ADVERTISEMENT

ಬಂತು ಮಹಾವೀರ್ಯರ್‌ ಚಿತ್ರದ ಫಸ್ಟ್ ಲುಕ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 9:58 IST
Last Updated 12 ಫೆಬ್ರುವರಿ 2022, 9:58 IST
ಮಹಾವೀರ್ಯರ್‌ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌
ಮಹಾವೀರ್ಯರ್‌ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌   

ಮಾಲಿವುಡ್ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಿರುವ, ಶಾನ್ವಿ ಶ್ರೀವಾತ್ಸವ ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ ಮಲಯಾಳಂನ ‘ಮಹಾವೀರ್ಯರ್‌’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಖ್ಯಾತ ಲೇಖಕ ಎಂ. ಮುಕುಂದನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದರು.

ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯ ಹಿನ್ನೆಲೆಯಲ್ಲಿ ಸಾಗಲಿದೆ.

ಟೈಮ್ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆ ಬಗ್ಗೆಯೂ ಚಿತ್ರ ಮಾತನಾಡಲಿದೆ. ವಿಶೇಷ ಏನೆಂದರೆ ನಿವಿನ್ ಅವರ ಸ್ವಂತ ಬ್ಯಾನರ್ ನಿವಿನ್ ಜೂನಿಯರ್ ಪಿಕ್ಚರ್ಸ್ ಸಂಸ್ಥೆ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಪಿ.ಎಸ್ ಶ್ಯಾಮ್ನಾಸ್ ಅವರ ಇಂಡಿಯನ್ ಮೂವಿ ಮೇಕರ್ಸ್ ಸಂಸ್ಥೆಯೂ ಜಂಟಿಯಾಗಿ ಬಂಡವಾಳ ಹೂಡುತ್ತಿದೆ.

ADVERTISEMENT

ವಿಶೇಷ ಏನೆಂದರೆ ಈ ಹಿಂದೆ ನಿವಿನ್ ಜತೆಗೆ ‘1983’ ಮತ್ತು ‘ಆ್ಯಕ್ಷನ್ ಹೀರೋ ಬಿಜು’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅಬ್ರಿದ್ ಶೈನ್, ‘ಮಹಾವೀರ್ಯರ್‌’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಮೂರನೇ ಬಾರಿ ಒಂದಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿಮಿನ್ ಮತ್ತು ಆಸಿಫ್ ಅಲಿ 10 ವರ್ಷಗಳ ಬಳಿಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಲಾಲ್, ಲಾಲು ಅಲೆಕ್ಸ್, ಸಿದ್ದೀಕಿ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್. ಕುರುಪ್, ಸುಧೀರ್ ಕರಾಮನ, ಪದ್ಮರಾಜನ್ ರತೀಶ್, ಸುಧೀರ್ ಪರವೂರ್ ಸೇರಿ ಹಲವರು ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ರಾಜಸ್ಥಾನ, ಕೇರಳ ಸೇರಿ ಹಲವೆಡೆ ನಡೆದಿದ್ದು, ಚಂದ್ರು ಸೆಲ್ವರಾಜ್ ಛಾಯಾಗ್ರಹಣ ಮಾಡಿದ್ದಾರೆ. ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.