ADVERTISEMENT

ಮುಖವಾಡದ ಹಿಂದಿನ ರಹಸ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:30 IST
Last Updated 19 ಡಿಸೆಂಬರ್ 2019, 19:30 IST
ಶಿಲ್ಪಾ ಮಂಜುನಾಥ್‌
ಶಿಲ್ಪಾ ಮಂಜುನಾಥ್‌   

ಮುಖವಾಡಕ್ಕೆ ತಲೆ ಇರುವುದಿಲ್ಲ. ಕಣ್ಣು ಕೂಡ ಇರುವುದಿಲ್ಲ. ಆದರೆ, ಬದುಕಿನ ಬೀದಿಯಲ್ಲಿ ಹೆಜ್ಜೆಗೊಂದು ಮುಖವಾಡಗಳು ಎದುರಾಗುತ್ತವೆ. ಅವು ಕಥೆಯನ್ನೂ ಹೇಳುತ್ತವೆ. ಏಳೆಂಟು ಪಾತ್ರಗಳಿಗೆ ಮುಖವಾಡ ತೊಡಿಸಿ ‘ಮುಖವಾಡ’ದ ರಹಸ್ಯದ ಕಥೆ ಹೇಳಲು ಮುಂದಾಗಿದ್ದಾರೆ ನಿರ್ದೇಶಕ ಎಚ್‌. ಸಹದೇವ.

ಮೂರು ದಶಕಗಳ ಹಿಂದೆ ರಾಮಕೃಷ್ಣ ಮತ್ತು ತಾರಾ ಪ್ರಧಾನ ಭೂಮಿಕೆಯಲ್ಲಿದ್ದ ‘ಮುಖವಾಡ’ ಸಿನಿಮಾ ತೆರೆ ಕಂಡಿತ್ತು. ಅದಕ್ಕೂ ಮತ್ತು ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ಸಸ್ಪೆನ್ಸ್, ಥ್ರಿಲ್ಲರ್ ಕಥೆ ಇದು. ನೋಡುಗರಿಗೆ ಹಾರರ್ ಅನುಭವವನ್ನೂ ನೀಡುತ್ತದೆ. ತೆರೆಯ ಮೇಲೆ ಮೂಡುವ ಪಾತ್ರಗಳ ಬಗ್ಗೆ ಪ್ರೇಕ್ಷಕರು ಊಹಿಸುತ್ತಾ ಕುಳಿತರೆ ಅದು ಬೇರೆಯದೇ ಅನುಭವ ಕೊಡುತ್ತವೆ’ ಎಂದರು ನಿರ್ದೇಶಕ ಸಹದೇವ.

ADVERTISEMENT

ಯಾರಿಗೆ ಮುಖವಾಡ ಹಾಕಬಹುದು, ಹಾಕಿಸಿಕೊಳ್ಳುವವರು ಯಾರು –ಈ ಸನ್ನಿವೇಶಗಳ ಮೂಲಕವೇ ಕಥೆ ಸಾಗಲಿದೆಯಂತೆ. ಕಥೆಗೆ ಪೂರಕವಾಗಿಯೇ ಈ ಶೀರ್ಷಿಕೆ ಇಡಲಾಗಿದೆ ಎಂಬುದು ಚಿತ್ರತಂಡದ ಸ್ಪಷ್ಟೋಕ್ತಿ.

ಪವನ್‍ ತೇಜ್ ಈ ಚಿತ್ರದ ನಾಯಕ. ಶಂಕರ್‌ನಾಗ್ ಅಭಿಮಾನಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಶಿಲ್ಪಾ ಮಂಜುನಾಥ್‌ ಜೋಡಿಯಾಗಿದ್ದಾರೆ. ಬೆಂಗಳೂರು, ಮೈಸೂರು, ಕೇರಳ ಹಾಗೂ ಬಾಗಲಕೋಟೆಯ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಎಸ್.ಕೆ. ಬ್ರದರ್ಸ್ ಲಾಂಛನದಡಿ ಮೋಟಗಾನಹಳ್ಳಿಯ ಸಿ.ಎಂ. ಮಲ್ಲೇಶ್‌ ಬಂಡವಾಳ ಹೂಡಿದ್ದಾರೆ.

ವಿನಯ್‍ ಪಾಂಡವಪುರ, ಸೂರಿ ಅನಚುಕ್ಕಿ ಸಾಹಿತ್ಯ ರಚಿಸಿದ್ದಾರೆ. ಮಂಜು ಹಿನ್ನೆಲೆ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಆನಂದ್‍ ಗುಬ್ಬಿ ಅವರದ್ದು. ಸಂಕಲನ ವೆಂಕಿ ಅವರದು. ಮಾಸ್‍ಮಾದ ಮತ್ತು ವಿಕ್ರಂ ಮೋರ್ ಸಾಹಸ ಸಂಯೋಜಿಸಿದ್ದಾರೆ. ಮೋಹನ್ ನೃತ್ಯ
ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.