ADVERTISEMENT

‘ದೃಶ್ಯಂ 2’ ಸಿನಿಮಾ ಘೋಷಿಸಿದ ಮೋಹನ್‌ಲಾಲ್

​ಪ್ರಜಾವಾಣಿ ವಾರ್ತೆ
Published 22 ಮೇ 2020, 12:37 IST
Last Updated 22 ಮೇ 2020, 12:37 IST
ಪೋಸ್ಟರ್‌
ಪೋಸ್ಟರ್‌   

ಮಲಯಾಳದ ಕ್ರೈಮ್‌ ಥ್ರಿಲ್ಲರ್‌ ಚಿತ್ರ ‘ದೃಶ್ಯಂ’ ತೆರೆಕಂಡಿದ್ದು 2013ರಲ್ಲಿ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಜೀತು ಜೋಸೆಫ್‌. ಮೋಹನ್‌ಲಾಲ್‌ ಮತ್ತು ಮೀನಾ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಮಾಲಿವುಡ್‌ನ ಥ್ರಿಲ್ಲರ್‌ ಸಿನಿಮಾಗಳ ಚರಿತ್ರೆಯಲ್ಲಿಯೇ ಹೊಸದೊಂದು ದಾಖಲೆ ಬರೆಯಿತು.

ಇದರ ಯಶಸ್ಸು ಮಲಯಾಳ ಭಾಷೆಗಷ್ಟೇ ಸೀಮಿತಗೊಳ್ಳಲಿಲ್ಲ. ಮರುವರ್ಷವೇ ಕನ್ನಡದಲ್ಲಿ ‘ದೃಶ್ಯ’ ಹೆಸರಿನಲ್ಲಿ ಇದು ರಿಮೇಕ್‌ ಆಯಿತು. ರವಿಚಂದ್ರನ್‌ ಮತ್ತು ನವ್ಯಾ ನಾಯರ್‌ ನಟಿಸಿದ್ದ ಇದನ್ನು ನಿರ್ದೇಶಿಸಿದ್ದು ಪಿ. ವಾಸು. ಅದೇ ವರ್ಷ ತೆಲುಗಿಗೂ ರಿಮೇಕ್‌ ಆಗಿದ್ದು ವಿಶೇಷ. ಮರುವರ್ಷ ಜೀತು ಜೋಸೆಫ್‌ ಅವರು ‘ಪಾಪನಾಶಂ’ ಹೆಸರಿನಲ್ಲಿ ತಮಿಳಿನಲ್ಲಿ ಈ ಚಿತ್ರ ನಿರ್ದೇಶಿಸಿದರು. ಜೊತೆಗೆ, ಹಿಂದಿಗೂ ಈ ಸಿನಿಮಾ ರಿಮೇಕ್‌ ಆಯಿತು. ಇದರ ಯಶಸ್ಸಿನ ನಾಗಾಲೋಟ ಭಾರತೀಯ ಭಾಷೆಗಳಿಗಷ್ಟೇ ಸೀಮಿತಗೊಳ್ಳಲಿಲ್ಲ. ಕಳೆದ ವರ್ಷ ಚೀನಾದಲ್ಲೂ ‘ಶೀಫ್‌ ವಿಥೌಟ್‌ ಶೆಫರ್ಡ್‌’ ಹೆಸರಿನಡಿ ರಿಮೇಕ್‌ ಆಯಿತು. ಅಂದಹಾಗೆ ಇದು ಚೀನಿ ಭಾಷೆಯಲ್ಲಿ ರಿಮೇಕ್‌ ಆದ ಮೊದಲ ಭಾರತೀಯ ಸಿನಿಮಾ. ರಿಮೇಕ್‌ ಆದ ಎಲ್ಲಾ ಭಾಷೆಗಳಲ್ಲೂ ಕಮರ್ಷಿಯಲ್‌ ಆಗಿ ಸೂಪರ್‌ ಹಿಟ್‌ ಆಗಿದ್ದು, ಇದರ ಹೆಗ್ಗಳಿಕೆ.

ಪ್ರಸ್ತುತ ಮೋಹನ್‌ಲಾಲ್ 60 ವಸಂತಗಳನ್ನು ಪೂರೈಸಿದ್ದಾರೆ. ಈ ನಡುವೆಯೇ ಅವರು ‘ದೃಶ್ಯಂ 2’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಟ್ವಿಟರ್‌ನಲ್ಲಿ ಇಪ್ಪತ್ತು ಸೆಕೆಂಡ್‌ಗಳ ಟೀಸರ್‌ ಅನ್ನೂ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಆ್ಯಂಟನಿ ಪೆರುಂಬವೂರ್ ಬಂಡವಾಳ ಹೂಡಲಿದ್ದಾರೆ.

ADVERTISEMENT

‘ದೃಶ್ಯಂ’ನಲ್ಲಿ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ನಟಿಸಿದ್ದರು ಮೋಹನ್‌ಲಾಲ್‌. ಪೊಲೀಸ್‌ ಅಧಿಕಾರಿಯ ಪುತ್ರನನ್ನು ಹತ್ಯೆ ಮಾಡಿದ್ದ ತನ್ನ ಪುತ್ರಿಯನ್ನು ರಕ್ಷಿಸುವ ಜವಾಬ್ದಾರಿ ಅಪ್ಪನ ಪಾತ್ರವದು. ಮಧ್ಯಮವರ್ಗದ ಕುಟುಂಬವೊಂದು ವ್ಯವಸ್ಥೆಯ ವಿರುದ್ಧ ಸೆಣಸಾಟ ನಡೆಸುವ ಕಥನವದು. ಪರದೆ ಮೇಲೆ ನಿರ್ದೇಶಕರ ಥ್ರಿಲ್ಲರ್ ನಿರೂಪಣೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅಂದಹಾಗೆ ಸ್ವೀಕೆಲ್‌ನಲ್ಲಿ ಜಾರ್ಜ್‌ಕುಟ್ಟಿಯ ಬದುಕಿನ ಸುತ್ತ ಕಥೆ ಹೆಣೆಯಲಾಗಲಿದೆಯಂತೆ.

ಕೇರಳದಲ್ಲಿ ಕೊರೊನಾ ಭೀತಿಯ ಪರಿಣಾಮ ಇನ್ನೂ ಸಿನಿಮಾ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿಲ್ಲ. ಅನುಮತಿ ಸಿಕ್ಕಿದ ತಕ್ಷಣ ಇದರ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ. ಜೀತು ಜೋಸೆಫ್‌ ಅವರೇ ‘ದೃಶ್ಯಂ 2’ಗೂ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.