ADVERTISEMENT

‘ಅಪ್ಪ, ನಾನು ನಿನ್ನ ಮಗನಲ್ಲ, ಮಗಳು’

ಘನಶ್ಯಾಮ ಡಿ.ಎಂ.
Published 22 ಫೆಬ್ರುವರಿ 2019, 11:23 IST
Last Updated 22 ಫೆಬ್ರುವರಿ 2019, 11:23 IST
‘ದಿ ರಿಬ್’ ಚಿತ್ರದ ದೃಶ್ಯ.
‘ದಿ ರಿಬ್’ ಚಿತ್ರದ ದೃಶ್ಯ.   

ಸಿನಿಮಾ–ದಿ ರಿಬ್ (The Rib)

ಭಾಷೆ– ಚೀನಿ

ನಿರ್ದೇಶನ– ಝಾಂಗ್‌ ವೇ

ADVERTISEMENT

–––

‘ನನ್ನ ಮಗ ಸ್ವರ್ಗಕ್ಕೆ ಹೋಗುವ ಅರ್ಹತೆ ಕಳೆದುಕೊಂಡರೂ ಪರವಾಗಿಲ್ಲ, ನಾನು ಅವನ ಜೊತೆಗೇ ಇರುತ್ತೇನೆ. ನಿಮಗೆ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ಇಷ್ಟವಿಲ್ಲದಿದ್ದರೂ ಪರವಾಗಿಲ್ಲ; ದೇವರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ. ದೇವರ ಬಸಿರು ಎಂದಿಗೂ ಬರಡಾಗದು...’

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಂಡ ಚೀನಿ ಸಿನಿಮಾ ‘ದಿ ರಿಬ್’ನ ಸಂಭಾಷಣೆಯಿದು. ಸಿನಿಮಾ ನೋಡುತ್ತಿದ್ದ ಹಲವರಿಗೆ ಪರದೆ ಇದ್ದಕ್ಕಿದ್ದಂತೆ ಮಂಜಾದಂತೆ ಭಾಸವಾಯಿತು. ಸಿನಿಮಾ ನೋಡುತ್ತಾನೋಡುತ್ತಾ ಎದೆಯಲ್ಲಿ ಹರಳುಗಟ್ಟಿಕೊಂಡಿದ್ದ ಭಾವನೆಗಳು ಕಣ್ಣಿಗೆ ಅಡ್ಡಬಂದಿವೆ ಎಂದು ಅರಿವಾದವರುಅಕ್ಕಪಕ್ಕದವರು ನಮ್ಮನ್ನು ನೋಡುತ್ತಿಲ್ಲ ಎಂಬ ಬಿಂಕದಲ್ಲಿಯೇ ಕಣ್ಣೊರೆಸಿಕೊಂಡರು. ತೆರೆಯ ಮೇಲಿನ ಬದುಕು ಮತ್ತೊಮ್ಮೆ ಜೀವಚೈತನ್ಯದಿಂದ ಪುಟಿಯಿತು.

ಜನರ ಬದುಕನ್ನು ಚಿತ್ರಕ ವಿವರಗಳೊಡನೆ (ಫೋಟೊಗ್ರಫಿಕ್ ಡಿಟೈಲ್ಸ್‌) ಶ್ರದ್ಧೆಯಿಂದ ಕಟ್ಟಿಕೊಡುವುದು ಚೀನಾದ ಸೃಜನಶೀಲ ನಿರ್ದೇಶಕ ಝಾಂಗ್ ವೇ ಅವರ ಶೈಲಿ. ದೇವರ ಕಲ್ಪನೆಯನ್ನು ಕೊಟ್ಟ ಧರ್ಮ, ಧರ್ಮಕ್ಕೆ ಚೌಕಟ್ಟು ಹಾಕಿದ ಚರ್ಚ್, ಗೆಳೆತನದ ಆಪ್ಯಾಯತೆ, ಗಂಡಿನ ದೇಹದಲ್ಲಿ ಹೆಣ್ಣಿನ ಮನಸ್ಸು ನಿಂತ ಸತ್ಯವನ್ನು ಅರಗಿಸಿಕೊಳ್ಳಲು ಹೆಣಗುವ ಅಪ್ಪ, ಲಿಂಗಪರಿವರ್ತನೆ ಮಾಡಿಸಿಕೊಂಡವರ ಸಂಕಷ್ಟದ ಬದುಕು, ಅವರಲ್ಲಿ ಕ್ಷಣಕ್ಷಣಕ್ಕೂ ಕೀಳರಿಮೆ ತುಂಬುವಂತೆ ಮಾಡುವ ಸಮಾಜ... ಹೀಗೆ 85 ನಿಮಿಷದ ಸಿನಿಮಾದಲ್ಲಿ ಚೀನಾದ ಸಾಮಾಜಿಕ ಬದುಕಿನ ವಿವರಗಳು ಇಡಿಕಿರಿದು ತುಂಬಿಕೊಂಡಿವೆ.

ಬಿಗಿಯಾದ ಚಿತ್ರಕಥೆ, ಮನಸ್ಸು ಕಲಕುವ ಸಂಭಾಷಣೆ, ಮೆಲುದನಿಯಲ್ಲಿ ಹರಡಿಕೊಂಡಿರುವ ಸಂಗೀತ ಮತ್ತು ಭಾವನೆಗಳನ್ನು ಸಶಕ್ತವಾಗಿ ಕಟ್ಟಿಕೊಡುವ ಛಾಯಾಗ್ರಹಣ ಈ ಚಿತ್ರದ ಉಲ್ಲೇಖನೀಯ ಅಂಶಗಳು. ಕಪ್ಪು–ಬಿಳುಪನ್ನು ಕಥನ ತಂತ್ರದ ಭಾಗವಾಗಿ ಬಳಸಲಾಗಿದೆ. ಕಪ್ಪು–ಬಿಳುಪಿನ ಚಿತ್ರದಲ್ಲಿ ಕಾಣಿಸುವ ಮತ್ತೊಂದು ಬಣ್ಣ ಕೆಂಪು. ಲಿಂಗಪರಿವರ್ತನೆ ಮಾಡಿಸಿಕೊಂಡವರೊಬ್ಬರು ಕೆಂಪು ಗುಲಾಬಿ ತಬ್ಬಿಕೊಂಡೇ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಈ ಚಿತ್ರದ ಟರ್ನಿಂಗ್ ಪಾಯಿಂಟ್. ಈ ಸಾವು ಲಿಂಗಪರಿವರ್ತನೆಗೆ ಸಿದ್ಧವಾಗಿರುವ ಹ್ಯುನ್ಯುವಿನ ಪರಿಸ್ಥಿತಿಯನ್ನು ಅವನ ತಂದೆಗೆ ಮನವರಿಕೆ ಮಾಡಿಕೊಡುತ್ತದೆ. ಚಿತ್ರದ ಕೊನೆಯಲ್ಲಿ ಹ್ಯುನ್ಯೂ ಸಹ ಕೆಂಪು ಗೌನ್ ತೊಟ್ಟುಕೊಂಡು ತಂದೆಯ ಜೊತೆಗೆ ಬೀದಿಯಲ್ಲಿ ಧೈರ್ಯದಿಂದ ನಡೆಯುತ್ತಾನೆ. ಈ ಮೂಲಕ ಕೆಂಪು ಬಣ್ಣವು ಒಂದೆಡೆ ತೀವ್ರವಿಷಾದದ ಅಂತ್ಯವನ್ನು, ಹೊಸ ಬದುಕಿನ ಪ್ರಾರಂಭವನ್ನೂ ಚಿತ್ರ ಸಂಕೇತಿಸುತ್ತದೆ. ಚೀನಾ ದೇಶದ ರಾಷ್ಟ್ರಧ್ವಜದ ಬಣ್ಣವೂ ಕೆಂಪೇ ಆಗಿದೆ!

ಸಂಪ್ರದಾಯಸ್ಥ ಕ್ಯಾಥೊಲಿಕ್ ಅಪ್ಪ ‘ದೇವರ ಸೃಷ್ಟಿಯಲ್ಲಿ ಗಂಡು–ಹೆಣ್ಣಿಗೆ ಮಾತ್ರ ಅವಕಾಶ. ನೀನು ಲಿಂಗ ಪರಿವರ್ತನೆ ಮಾಡಿಸಿಕೊಂಡರೆ ದೇವರ ಸೃಷ್ಟಿಯನ್ನೇ ಮೀರಿದಂತೆ ಆಗುತ್ತದೆ’ ಎಂದು ಮಗನಿಗೆ ಪದೇಪದೆ ಹೇಳುತ್ತಾನೆ. ಚರ್ಚ್‌ನ ಪಾದ್ರಿಗಳು ಇದೇ ಮಾತನ್ನು ಪುನರಾವರ್ತಿಸುತ್ತಾರೆ. ಆದರೆ ಕೊನೆಗೊಮ್ಮೆ ಅಪ್ಪ ತನ್ನ ಮಗನಿಗಾಗಿ, ಅವನನ್ನು ಉಳಿಸಿಕೊಳ್ಳಲು ಸೋಲುತ್ತಾನೆ. ಆ ಮೂಲಕ ತನ್ನದೇ ಪರಿಸ್ಥಿತಿ ಎದುರಿಸುತ್ತಿರುವ ನೂರಾರು ದೇಶಗಳ ಸಾವಿರಾರು ಅಪ್ಪಂದಿರ ಬದುಕಿಗೆ ಭರವಸೆಯೂ ಆಗಿಬಿಡುತ್ತಾನೆ. ಅತ್ತ ಧರ್ಮವನ್ನೂ, ಇತ್ತ ಮಗನನ್ನೂ ಬಿಟ್ಟುಕೊಡದ ಸ್ಥಿತಿಯ ಅಪ್ಪನ ಪಾತ್ರ ಬಹುಕಾಲ ಮನದ ಮನೆಯಲ್ಲಿ ನೆಲೆ ನಿಲ್ಲುತ್ತದೆ.

ಚಿತ್ರ ನೋಡಿದ ಹಲವರಿಗೆ ಸಂಚಾರಿ ವಿಜಯ್ ಅಭಿನಯದ ‘ನಾನು ಅವನಲ್ಲ, ಅವಳು’ ನೆನಪಾಯಿತು. ಹಲವರು ಆ ಎರಡೂ ಚಿತ್ರಗಳನ್ನು ಹೋಲಿಸಿ ಮಾತನಾಡುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.