ADVERTISEMENT

‘ನನ್ನ ಪ್ರಕಾರ‘ ಸಿನಿಮಾ ವಿಮರ್ಶೆ: ಸಡಿಲ ಥ್ರಿಲ್ಲರ್‌ನಲ್ಲಿ ಕಂಡ ಸಂಕೀರ್ಣ ಬದುಕು

ಕೆ.ಎಚ್.ಓಬಳೇಶ್
Published 23 ಆಗಸ್ಟ್ 2019, 13:30 IST
Last Updated 23 ಆಗಸ್ಟ್ 2019, 13:30 IST
‘ನನ್ನ ಪ್ರಕಾರ’ ಚಿತ್ರದಲ್ಲಿ ಕಿಶೋರ್‌ ಮತ್ತು ಪ್ರಿಯಾಮಣಿ
‘ನನ್ನ ಪ್ರಕಾರ’ ಚಿತ್ರದಲ್ಲಿ ಕಿಶೋರ್‌ ಮತ್ತು ಪ್ರಿಯಾಮಣಿ   

ಚಿತ್ರ: ನನ್ನ ಪ್ರಕಾರ

ನಿರ್ಮಾಣ: ಗುರುರಾಜ್‌ ಎಸ್.

ನಿರ್ದೇಶನ: ವಿನಯ್‌ ಬಾಲಾಜಿ

ADVERTISEMENT

ತಾರಾಗಣ: ಪ್ರಿಯಾಮಣಿ, ಕಿಶೋರ್, ಮಯೂರಿ, ಅರ್ಜುನ್‌ ಯೋಗಿ, ಪ್ರಮೋದ್‌ ಶೆಟ್ಟಿ, ನಿರಂಜನ್‌ ದೇಶಪಾಂಡೆ, ಗಿರಿಜಾ ಲೋಕೇಶ್‌

ಥ್ರಿಲ್ಲರ್‌ ಕಥನದ ಬಂಧ ಗಟ್ಟಿಯಾಗಿರಬೇಕು. ಕಥೆಯ ನಿರೂಪಣೆಯೂ ಸೊಗಸಾಗಿರಬೇಕು. ಅದರೊಳಗೆ ಅನಿರೀಕ್ಷಿತ ತಿರುವುಗಳಿರಬೇಕು. ಆಗಷ್ಟೇ ಥ್ರಿಲ್ಲರ್‌ ಪ್ರೇಕ್ಷಕರ ಮನತಟ್ಟುತ್ತದೆ.

ನಿರ್ದೇಶಕ ವಿನಯ್‌ ಬಾಲಾಜಿ ಮಹಿಳೆಯ ಕೊಲೆ ಮತ್ತು ಅದರ ಸುತ್ತ ಸುತ್ತಿಗೊಂಡಿರುವ ನಿಗೂಢ ಸಂಗತಿಗಳನ್ನು ಇಟ್ಟುಕೊಂಡು ‘ನನ್ನ ಪ್ರಕಾರ’ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್‌ ಕಥೆ ಹೇಳಲು ಪ್ರಯತ್ನಿಸಿದ್ದಾರೆ. ಥ್ರಿಲ್ಲರ್‌ ಮತ್ತು ಬದುಕಿನ ಸಂಕೀರ್ಣತೆ ಎರಡನ್ನೂ ಬೆಸೆಯಲು ಹೋಗಿರುವ ಅವರು ಅದರಲ್ಲಿ ಹಿಡಿತ ತಪ್ಪಿದ್ದಾರೆ.

ಅವಳ ಹೆಸರು ವಿಸ್ಮಯಾ. ಅನಾಥ ಮಕ್ಕಳ ಬದುಕಿಗೆ ಅವಳೇ ಆಸರೆ. ವಸತಿ ಸಮುಚ್ಚಯದಲ್ಲಿ ನಡೆದ ಫೋನ್ ಅವಾಂತರ ಅವಳ ಬದುಕಿಗೆ ಮುಳುವಾಗುತ್ತದೆ. ಕಾರಿನಲ್ಲಿ ಅವಳ ಮೃತದೇಹ ಸಿಗುತ್ತದೆ. ಆಕೆಯ ಮದುವೆ ಸಮಾರಂಭಕ್ಕೆ ಹೊರಟ ಇನ್‌ಸ್ಪೆಕ್ಟರ್‌ ಅಶೋಕ್‌ ಅವರ ಪತ್ನಿ ಡಾ.ಅಮೃತಾ ಈ ಸುದ್ದಿ ಕೇಳಿ ದಿಗಿಲುಗೊಳ್ಳುತ್ತಾರೆ. ತನಿಖೆಯ ಜಾಡಿಗೆ ಇಳಿದ ಇನ್‌ಸ್ಪೆಕ್ಟರ್‌ಗೆ ಹಲವು ಸಂದೇಹ ಕಾಡುತ್ತವೆ. ಅವು ಗೊಂದಲಕ್ಕೂ ಕಾರಣವಾಗುತ್ತವೆ. ಆಕೆಯ ಕೊಲೆಯನ್ನು ಯಾರು ಮಾಡುತ್ತಾರೆ ಎನ್ನುವುದೇ ಚಿತ್ರದ ತಿರುಳು.

ಪ್ರೇಕ್ಷಕರನ್ನು ಭಾವುಕ ಜಗತ್ತಿಗೊಳಗೆ ಸೆಳೆಯುವ ಪ್ರಯತ್ನವೂ ಇಲ್ಲಿದೆ. ವಸತಿ ಸಮುಚ್ಚಯಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆ, ಒಂಟಿ ಮಹಿಳೆಯರ ಬದುಕಿನ ತೊಳಲಾಟದ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ.

ಆದರೆ, ಕೆಲವೆಡೆ ಅನಗತ್ಯವಾಗಿ ದೃಶ್ಯಗಳನ್ನು ತುರುಕಿರುವುದು ಎದ್ದುಕಾಣುತ್ತದೆ. ಚಿತ್ರದ ಮೊದಲ ಅವಧಿಯಲ್ಲಿ ನಿರ್ದೇಶಕರು ಖುದ್ದು ಗೊಂದಲಕ್ಕೆ ಈಡಾದಂತೆ ಚಿತ್ರಕಥೆ ತೆರೆದುಕೊಳ್ಳುತ್ತದೆ. ವಿಸ್ಮಯಾ ಹೆಸರಿನಲ್ಲಿ ಸೃಷ್ಟಿಯಾಗುವ ಗೋಜಲು ಪ್ರೇಕ್ಷಕರಿಗೆ ಸುಲಭಕ್ಕೆ ಅರ್ಥವಾಗುವುದಿಲ್ಲ. ದ್ವಿತೀಯಾರ್ಧದಲ್ಲಿ ಈ ಸಿಕ್ಕುಗಳನ್ನು ಬಿಡಿಸಿ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಅವರು ಹಲವು ಥ್ರಿಲ್ಲರ್‌ಗಳ ಭಾವದ ಸುಳಿಗೆ ಸಿಲುಕಿರುವಂತೆ ತೋರುತ್ತದೆ. ಚಿತ್ರಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿ, ತಾಂತ್ರಿಕವಾಗಿ ಅಚ್ಟುಕಟ್ಟಾಗಿ ಕಥೆ ನಿರೂಪಿಸುವ ಅವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ.

ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಕಿಶೋರ್‌ ನಟನೆ ಹೆಚ್ಚು ಸಹಜವಾಗಿದೆ. ಪ್ರಿಯಾಮಣಿ, ಮಯೂರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಕೆಲವು ದೃಶ್ಯಗಳಿಗಳಿಗಷ್ಟೇ ಸಹನೀಯ. ಅರ್ಜುನ್ ರಾಮು ಸಂಗೀತ ಸಂಯೋಜನೆಯ ಯಾವುದೇ ಹಾಡು ಮನದಲ್ಲಿ ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.