ADVERTISEMENT

ಅಸ್ತಿತ್ವದ ಹೋರಾಟ ಈ ‘ಲ್ಯಾಂಡ್‌ ಲಾರ್ಡ್‌’

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 0:02 IST
Last Updated 24 ಜನವರಿ 2025, 0:02 IST
ದುನಿಯಾ ವಿಜಯ್‌ 
ದುನಿಯಾ ವಿಜಯ್‌    

ದರ್ಶನ್ ನಾಯಕರಾಗಿ ನಟಿಸಿದ್ದ ‘ಸಾರಥಿ’ ಚಿತ್ರ ನಿರ್ಮಿಸಿದ್ದ ಕೆ‌.ವಿ.ಸತ್ಯಪ್ರಕಾಶ್ ಹನ್ನೆರಡು ವರ್ಷಗಳ ನಂತರ ‘ಸಾರಥಿ ಫಿಲಂಸ್’ ಮೂಲಕ ‘ದುನಿಯಾ’ ವಿಜಯ್‌ ನಟನೆಯ ‘ಲ್ಯಾಂಡ್‌ ಲಾರ್ಡ್‌’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 

‘ಜಂಟಲ್ ಮ್ಯಾನ್’, ‘ಗುರುಶಿಷ್ಯರು’ ಚಿತ್ರಗಳ ನಿರ್ದೇಶಕ ಹಾಗೂ ‘ಕಾಟೇರ’ ಸಿನಿಮಾದ ಕಥೆ ಬರೆದ ಜಡೇಶ ಕೆ. ಹಂಪಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಚಿತ್ರದ ಚಿತ್ರೀಕರಣ ಸದ್ಯ ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಸೆಟ್‌ನಲ್ಲಿ ನಡೆಯುತ್ತಿದೆ. 

ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು. ‘ಇದೊಂದು ಹಳ್ಳಿ ಹಿನ್ನೆಲೆಯ ಕಥೆ. ‘ಕಾಟೇರ’ಕ್ಕೂ ಇದಕ್ಕೂ ಸಂಬಂಧವಿಲ್ಲ. ಇಲ್ಲಿಯೂ ಅಸ್ತಿತ್ವದ ಹೋರಾಟ ಇರುತ್ತದೆ. 80–90ರ ದಶಕದ ಕಥೆ ಇದಾಗಿದೆ. ಕೋಲಾರ ಸುತ್ತಮುತ್ತ ನಡೆದ ಈಗಲೂ ನಡೆಯುತ್ತಿರುವ ಘಟನೆಯನ್ನು ಕಥೆ ಹೊಂದಿದೆ. ಈ ಕಥೆಯ ಒನ್‌ಲೈನ್‌ ಅನ್ನು ವಿಜಯ್‌ ಇಷ್ಟಪಟ್ಟರು. ವಿಜಯ್‌ ಅವರು ಇಲ್ಲದೇ ಈ ಸಿನಿಮಾವನ್ನು ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಚಿತ್ರದಲ್ಲಿ ಮಗಳ ಪಾತ್ರಕ್ಕೆ ರಿತಿನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ವಿಜಯ್‌ ಅವರು ಮೊದಲು ಆಸಕ್ತಿ ತೋರಿಸಲಿಲ್ಲ. ನನ್ನ ಒತ್ತಾಯಕ್ಕೆ ಮಗಳ ಬಳಿ ಕೇಳಿದರು. ಸಿನಿಮಾಗಾಗಿ ರಿತಿನ್ಯಾ ಮುಂಬೈಗೆ ತೆರಳಿ ನಟನೆಯ ತರಬೇತಿ ಪಡೆದು ಬಂದು ನಟಿಸಿದ್ದಾರೆ’ ಎಂದರು ಜಡೇಶ. 

ADVERTISEMENT

‘ಇದು ಒಬ್ಬ ಬಡವನ ಮನೆ ಕಥೆ. ಇಡೀ ಸಿನಿಮಾದಲ್ಲಿ ನಾನು ಇದೇ ಗೆಟಪ್‌ನಲ್ಲಿ ಇರುತ್ತೇನೆ. ನನ್ನ ಸ್ವಂತ ಮಗಳೇ ಚಿತ್ರದಲ್ಲಿ ಮಗಳ ಪಾತ್ರವನ್ನು ನಿಭಾಯಿಸಿದ್ದಾಳೆ. ನಾನು ಬಡತನವನ್ನು ಅನುಭವಿಸಿದ ಕಾರಣ ನನಗೆ ಇಂಥ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಈ ಸಿನಿಮಾ ಮೂಲಕ ಒಂದೊಳ್ಳೆಯ ಕಥೆಯನ್ನು ಪ್ರೇಕ್ಷಕರ ಎದುರಿಗೆ ಇಡುತ್ತಿದ್ದೇನೆ ಎನ್ನುವ ಸಾರ್ಥಕತೆ ಇದೆ. ಈ ಸಿನಿಮಾದಲ್ಲಿ ವಿಷಯದ ಜೊತೆಗೆ ಆ್ಯಕ್ಷನ್‌ ಇದೆ. ವಿನಃ ಸಾಹಸವೇ ಎಲ್ಲ ಅಲ್ಲ’ ಎಂದರು ‘ದುನಿಯಾ’ ವಿಜಯ್‌. 

‘ಜಡೇಶ್‌ ನೆಲದ ಕಥೆಗಾರ. ನೆಲದ ಸೊಗಡು, ಹಿನ್ನೆಲೆ ಅವರ ಕಥೆಗಳಲ್ಲಿ ಇರುತ್ತದೆ. ರೈತರು, ಅವರ ಸಮಸ್ಯೆ, ಖುಷಿ, ಒಡನಾಟ, ವ್ಯವಸ್ಥೆಯ ಸಂಘರ್ಷ ಈ ಕಥೆಯಲ್ಲಿದೆ’ ಎಂದು ಮಾಸ್ತಿ ಹೇಳಿದರು. 

ವಿಜಯ್‌ ನಟನೆಯ 29ನೇ ಸಿನಿಮಾ ಇದಾಗಿದ್ದು, ಮೇ ಅಥವಾ ಜೂನ್‌ನಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.