.

ನಿರ್ಮಾಪಕ ಬಿ. ಶ್ರೀನಿವಾಸ್‌ ರಾವ್‌ ಬಾಲ್ಯದಲ್ಲಿ ಸಿನಿಮಾದ ಹುಚ್ಚು ಹಿಡಿಸಿಕೊಂಡು ಚೆನ್ನೈಗೆ ಹೋಗಿ ಮೋಸ ಹೋಗಿದ್ದನ್ನು ನೆನಪಿಸಿಕೊಂಡರು. ತನ್ನ ನಟನೆಯ ಕನಸನ್ನು ಮಗ ಆರ್ಯವರ್ಧನ್‌ ಮೂಲಕ ಈಡೇರಿಸಿಕೊಳ್ಳುವ ತವಕ ಅವರಲ್ಲಿತ್ತು.

ಪ್ರಸ್ತುತ ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಚಿತ್ರಮಂದಿರದಲ್ಲಿ ಕನಿಷ್ಠ ಎರಡು ವಾರಗಳ ಕಾಲ ಪ್ರದರ್ಶನ ಕಾಣುವುದು ಅನಿವಾರ್ಯ. ಅದಕ್ಕಾಗಿಯೇ ಅವರು ಚಿತ್ರಮಂದಿರಕ್ಕೆ ಮುಂಗಡವಾಗಿ ಎರಡು ವಾರದ ಬಾಡಿಗೆಯನ್ನೂ ಪಾವತಿಸಿದ್ದಾರಂತೆ.

‘ಪ್ರತಿ ಹಳ್ಳಿಯಲ್ಲೂ ಖನನದ ಬಗ್ಗೆ ತಿಳಿಸಲು ಪ್ರಚಾರ ವ್ಯವಸ್ಥೆ ಕೈಗೊಂಡಿದ್ದೇನೆ. ಉಚಿತವಾಗಿ 5 ಸಾವಿರ ಟಿಕೆಟ್‌ ಹಂಚುವ ವ್ಯವಸ್ಥೆಯನ್ನೂ ಮಾಡಿದ್ದೇನೆ’ ಎಂದು ಮಾಹಿತಿ ನೀಡಿದರು.

ಕರಿಷ್ಮಾ ಬರೂಹ ಈ ಚಿತ್ರದ ನಾಯಕಿ. ಯುವಕಿಶೋರ್‌, ಅವಿನಾಶ್‌, ಓಂಪ್ರಕಾಶ್‌ ರಾವ್‌, ಬ್ಯಾಂಕ್‌ ಜನಾರ್ಧನ್, ವಿನಯಾಪ್ರಸಾದ್‌ ತಾರಾಗಣದಲ್ಲಿದ್ದಾರೆ. ಕುನ್ನಿ ಗುಡಿಪತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಮೇಶ್‌ ತಿರುಪತಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.