ADVERTISEMENT

 ಮರೆಯದೆ ಕ್ಷಮಿಸು...

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 13:09 IST
Last Updated 16 ಆಗಸ್ಟ್ 2019, 13:09 IST
ಮರೆಯದೆ ಕ್ಷಮಿಸು ಚಿತ್ರದಲ್ಲಿ ಪ್ರಮೋದ್ ಬೋಪಣ್ಣ ಮತ್ತು ಮೇಘನಾ ಗೌಡ
ಮರೆಯದೆ ಕ್ಷಮಿಸು ಚಿತ್ರದಲ್ಲಿ ಪ್ರಮೋದ್ ಬೋಪಣ್ಣ ಮತ್ತು ಮೇಘನಾ ಗೌಡ   

ಪ್ರೇಮ ಕಥೆಗಳನ್ನು ಆಧರಿಸಿದ ಹಲವಾರು ಸಿನಿಮಾಗಳು ಚಿತ್ರರಂಗದಲ್ಲಿ ಸದ್ದು ಮಾಡಿವೆ. ಪ್ರಸ್ತುತ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ನಿದರ್ಶನವಾಗಿಟ್ಟುಕೊಂಡು,ಪ್ರೀತಿ ಮಾಡಿದರೆ ಒಳ್ಳೆಯದಾಗುತ್ತಾ, ಕೆಟ್ಟದಾಗುತ್ತಾ? ಎನ್ನುವ ಸಂದೇಶವನ್ನು ಸಮಾಜಕ್ಕೆ ಹೇಳುವ ‘ಮರೆಯದೆ ಕ್ಷಮಿಸು’ ಸಿನಿಮಾ ಚಿತ್ರೀಕರಣ ಶುರುವಾಗಿದೆ.

ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರದ ಮೊದಲ ದೃಶ್ಯದ ಚಿತ್ರೀಕರಣಕ್ಕೆಚಾಲನೆನೀಡಲಾಯಿತು.

ಚಿತ್ರದ ಶೀರ್ಷಿಕೆಗೆ ತಕ್ಕಂತೆ ‘ನೆನಪಾದರೆ’ ಎನ್ನುವ ಅಡಿಬರಹ ಸಹ ನೀಡಲಾಗಿದೆ. ಮರೆಯದೇ ಕ್ಷಮಿಸು ಎಂದು ಕೇಳಿಕೊಳ್ಳುವುದು ಪ್ರೇಮಿಗಳೋ ಅಥವಾ ಹೆತ್ತವರಿಗೆ ಮಕ್ಕಳು ಹೇಳುವುದೋ ಎನ್ನುವುದು ಚಿತ್ರದ ಕುತೂಹಲ.

ADVERTISEMENT

ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗ ಹೊತ್ತಿರುವ ಕೆ.ರಾಘವ್‌ ಅವರು ಕಥೆ ಬಗ್ಗೆ ಒಂದು ಸಾಲು ಹೇಳುತ್ತಿದ್ದಂತೆ ಇದೊಂದು ಲವ್‌ ಜಾನರ್‌ ಸಿನಿಮಾ ಎನ್ನುವುದರಲ್ಲಿ ಯಾವುದೇ ಅನುಮಾನ ಉಳಿಯಲಿಲ್ಲ. ಇದು ರಾಘವ್‌ಗೆ ನಿರ್ದೇಶನದ ಮೊದಲ ಅನುಭವ. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರಿಗೆ ನಟನೆಯ ಅನುಭವ ಇದೆ. ಸಿನಿಮಾ ಮೇಲಿನ ಆಸಕ್ತಿಯಿಂದ ನಿರ್ದೇಶನಕ್ಕೆ ಇಳಿದಿದ್ದಾರೆ.

ಪ್ರೀತಿ ಎಂದರೆ ಹುಡುಗ– ಹುಡುಗಿಯರ ನಡುವಿನ ಪ್ರೀತಿ ಮಾತ್ರವಲ್ಲ.ಪೋಷಕರು ಮಕ್ಕಳನ್ನು ಪ್ರೀತಿಸಬೇಕು, ಮಕ್ಕಳಾದವರು ತಂದೆ–ತಾಯಿಯನ್ನು ಪ್ರೀತಿಸಬೇಕೆನ್ನುವ ಸಂದೇಶ ಈ ಚಿತ್ರದಲ್ಲಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ ಎಂದರು ರಾಘವ್‌.

ನಾಯಕನಾಗಿ ಪ್ರಮೋದ್ ಬೋಪಣ್ಣಗೆಇದು ಮೂರನೇ ಸಿನಿಮಾ. ಈಗಾಗಲೇ ಪೂರ್ಣಗೊಂಡಿರುವ ಅವರ ಎರಡು ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ. ಈ ಮೊದಲು ಬೋಪಣ್ಣಸುದ್ದಿ ವಾಹಿನಿಯೊಂದರಲ್ಲಿ ವಾರ್ತಾ ವಾಚಕರಾಗಿದ್ದವರು.

ಸಿನಿಮಾದಲ್ಲಿ ಗಾರೆ ಕೆಲಸ ಮಾಡುವಬಡ ಹುಡುಗನ ಪಾತ್ರ ಇವರದ್ದು. ಶ್ರೀಮಂತರ ಮನೆಯ ಹುಡುಗಿಯನ್ನು ಪ್ರೀತಿಸಿದರೆ ಏನಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ಮೇಘನಾ ಗೌಡನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿಶ್ರೀಮಂತ ಮನೆತನದ ಹುಡುಗಿಯ ಪಾತ್ರ ಇವರದ್ದು. ಇವರಿಗೂ ಇದು ಮೂರನೇ ಸಿನಿಮಾ. ತನ್ನ ಪ್ರೀತಿ ಮತ್ತು ಕುಟುಂಬವನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಎನ್ನುವುದು ಮೇಘನಾ ಪಾತ್ರ ತೋರಿಸಲಿದೆ.

ಮೈಸೂರು, ಸಕಲೇಶಪುರ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ಹಾಕಿಕೊಂಡಿರುವ ಚಿತ್ರತಂಡ, ಇದೇ ವಾರದಲ್ಲಿ ಚಿತ್ರೀಕರಣ ಆರಂಭಿಸಲಿದೆ.

ಚಿತ್ರದಲ್ಲಿನಾಲ್ಕು ಹಾಡುಗಳಿದ್ದು, ಪ್ರಭು ಎಸ್‌.ಆರ್‌. ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂರು ಫೈಟ್ ದೃಶ್ಯಗಳಿಗೆ ರಾಮ್‌ದೇವ್‌ ಸಾಹಸ ನಿರ್ದೇಶನ ಮಡಿದ್ದಾರೆ. ಛಾಯಾಗ್ರಹಣ ಹೃಷಿಕೇಶ್‌ ಅವರದ್ದು. ತಾರಾಗಣದಲ್ಲಿ ರಘು, ಅಪೂರ್ವ, ಮಿಮಿಕ್ರಿ ಗೋಪಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.