ADVERTISEMENT

ನಿರುದ್ಯೋಗಿ ಗಣಿ ಕಥೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 19:30 IST
Last Updated 14 ನವೆಂಬರ್ 2019, 19:30 IST
‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರದಲ್ಲಿ ಐಶಾನಿ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ
‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರದಲ್ಲಿ ಐಶಾನಿ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ   

ಅಭಿಷೇಕ್‌ ಶೆಟ್ಟಿ ನಿರ್ದೇಶನದ ‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಅಭಿಷೇಕ್‌ ಶೆಟ್ಟಿ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಗೂ ಇಳಿದಿದ್ದಾರೆ. ರಂಗಭೂಮಿ, ಕಿರುಚಿತ್ರ, ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ.

ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ ಇದು. ಕಾಮಿಡಿ, ಸಸ್ಪೆನ್ಸ್‌, ಹಾರರ್‌ ಮೂಲಕ ಮೆಟ್ರೊ ಸಿಟಿಯ ಬದುಕನ್ನು ಕಟ್ಟಿಕೊಡಲಾಗಿದೆ ಎಂಬುದು ಚಿತ್ರತಂಡದ ವಿವರಣೆ.

ADVERTISEMENT

ಗಣಿ ಅಲಿಯಾಸ್‌ ಗಣೇಶ್‌ ಬಿ.ಕಾಂ ಪದವೀಧರ. ನಿರುದ್ಯೋಗಿಯಾಗಿ ಮೂರು ವರ್ಷ ಉಡಾಳತನದಿಂದ ಇರುತ್ತಾನೆ. ಹಾಗಾಗಿ, ಕುಟುಂಬದಿಂದ ಹಿಡಿದು ಸ್ನೇಹಿತರ ಬಳಗಕ್ಕೂ ಆತನ ಬಗ್ಗೆ ತಿರಸ್ಕಾರ. ಕೊನೆಗೆ, ಗೆಳೆಯನ ಜೊತೆಗೂಡಿ ವ್ಯಾಪಾರ ಮಾಡಲು ಮುಂದಾಗುತ್ತಾನೆ. ಅದಕ್ಕಾಗಿ ₹ 10 ಲಕ್ಷ ಅಗತ್ಯವಿರುತ್ತದೆ. ಆ ಹಣವನ್ನು ಹೇಗೆ ಸಂಪಾದಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರ.

ಐಶಾನಿ ಶೆಟ್ಟಿ ಈ ಚಿತ್ರದ ನಾಯಕಿ. ಅವರು ಎರಡು ಛಾಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ಗೆಳೆಯನಾಗಿ ನಾಟ್ಯರಂಗ ಬಣ್ಣ ಹಚ್ಚಿದ್ದಾರೆ. ರಚನಾ ದಶರಥ ಅವರದು ವಾಗ್ಮಿಯ ಪಾತ್ರ. ನಾಯಕನಿಗೆ ತೊಂದರೆ ನೀಡುವ ಪಾತ್ರದಲ್ಲಿ ಪಲ್ಲವಿ ಗೌಡ ನಟಿಸಿದ್ದಾರೆ.

ಯು.ಎಸ್. ನಾಗೇಶ್‍ಕುಮಾರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ನಾಗರಾಜ್‌ ಅವರ ಛಾಯಾಗ್ರಹಣವಿದೆ. ವಿಕಾಸ್‌ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ.ಋತ್ವಿಕ್‍ ಮುರಳೀಧರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಂಕಲನ ವಿಜೇತ್‍ಚಂದ್ರ ಅವರದು. ಸುಚೇಂದ್ರಪ್ರಸಾದ್‌, ಜಹಾಂಗೀರ್‌, ಮಂಜುನಾಥ ಹೆಗ್ಡೆ, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ.

ಮೊದಲ ಹಂತದಲ್ಲಿ ಮೈಸೂರು, ಮಂಡ್ಯ, ಹಾಸನ, ತುಮಕೂರು ಮತ್ತು ಬೆಂಗಳೂರಿನಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.