ADVERTISEMENT

ವರ್ಷಾಂತ್ಯಕ್ಕೆ ‘ಮನದ ಕಡಲು’ ತೆರೆಗೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 12:20 IST
Last Updated 28 ನವೆಂಬರ್ 2024, 12:20 IST
ಸುಮುಖ, ರಂಗಾಯಣ ರಘು, ಅಂಜಲಿ 
ಸುಮುಖ, ರಂಗಾಯಣ ರಘು, ಅಂಜಲಿ    

ಸುಮಾರು 18 ವರ್ಷದ ಬಳಿಕ ‘ಮುಂಗಾರು ಮಳೆ’ ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ನಿರ್ಮಾಪಕ ಇ.ಕೃಷ್ಣಪ್ಪ ಸೇರಿ ಹೊಸ ಸಿನಿಮಾ ತೆರೆಗೆ ತರುತ್ತಿದ್ದಾರೆ. ಯೋಗರಾಜ್‌ ಭಟ್‌ ಅವರ ಹದಿನಾರನೇ ಸಿನಿಮಾ ‘ಮನದ ಕಡಲು’ ಚಿತ್ರೀಕರಣ ಅಂತಿಮ ಘಟ್ಟ ತಲುಪಿದ್ದು, ವರ್ಷಾಂತ್ಯಕ್ಕೆ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. 

ಬುಧವಾರ (ನ.27) ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗರಾಜ್‌ ಭಟ್‌, ‘ಇ.ಕೃಷ್ಣಪ್ಪ ಅವರ ಜೊತೆ ಮತ್ತೊಂದು ಸಿನಿಮಾ ಮಾಡಬೇಕು ಎನ್ನುವುದು ಮೊದಲಿನಿಂದಲೇ ನಿರ್ಧಾರವಾಗಿತ್ತು. ಅವರು ರಾಜಕಾರಣದಲ್ಲಿ ತಲ್ಲೀನರಾದರೆ, ನಾನು ಸಾಲು ಸಾಲು ಸಿನಿಮಾದಲ್ಲಿ ತೊಡಗಿಸಿಕೊಂಡೆ. ‘ಮುಂಗಾರು ಮಳೆ’ ಕಳೆದು 18 ವರ್ಷ ಆಯಿತು ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕೋವಿಡ್‌ ಬಳಿಕ ಸಿಕ್ಕಾಗ, ಮತ್ತೊಂದು ಸಿನಿಮಾ ಮಾಡುವುದಕ್ಕೆ ಸಿದ್ಧವಾದೆವು. ‘ನಾನು ಹೊಸ ಕುದುರೆಯನ್ನೇ ಇಷ್ಟಪಡುವುದು’ ಎಂದು ಕೃಷ್ಣಪ್ಪ ಅವರು ಸುಳಿವು ನೀಡಿದರು. ಹೀಗೆ ಹೊಸಬರ ಹುಡುಕಾಟ ಆರಂಭವಾಯಿತು. ಹೊಸಬರ ಹುಡುಕಾಟ ಎನ್ನುವುದು ಬಹಳ ಸವಾಲಿನ ವಿಷಯ. ಈ ಪಯಣದಲ್ಲಿ ನಾಯಕನಾಗಿ ಸುಮುಖ ಆಯ್ಕೆಯಾದರು. ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್‌ ತಂಡ ಸೇರಿಕೊಂಡರು. ಚಿತ್ರರಂಗಕ್ಕೆ ಹೊಸಬರ ಅವಶ್ಯಕತೆ ಬಹಳಷ್ಟಿದೆ’ ಎಂದರು. 

‘ಮನದ ಕಡಲು’ ಚಿತ್ರದ ಆರಂಭ, ಮಧ್ಯಂತರ ಹಾಗೂ ಅಂತ್ಯ ಕಡಲಿನ ಮೇಲೆ ಇದೆ. ಆದಿವಾಸಿಗಳ ನಾಯಕನಾಗಿ ರಂಗಾಯಣ ರಘು ನಟಿಸಿದ್ದಾರೆ. ಇವರ ಭಾಷೆಯನ್ನು ನಾನು ಹೊಸದಾಗಿ ಸೃಷ್ಟಿಸಿದ್ದೇನೆ. ಕರ್ನಾಟಕ, ಮಹಾರಾಷ್ಟ್ರದ ಹದಿಮೂರು ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮೊದಲ ಬಾರಿ ಮಹಾರಾಷ್ಟ್ರದ ಮುರುಡ್‍ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಶೂಟಿಂಗ್‌ ಮಾಡಿದ್ದೇವೆ. ವರ್ಷಾಂತ್ಯಕ್ಕೆ ಎಂದರೆ ‘ಮುಂಗಾರು ಮಳೆ’ ಬಿಡುಗಡೆಯಾದ ದಿನಾಂಕದಂದೇ ಈ ಸಿನಿಮಾ ರಿಲೀಸ್‌ಗೆ ಯೋಜನೆ ಹಾಕಿಕೊಂಡಿದ್ದೇವೆ. ಒಂದೆರಡು ವಾರ ಆಚೀಚೆ ಆಗಬಹುದು. ಶೇ 95ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ’ ಎಂದರು ಯೋಗರಾಜ್‌ ಭಟ್‌.   

ADVERTISEMENT

ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ದತ್ತಣ್ಣ, ಶಿವಧ್ವಜ್‌ ಮತ್ತಿತರರು ಇದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಸಂತೋಷ್‍ ರೈ ಪಾತಾಜೆ ಛಾಯಾಚಿತ್ರಗ್ರಹಣವಿದೆ. ಜಯಂತ ಕಾಯ್ಕಿಣಿ ಎರಡು ಹಾಡುಗಳನ್ನು ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.