ADVERTISEMENT

‘ಲುಂಗಿ’ ಸಿನಿಮಾ ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:30 IST
Last Updated 10 ಅಕ್ಟೋಬರ್ 2019, 19:30 IST
ಪ್ರಣವ್‌ ಹೆಗಡೆ
ಪ್ರಣವ್‌ ಹೆಗಡೆ   

‘ಲುಂಗಿ’ –ಒಂದು ಬಗೆಯ ಉಡುಪು. ಸೆಖೆಯಿಂದಾಗಿ ಪ್ಯಾಂಟ್‍ಗಳಿಗೆ ಅಹಿತಕರ ಹವೆ ಸೃಷ್ಟಿಸುವ ಪ್ರದೇಶಗಳಲ್ಲಿ ಈ ವಸ್ತ್ರ ಹೆಚ್ಚು ಜನಪ್ರಿಯ. ಇದರ ಬಳಕೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಕಾಂಬೋಡಿಯಾ, ಥೈಲ್ಯಾಂಡ್‌ನಲ್ಲೂ ಇದರ ಬಳಕೆ ಇದೆ. ಗಾಂಧಿನಗರದಲ್ಲಿ ‘ಲುಂಗಿ’ ಹೆಸರಿನಡಿ ನಿರ್ಮಾಣವಾಗಿರುವ ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ.

ವಿದ್ಯಾವಂತ ಯುವಕನಿಗೆ ವಿದೇಶದಲ್ಲಿ ಕೆಲಸ ಸಿಗುತ್ತದೆ. ಆದರೆ, ಆತನಿಗೆ ತನ್ನ ನೆಲದಲ್ಲಿಯೇ ಸಾಧನೆ ಮಾಡುವ ಆಸೆ. ಈ ಹಂಬಲ ಇಟ್ಟುಕೊಂಡು ಆತ ಬಟ್ಟೆ ಉದ್ಯಮ ಪ್ರಾರಂಭಿಸುವುದೇ ಈ ಚಿತ್ರದ ಜೀವಾಳ. ಇದಕ್ಕೆ ರೊಮ್ಯಾಂಟಿಕ್‌ ಕಾಮಿಡಿಯ ಸ್ಪರ್ಶ ನೀಡಲಾಗಿದೆ. ಕರಾವಳಿ ಸೊಗಡಿನ ಕಥೆ ಇದು. ಹಾಗಾಗಿ, ಆ ಭಾಗದಲ್ಲಿಯೇ ಚಿತ್ರದ ಶೂಟಿಂಗ್‌ ನಡೆಸಲಾಗಿದೆಯಂತೆ.

ಅರ್ಜುನ್‍ ಲೂಯಿಸ್‌ ಮತ್ತು ಅಕ್ಷಿತ್‍ ಶೆಟ್ಟಿ ಜಂಟಿಯಾಗಿ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅರ್ಜುನ್ ಅವರು ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ನೊಗ ಹೊತ್ತಿದ್ದಾರೆ.

ADVERTISEMENT

ಮೇಕ್‌ ಇನ್ ಇಂಡಿಯಾ ಕಾನ್ಸೆಫ್ಟ್‌ ಕೂಡ ಸಿನಿಮಾದ ಪ್ರಮುಖ ಅಂಶವೆಂದು ಚಿತ್ರತಂಡ ಹೇಳಿಕೊಂಡಿದೆ. ಕೆಲವು ಯುವಜನರು ಉನ್ನತ ವ್ಯಾಸಂಗ ಮಾಡಿದರೂ ಬೇರೊಬ್ಬರ ಕೈಕೆಳಗೆ ದುಡಿಯುತ್ತಿರುತ್ತಾರೆ. ಕೆಲವರು ಉದ್ಯೋಗ ಅರಸಿಕೊಂಡು ವಿದೇಶಗಳಿಗೆ ಹಾರುತ್ತಾರೆ. ಯಾವುದೇ ಕೆಲಸ ಇರಲಿ ಸ್ವಂತ ಊರಿನಲ್ಲಿಯೇ ಸಾಧನೆ ಮಾಡಬೇಕು ಎಂಬ ಸಂದೇಶ ಹೇಳಲಾಗಿದೆಯಂತೆ.

ಪ್ರಣವ್‌ ಹೆಗಡೆ ಈ ಚಿತ್ರದ ನಾಯಕ. ರಾಧಿಕಾ ರಾವ್ ಮತ್ತು ಅಹಲ್ಯಾ ಸುರೇಶ್ ನಾಯಕಿಯರು. ಪ್ರಸಾದ್‌ ಕೆ. ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ರಿಜ್ಜೋ ಪಿ. ಜಾನ್ ಅವರ ಛಾಯಾಗ್ರಹಣವಿದೆ. ಮುಖೇಶ್‍ ಹೆಗಡೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.