ADVERTISEMENT

ಸ್ಯಾಂಡಲ್‌ವುಡ್‌ಗೆ ಕೊಡಗಿನ ಬೆಡಗಿ ತೇಜಸ್ವಿನಿ ಶರ್ಮಾ

ಕೆ.ಎಂ.ಸಂತೋಷ್‌ ಕುಮಾರ್‌
Published 8 ನವೆಂಬರ್ 2019, 3:39 IST
Last Updated 8 ನವೆಂಬರ್ 2019, 3:39 IST
   

ರಿಸರ್ಚ್‌ ಅನಾಲಿಸ್ಟ್‌ ಆಗಿ ಕಾರ್ಪೊರೇಟ್‌ ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದ ತೇಜಸ್ವಿನಿ ಶರ್ಮಾ, ಕಾರ್ಪೊರೇಟ್‌ ಕ್ಷೇತ್ರದ ಉದ್ಯೋಗ ತೊರೆದು, ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದಾರೆ. ಒಳ್ಳೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.

ಸೌಂದರ್ಯದ ಖನಿಯಂತಿರುವ ತೇಜಸ್ವಿನಿ ಶರ್ಮಾ, ಕೊಡಗಿನ ಬೆಡಗಿ. 2017ರ ವರ್ಲ್ಡ್‌ ಸೂಪರ್‌ ಮಾಡೆಲ್‌ ಸೌತ್‌ ಏಷ್ಯಾ ಕಿರೀಟ ಧರಿಸಿದ ಸುಂದರಿ ಇವರು. ಸಾಫ್ಟ್‌ವೇರ್‌ ಎಂಜಿನಿಯರ್‌, ಫ್ಯಾಷನ್‌ ಕೊರಿಯೊಗ್ರಾಫರ್‌ ಆಗಿದ್ದವರು. ನಟನೆಯತ್ತ ಒಲವು ಇದ್ದಿದ್ದರಿಂದ ಈಗ ನಟಿಯಾಗಿ ಬಣ್ಣದಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತೇಜಸ್ವಿನಿನಟಿಸಿರುವ ಕಲಾತ್ಮಕ ಚಿತ್ರ ‘ಕೊಡುಗ್ರ ಸಿಪಾಯಿ’ ಈ ಬಾರಿಯ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ.ಸದ್ಯ ಅವರು ಬಾರಿಕೆ ಸಹೋದರರ ನಿರ್ಮಾಣದ ‘ಬೈಲಾ’ ಚಿತ್ರದಲ್ಲೂನಾಯಕಿಯಾಗಿ ನಟಿಸುತ್ತಿದ್ದಾರೆ.ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಹೊಸ ನಿರ್ದೇಶಕ ಕಿಶೋರ್‌ ನಿರ್ದೇಶಿಸುತ್ತಿರುವ ಹೆಸರಿಡದ ಇನ್ನೊಂದು ಚಿತ್ರದಲ್ಲೂ ತೇಜಸ್ವಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಕೂಡ ನಾಯಕಿ ಪ್ರಧಾನ ಚಿತ್ರ. ಇನ್ನು ‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ತೇಜಸ್ವಿನಿ ಸಖತ್‌ ಸ್ಟೆಪ್‌ ಹಾಕಿದ್ದಾರಂತೆ. ಕನ್ನಡಚಿತ್ರರಂಗದಲ್ಲಿಅಭಿನೇತ್ರಿಯಾಗಿ ನೆಲೆಯೂರುವ ಗುರಿ ಇಟ್ಟುಕೊಂಡಿರುವ ತೇಜಸ್ವಿನಿ ‘ಸಿನಿಮಾ ಪುರವಣಿ’ಯೊಂದಿಗೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ADVERTISEMENT

ಮಕಾವ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ವರ್ಲ್ಡ್‌ ಸೂಪರ್‌ ಮಾಡೆಲ್‌ ಸೌತ್‌ ಏಷ್ಯಾ ಅವಾರ್ಡ್‌ ಸಿಕ್ಕಿದ ನಂತರ ಮಾಡೆಲಿಂಗ್‌ನಲ್ಲಿ ಸಾಕಷ್ಟು ಅವಕಾಶಗಳು ಈ ಸುಂದರಿಯನ್ನು ಅರಸಿ ಬಂದವು. ‘ನನಗೆ ಕಾರ್ಪೋರೆಟ್‌ ಕ್ಷೇತ್ರಕ್ಕಿಂತಲೂ ಆಸಕ್ತಿ ಇದ್ದಿದ್ದು ಅಭಿನಯ ಕ್ಷೇತ್ರದತ್ತ.ಕಾರ್ಪೋರೆಟ್‌ ಕ್ಷೇತ್ರದ ಕೆಲಸದ ಒತ್ತಡದಲ್ಲಿನಮ್ಮಲ್ಲಿನ ನಿಜವಾದ ಪ್ರತಿಭೆ ಹೊರಹಾಕಲು ಆಗುವುದಿಲ್ಲ.ನನ್ನ ಮನಸು ಸದಾ ತುಡಿಯುತ್ತಿದ್ದುದು ನಾನೊಬ್ಬಳು ನಟಿಯಾಗಬೇಕೆಂಬ ಗುರಿಯ ಕಡೆಗೆ. ಹಾಗಾಗಿ ಬಣ್ಣದ ಬದುಕಿನತ್ತ ಮುಖಮಾಡಿದೆ. ದೊಡ್ಡ ಅವಕಾಶಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಳ್ಳೆಯ ಅವಕಾಶ ಸಿಗುವವರೆಗೂ ಕಾಯುತ್ತೇನೆ. ಕಾಯುವ ವ್ಯವಧಾನವಿದೆ’ ಎನ್ನುವ ಇವರು, ನಟನಾ ಬದುಕಿನ ಬಗ್ಗೆ ಅಪಾರ ಭರವಸೆಯನ್ನು ಇಟ್ಟುಕೊಂಡಿದ್ದಾರೆ.

ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿರುವ ತೇಜಸ್ವಿನಿ, ಓದಿದ್ದುಮೈಸೂರಿನ ವಿದ್ಯಾ ವಿಕಾಸ ಎಂಜಿನಿಯರಿಂಗ್‌ ಕಾಲೇಜಿನಲ್ಲಿ.ಇವರ ತಂದೆ ಮೈಸೂರಿನವರು, ತಾಯಿ ಮಡಿಕೇರಿಯವರು. ಇವರ ಕುಟುಂಬ ನೆಲೆಸಿರುವುದು ಮಡಿಕೇರಿಯಲ್ಲಿ. ಕಾರ್ಪೋರೆಟ್‌ ಉದ್ಯೋಗ ತೊರೆದು, ಅಭಿನಯ ರಂಗದತ್ತ ಬಂದಿರುವ ಇವರಿಗೆ ಅಪ್ಪ–ಅಮ್ಮನೂ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ‘ನಮ್ಮ ತಂದೆ ಕೂಡ ರಂಗಭೂಮಿಯ ನಟ. ಒಳ್ಳೆಯ ಡಾನ್ಸರ್‌ ಕೂಡ ಹೌದು. ನನಗೆ ಬರುವ ಸ್ಕ್ರಿಪ್ಟ್‌ಗಳ ಬಗ್ಗೆ ನನ್ನ ತಂದೆ ಬಳಿಯೇ ಚರ್ಚಿಸಿ ತೀರ್ಮಾನ ಮಾಡುತ್ತೇನೆ’ ಎನ್ನಲು ಮರೆಯಲಿಲ್ಲ ತೇಜಸ್ವಿನಿ.

ನಟನೆಗೆ ಬರುವುದಕ್ಕೂ ಮೊದಲು ಫ್ಯಾಷನ್‌ ಎಬಿಸಿಡಿ ಏಜೆನ್ಸಿ, ಎಂಆರ್‌ಕೆಜ್ಯುವೆಲರಿಗೆ ರೂಪದರ್ಶಿಯಾಗಿದ್ದ ಇವರು, ಒಂದಿಷ್ಟು ಸಿದ್ಧತೆ ಮಾಡಿಕೊಂಡೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ‘ಅಭಿನಯವನ್ನು ಯಾವುದೇ ತರಗತಿಗೆ ಹೋಗಿ ಕಲಿಯಲಿಲ್ಲ. ಪಿಯುಸಿಯಲ್ಲಿರುವಾಗಲೇ ಡಾನ್ಸ್‌ನಲ್ಲಿ ತುಂಬಾ ಆಸಕ್ತಿ ಇತ್ತು.ಭರತ ನಾಟ್ಯ ಕಲಿತಿದ್ದೇನೆ. ‌ಕಾಲೇಜಿನಲ್ಲಿರುವಾಗಲೂಸಾಕಷ್ಟು ಸ್ಕಿಟ್‌ಗಳನ್ನು ಮಾಡುತ್ತಿದ್ದೆವು. ವಿದ್ಯಾವಿಕಾಸಕಾಲೇಜಿನಲ್ಲಿ ನಮ್ಮದೇ ಆದ ನೃತ್ಯ ತಂಡ ‘ಸ್ಟೀಲರ್ಸ್‌’ ಕಟ್ಟಿಕೊಂಡಿದ್ದೆವು. ಕಲೆಯಲ್ಲಿರುವ ಆಸಕ್ತಿಯನ್ನು ತೋರ್ಪಡಿಸಲು ಸೃಜನಶೀಲ ಕ್ಷೇತ್ರದಲ್ಲಿಒಂದು ಸೂಕ್ತ ವೇದಿಕೆಗಾಗಿ ಹಂಬಲಿಸುತ್ತಿದ್ದೆ’ ಎಂದರು.

‘ಕೊಡುಗ್ರ ಸಿಪಾಯಿ’ ಚಿತ್ರದತ್ತ ಮಾತು ಹೊರಳಿಸಿದ ಅವರು, ‘ಇದೊಂದು ಕಲಾತ್ಮಕ ಸಿನಿಮಾವಾಗಿದ್ದರಿಂದ ಅಭಿನಯದತ್ತ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಈ ಚಿತ್ರದ ನಿರ್ದೇಶಕ ಕೊಟ್ಟು ಕಟ್ಟೀರ ಪ್ರಕಾಶ್‌ ಕಾರ್ಯಪ್ಪ, ಚಿತ್ರ ತಂಡದ ಕೌಶಿಕ್‌, ಅರ್ಜುನ್‌ ಅವರ ಬಳಿ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿತು. ಮಾಡೆಲಿಂಗ್‌ ಜಗತ್ತಿನಿಂದ ಬಂದವರು ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ, ಈ ಸಂಪ್ರದಾಯ ಮುರಿದು ಹಳ್ಳಿ ಹುಡುಗಿ ಮತ್ತು ಸಿಂಪಲ್ಲಾದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ. ಜನರು ಯಾವ ರೀತಿ ಸ್ವೀಕರಿಸುತ್ತಾರೋ ಗೊತ್ತಿಲ್ಲ.ಇದು ಟ್ರಯಲ್‌ ಅಂಡ್‌ ಎರರ್‌ ಎಂದುಕೊಳ್ಳುತ್ತೇನೆ’ ಎಂದು ವಿನಮ್ರವಾಗಿ ಹೇಳಿಕೊಂಡರು.

‘ಕನ್ನಡ ಚಿತ್ರರಂಗದಲ್ಲಿಭವಿಷ್ಯ ರೂಪಿಸಿಕೊಳ್ಳುವ ಗುರಿ ಇದೆ. ಕನ್ನಡ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುವ ಹಂಬಲವೂ ಇದೆ. ನಮ್ಮ ಮಾತೃಭಾಷೆಯಲ್ಲಿ ನಾವು ಹೆಚ್ಚು ಕಂಫರ್ಟಬಲ್‌ ಆಗಿರುವುದು ಕೂಡ ಇದಕ್ಕೆ ಕಾರಣ. ಹಾಗಂತಒಂದೇ ಭಾಷೆಗೆಸೀಮಿತವಾಗಿರಬೇಕೆಂದು ಚೌಕಟ್ಟು ಹಾಕಿಕೊಳ್ಳುವುದಿಲ್ಲ. ಒಳ್ಳೆಯ ಕಥೆ–ಪಾತ್ರಗಳ ಸಿನಿಮಾ ಸಿಕ್ಕಿದರೆ ಬೇರೆ ಯಾವುದೇ ಭಾಷೆಯಾದರೂ ನಟನೆಗೆ ಅಡ್ಡಿ ಇಲ್ಲ. ವಿಭಿನ್ನ ಪಾತ್ರವಾಗಿದ್ದು, ಅದರಲ್ಲಿ ಅಭಿನಯಿಸುವುದು ಸವಾಲು ಆಗಿರಬೇಕೆಂದು ಬಯಸುತ್ತೇನೆ. ನಮ್ಮ ನಟನೆ, ಪಟ್ಟಶ್ರಮ ತೆರೆಯ ಮೇಲೆ ಕಾಣುವಂತಿರಬೇಕು’ ಎನ್ನುವ ಅವರು, ಅವಕಾಶ ಸಿಕ್ಕರೆ, ಪರಭಾಷೆಗೂ ಜಿಗಿಯಲು ಸಿದ್ಧವಾಗಿರುವುದನ್ನು ಮುಚ್ಚುಮರೆ ಇಲ್ಲದೆ ಹೇಳಿದರು.

ಗ್ಲಾಮರ್‌ ಮತ್ತು ಬೋಲ್ಡ್‌ ಪಾತ್ರಗಳ ಬಗ್ಗೆ ತೇಜಸ್ವಿನಿ ತೀರಾ ಮಡಿವಂತಿಕೆಯನ್ನೇನು ಇಟ್ಟುಕೊಂಡಿಲ್ಲ.ಅದು ಅವರ ಮಾತಿನಲ್ಲೂ ವ್ಯಕ್ತವಾಯಿತು. ‘ಇಂತಹದ್ದೇ ಪಾತ್ರಬೇಕೆಂಬ ಪಟ್ಟು ಇಲ್ಲ. ಹಾಗಂತ ಸಿಕ್ಕಸಿಕ್ಕ ಪಾತ್ರಗಳಲ್ಲಿ ನಟಿಸುವ ಧಾವಂತವೂ ಇಲ್ಲ. ಪಾತ್ರದಲ್ಲಿ ಬೋಲ್ಡ್‌ನೆಸ್‌ ನೋಡಲು ಹೋಗುವುದಿಲ್ಲ.ಗ್ಲಾಮರ್‌ ಇದೆಯೇ ಎನ್ನುವುದನ್ನು ನೋಡುತ್ತೇನೆ. ಆದರೆ, ಕೆಲವೊಮ್ಮೆ ಬೋಲ್ಡ್‌ ಇದ್ದರೂ ಅದನ್ನು ತುಂಬಾ ಬ್ಯೂಟಿಫುಲ್ಲಾಗಿ ತೋರಿಸುತ್ತಾರಲ್ಲವೇ? ಒಂದು ಹುಡುಗಿಯನ್ನು ತುಂಬಾ ಬ್ಯೂಟಿಫುಲ್ಲಾಗಿ ತೋರಿಸುವಂತಹ ಯಾವುದೇ ಪಾತ್ರವಾಗಲಿ ಅಂತಹದ್ದನ್ನು ಒಪ್ಪಿಕೊಳ್ಳುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.