ADVERTISEMENT

ಕಾಮಿಡಿ ಇಲ್ಲದ ಮಹಿರ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 19:31 IST
Last Updated 8 ನವೆಂಬರ್ 2018, 19:31 IST
ವರ್ಜಿನಿಯಾ ರೋಡ್ರಿಗಸ್, ರಾಜ್ ಬಿ ಶೆಟ್ಟಿ
ವರ್ಜಿನಿಯಾ ರೋಡ್ರಿಗಸ್, ರಾಜ್ ಬಿ ಶೆಟ್ಟಿ   

‘ಕಾಮಿಡಿ ಇಲ್ಲದ ಚಿತ್ರ’ದ ಟೀಸರ್‌ ಬಿಡುಗಡೆ ಆಗಿದೆ. ಈ ಟೀಸರ್‌ನಲ್ಲಿ ಅಷ್ಟಿಷ್ಟು ಬೋಳುಮಂಡೆಯ ತನಿಖಾಧಿಕಾರಿಯೊಬ್ಬ ಏನನ್ನೋ ಪತ್ತೆ ಮಾಡಲು ಯತ್ನಿಸುತ್ತಿರುತ್ತಾನೆ. ‘ನನ್ನ ತಲೆಯ ಮೇಲೆ ಕೂದಲು ಇಲ್ಲದಿರಬಹುದು. ಹಾಗಂದಮಾತ್ರಕ್ಕೆ, ತಲೆಯೊಳಗೆ ಮೆದುಳು ಇಲ್ಲವೆಂದು ಅರ್ಥವಲ್ಲ’ ಎಂದು ಆತ ಹೇಳುತ್ತಿರುತ್ತಾನೆ.

ಇನ್ನೊಂದೆಡೆ ಡಿಫರೆಂಟ್‌ ಆಗಿ ಕಾಣುವ ಮಧ್ಯವಯಸ್ಸಿನ ಮಹಿಳೆಯೊಬ್ಬಳು ಯಾರದ್ದೋ ವಿರುದ್ಧ ಹೋರಾಟ ನಡೆಸುತ್ತಿರುತ್ತಾರೆ. ಬಹುಶಃ, ಆಕೆ ತ‌ನ್ನ ಮಗಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಸಮುದ್ರ, ವಿಸ್ತಾರವಾದ ನದಿ ‍ಪಾತ್ರ, ತೂಗುಸೇತುವೆ... ಇವೆಲ್ಲ ಕಣ್ಣಮುಂದೆ ಬಂದುಹೋಗುತ್ತವೆ...

ಇವೆಲ್ಲ ಇರುವುದು ರಾಜ್ ಬಿ. ಶೆಟ್ಟಿ ಮತ್ತು ವರ್ಜಿನಿಯಾ ರಾಡ್ರಿಗಸ್ ಅಭಿನಯದ, ಮಹೇಶ್ ಗೌಡ ನಿರ್ದೇಶನದ ಚಿತ್ರ ‘ಮಹಿರ’ದ ಟೀಸರ್‌ನಲ್ಲಿ.

ADVERTISEMENT

ಟೀಸರ್‌ ಬಿಡುಗಡೆ ಮಾಡಿ, ಸಿನಿಮಾ ಬಗ್ಗೆ ಮಾಹಿತಿ ನೀಡಲು ಮಹೇಶ್ ಅವರು ಸುದ್ದಿಗೋಷ್ಠಿ ಆಯೋಜಿಸಿದ್ದರು. ಅವರ ಜೊತೆಯಲ್ಲಿ ರಾಜ್ ಮತ್ತು ವರ್ಜಿನಿಯಾ ಕೂಡ ಇದ್ದರು. ಈ ಚಿತ್ರದಲ್ಲಿ ಕಾಮಿಡಿ ಇಲ್ಲ. ಇದು ಆ್ಯಕ್ಷನ್‌, ಥ್ರಿಲ್ಲರ್ ಚಿತ್ರ ಎಂದು ಮಹೇಶ್ ಸ್ಪಷ್ಟಪಡಿಸಿದರು.

ರಂಗಭೂಮಿಯಲ್ಲಿ, ಮಲಯಾಳ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ವರ್ಜಿನಿಯಾ ಅವರು ಈ ಚಿತ್ರದ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ‘ನನಗೆ ಇದು ಬಹಳ ಮುಖ್ಯವಾದ ಸಿನಿಮಾ. ನನ್ನ ಕನ್ನಡ ಸಿನಿಮಾ ಪಯಣ ಇಲ್ಲಿಂದ ಆರಂಭವಾಗುತ್ತಿದೆ’ ಎಂದು ಮಾತು ಆರಂಭಿಸಿದ ವರ್ಜಿನಿಯಾ, ‘ನನ್ನ ಪಾಲಿಗೆ ಇದು ಮೈಲಿಗಲ್ಲು ಕೂಡ ಹೌದು. ಚಿತ್ರತಂಡದ ಎಲ್ಲರೂ ಒಬ್ಬರಿಗೊಬ್ಬರು ಆಸರೆಯಾಗಿ ನಿಂತ ಕಾರಣ, ಫೈಟ್‌ ದೃಶ್ಯಗಳನ್ನೆಲ್ಲ ನಿಭಾಯಿಸಲು ಸಾಧ್ಯವಾಯಿತು’ ಎಂದರು.

ಅಂದಹಾಗೆ, ಈ ಚಿತ್ರದಲ್ಲಿ ಕಲಾವಿದರಿಗೆ ಅಪಾಯ ತಂದೊಡ್ಡದ ಫೈಟ್‌ ದೃಶ್ಯಗಳನ್ನು ಮಾತ್ರ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು ಮಹೇಶ್.

‘ನನ್ನದು ಪ್ರತಾಪ್‌ ಎನ್ನುವ ತನಿಖಾಧಿಕಾರಿಯ ಪಾತ್ರ. ಆತ ದೈಹಿಕವಾಗಿ ಅಷ್ಟೇನೂ ಬಲಿಷ್ಠ ಅಲ್ಲ. ಆದರೆ ತನ್ನ ಬುದ್ಧಿಶಕ್ತಿ ಉಪಯೋಗಿಸಿ, ಪ್ರಕರಣಗಳನ್ನು ಭೇದಿಸುತ್ತಾನೆ. ಸಿನಿಮಾ ಕ್ಷೇತ್ರಕ್ಕೆ ಹೊಸದೇನಾದರೂ ಕೊಡಬೇಕು ಎಂದು ನನ್ನಲ್ಲಿದ್ದ ಬಯಕೆಗೆ ಪೂರಕವಾಗಿ ಸಿಕ್ಕ ಪಾತ್ರ ಇದು’ ಎಂದು ಹೇಳಿದರು ರಾಜ್.

ಈ ಚಿತ್ರವು ಹೆಣ್ಣಿನ ಶಕ್ತಿ, ಆಕೆಯ ಬುದ್ಧಿಮತ್ತೆ, ಆಕೆಯ ಸಾಮರ್ಥ್ಯವನ್ನು ತೋರಿಸುತ್ತದೆ. ‘ಮಹಿರ’ ಎಂಬ ಪದ ಕೂಡ ಅದನ್ನು ಪ್ರತಿನಿಧಿಸುತ್ತದೆ ಎಂಬ ಮಾತು ಸೇರಿಸಿದರು ಮಹೇಶ್. ‘ಕಡಲ ಕಿನಾರೆಯೊಂದರ ಸಮೀಪ ತಾಯಿಯೊಬ್ಬಳು ಕೆಫೆ ನಡೆಸುತ್ತಿರುತ್ತಾಳೆ. ಅವಳಿಗೆ ಒಬ್ಬಳು ಮಗಳಿರುತ್ತಾಳೆ. ಆ ತಾಯಿಗೆ ಒಂದು ಅಡಚಣೆ ಎದುರಾಗುತ್ತದೆ. ಅಲ್ಲೊಬ್ಬ ತನಿಖಾಧಿಕಾರಿಯ ಪ್ರವೇಶ ಕೂಡ ಆಗುತ್ತದೆ. ಅದು ಏನು, ಮುಂದೆ ಏನಾಗುತ್ತದೆ ಎಂಬುದು ಸಿನಿಮಾ ಕಥೆ’ ಎಂದೂ ಅವರು ಹೇಳಿದರು.

ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಇದೆ. ಡಿಸೆಂಬರ್ ಅಥವಾ ಜನವರಿ ವೇಳೆ ಚಿತ್ರವನ್ನು ತೆರೆಗೆ ತರುವ ಉದ್ದೇಶ ನಿರ್ದೇಶಕರದ್ದು.

ಮಹೇಶ್ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.