ADVERTISEMENT

ಕನ್ನಡ ಇಂಡಸ್ಟ್ರಿಯ ತ್ರಿಮೂರ್ತಿಗಳು!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:45 IST
Last Updated 26 ಏಪ್ರಿಲ್ 2020, 19:45 IST
ಬಿ.ಎಸ್. ಬಸವರಾಜು
ಬಿ.ಎಸ್. ಬಸವರಾಜು   

ರಾಜ್‌ಕುಮಾರ್‌ ಅವರು ಗುಬ್ಬಿ ನಾಟಕದ ಕಂಪನಿಯಲ್ಲಿದ್ದರು. ಗುಬ್ಬಿ ಕಂಪನಿ ತಿಪಟೂರಿನಲ್ಲಿ ಕ್ಯಾಂಪ್‌ ಮಾಡಿದಾಗ ಹಗಲು ಹೊತ್ತು ಬೆಳ್ಳೂರು ಮೈಲಾರಯ್ಯನ ಛತ್ರದಲ್ಲಿ ಡ್ರಾಮಾ ತಾಲೀಮು ಮಾಡುತ್ತಿದ್ದರು. ನಾನು ಅದನ್ನು ನೋಡಲು ಹೋಗುತ್ತಿದ್ದೆ. ಅಲ್ಲಿ ರಾಜ್‌ಕುಮಾರ್‌ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು.

ಮುಂದೆ, ನಾನು ರಾಜ್‌ ಅವರ ‘ದೂರದ ಬೆಟ್ಟ’, ‘ಒಲವು–ಗೆಲುವು’, ‘ಪ್ರೇಮದ ಕಾಣಿಕೆ’, ‘ಗಂಧದ ಗುಡಿ’, ‘ಭಾಗ್ಯವಂತರು’ ಸೇರಿದಂತೆ ಅವರ ಐದಾರು ಚಿತ್ರಗಳಿಗೆ ಅಸಿಸ್ಟೆಂಟ್‌ ಕ್ಯಾಮೆರಾಮನ್‌ ಆಗಿ ಕೆಲಸ ಮಾಡಿದೆ.

ಗುಬ್ಬಿ ಕಂಪನಿ ತಿಪಟೂರಿನಲ್ಲಿ ಕ್ಯಾಂಪ್‌ ಮಾಡಿದಾಗ ರಾಜ್‌ ಜತೆಗೆ, ನರಸಿಂಹರಾಜು ಮತ್ತು ಬಾಲಕೃಷ್ಣ ಜೊತೆಯಾಗಿರುತ್ತಿದ್ದರು. ಅವರನ್ನು ಇಂಡಸ್ಟ್ರಿಯಲ್ಲಿ ‘ತ್ರಿಮೂರ್ತಿಗಳು’ ಎಂದು ತಮಾಷೆಯಿಂದ ಕರೆಯುತ್ತಿದ್ದರು. ಈ ಮೂವರು ಇದ್ದರೆ ಆ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಗೆಲ್ಲುವುದು ಗ್ಯಾರಂಟಿ ಎನ್ನುವಂತಿತ್ತು.

ADVERTISEMENT

ಆ ಕಾಲಕ್ಕೆ ನಿರ್ಮಾಪಕರು ಅಣ್ಣಾವ್ರ ಕಾಲ್‌ಶೀಟ್‌ ಕೇಳಿಕೊಂಡು ಹೋದರೆ, ‘ಮೊದಲು ನರಸಿಂಹರಾಜು ಮತ್ತು ಬಾಲಕೃಷ್ಣ ಅವರ ಕಾಲ್‌ಶೀಟ್‌ ತೆಗೆದುಕೊಂಡು ಬನ್ನಿ. ಅವರಿಬ್ಬರದ್ದು ಪಕ್ಕಾ ಆದರೆ, ನನ್ನ ಕಾಲ್‌ಶೀಟ್‌ಗೆ ಯೋಚನೆ ಮಾಡಬೇಕಿಲ್ಲ’ ಎಂದು ತಮಾಷೆ ಮಾಡುತ್ತಿದ್ದರು.

ನಿರ್ಮಾಪಕರು ನರಸಿಂಹರಾಜು ಬಳಿ ಡೇಟ್ಸ್‌ ಕೇಳಲು ಹೋದರೆ, ‘ರಾಜಣ್ಣ ಒಪ್ಪಿದ್ದಾರೆಯೇ? ಹಾಗಾದರೆ ನಾನು ರೆಡಿ. ಯಾತಕ್ಕೂ ಬಾಲಣ್ಣನ ಡೇಟ್ಸ್‌ ಪಕ್ಕಾ ಮಾಡಿಕೊಂಡು ಬಿಡಿ’ ಎನ್ನುತ್ತಿದ್ದರು.

‘ಅವರಿಬ್ಬರೂ ಒಪ್ಪಿದ ಮೇಲೆ ನನ್ನದೇನಿದೆ ಸ್ವಾಮಿ’ ಎಂದು ಬಾಲಣ್ಣ ನಗು ನಗುತ್ತಲೇ ಒಪ್ಪಿಗೆ ಸೂಚಿಸುತ್ತಿದ್ದರು. ವೃತ್ತಿಯಲ್ಲಿದ್ದ ಈ ಮೂವರ ಅನ್ಯೋನತೆ ಊಟದಲ್ಲೂ ಇತ್ತು.ಗುಬ್ಬಿ ಕಂಪನಿ ತಿಪಟೂರಿನಲ್ಲಿ ಕ್ಯಾಂಪ್‌ ಮಾಡಿದಾಗ ರಾಜ್‌ಕುಮಾರ್‌ ಮತ್ತು ನರಸಿಂಹರಾಜು ಕುಟುಂಬ ಸಮೇತ ಸುಮಾರು ಎರಡು ವರ್ಷ ಬೆಳ್ಳೂರು ಮೈಲಾರಯ್ಯನ ಛತ್ರದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಾಟಕ ಮುಗಿಸಿಕೊಂಡ ತ್ರಿಮೂರ್ತಿಗಳು ನೇರವಾಗಿ ತಿಪಟೂರಿನ ರಾಮಣ್ಣ ಹೋಟೆಲ್‌ ಇಲ್ಲವೇ ಮರಿರಾಯರ ಹೋಟೆಲ್‌ನತ್ತ ಹೆಜ್ಜೆ ಹಾಕುತ್ತಿದ್ದರು.

ಆ ಎರಡು ಹೋಟೆಲ್‌ ಇಡ್ಲಿ ಮತ್ತು ದೋಸೆಗೆ ತುಂಬಾ ಫೇಮಸ್‌. ಕಲಾವಿದರು ಎಂಬ ಗೌರವದಿಂದ ಹೋಟೆಲ್‌ನವರು ಇವರಿಂದ ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ.

ತಿಪಟೂರಿನ ಊಟ, ತಿಂಡಿ ಅಣ್ಣಾವ್ರಿಗೆ ತುಂಬಾ ಅಚ್ಚುಮೆಚ್ಚು. ಒಮ್ಮೆ ಬೆಳಿಗ್ಗೆ ಮನೆಯಿಂದ ಬಿಸಿ ಅಕ್ಕಿರೊಟ್ಟಿ, ಎಣ್ಣಿಗಾಯಿ ಪಲ್ಯ ತಗೊಂಡು ಹೋಗಿ ಉಣಬಡಿಸಿದ್ದೆ. ಊಟವನ್ನು ಅವರು ಎಂಜಾಯ್‌ ಮಾಡುತ್ತಿದ್ದ ರೀತಿ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.