ADVERTISEMENT

ಲೇಖನ: ಪುನೀತ್– ಹೊಸತನದ ಹಂಬಲ ಹೊಸಬರಿಗೆ ಬೆಂಬಲ

ಪದ್ಮನಾಭ ಭಟ್ಟ‌
Published 29 ಅಕ್ಟೋಬರ್ 2021, 21:04 IST
Last Updated 29 ಅಕ್ಟೋಬರ್ 2021, 21:04 IST
ಪುನೀತ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ ಕೊನೆಯ ಪೋಸ್ಟರ್
ಪುನೀತ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ ಕೊನೆಯ ಪೋಸ್ಟರ್   

‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’

ಇದು ಪುನೀತ್‌ ರಾಜ್‌ಕುಮಾರ್ ಕೊನೆಯದಾಗಿ (ಅ.27) ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದ ಸಾಲುಗಳು. ತಮ್ಮ ಹೊಸ ಪ್ರಾಜೆಕ್ಟ್‌ ಒಂದರ ಕುರಿತಾಗಿ ಬರೆದುಕೊಂಡಿರುವ ಈ ಸಾಲುಗಳ ಅಕ್ಷರಕ್ಷರ ಅವರಿಗೇ ಅನ್ವಯಿಸುವಂತಿವೆ. ಆದರೆ, ಕೊನೆಯ ಸಾಲೊಂದು ಸಾವಿನ ರೂಪದ ಚೇಳಾಗಿ ಮನಸ್ಸು ಕುಟುಕುತ್ತದೆ. ಚರಿತ್ರೆ ಮರುಕಳಿಸುವ ಸಮಯದಲ್ಲಿ ಚರಿತ್ರೆಯ ಸೃಷ್ಟಿಕರ್ತನೇ ಬಿಟ್ಟುಹೋಗಿದ್ದಾನೆ; ಅವೆಷ್ಟೋ ಅನನ್ಯ ಕನಸುಗಳನ್ನು ಸೇರಿಸಿ ಹೆಣೆಯುತ್ತಿದ್ದ ಅಪೂರ್ವ ಕುಸುರಿಯೊಂದು ಅರ್ಧಕ್ಕೇ ನಿಂತಿದೆ.

ಹೊಸತನಕ್ಕಾಗಿ ಹಾತೊರೆಯುತ್ತಿದ್ದಷ್ಟೇ ಆಸ್ಥೆಯಿಂದ ಹೊಸ ಪ್ರತಿಭಾವಂತರಿಗಾಗಿಯೂ ಪುನೀತ್‌ ಸದಾಕಾಲ ತಮ್ಮ ಮನೆ–ಮನದ ಬಾಗಿಲುಗಳನ್ನು ತೆರೆದುಕೊಂಡಿರುತ್ತಿದ್ದರು.

ADVERTISEMENT

‘ನಮ್ಮನ್ನು ಅವರ ಬಳಿ ಹೋಗಗೊಡದಂತೆ ಹಲವರು ತಡೆದಿದ್ದರು. ಆದರೆ ನಮ್ಮ ತಂಡದ ಕಿರುಚಿತ್ರವನ್ನು ನೋಡಿ ಇಷ್ಟಪಟ್ಟು ಅವರಾಗಿಯೇ ನಮ್ಮನ್ನು ಸಂಪರ್ಕಿಸಿದ್ದರು’ ಎನ್ನುವುದು ಚಿತ್ರರಂಗದಲ್ಲಿ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಯುವ ನಿರ್ದೇಶಕರೊಬ್ಬರ ಮಾತು. ಎಲ್ಲ ಸೂಪರ್‌ಸ್ಟಾರ್‌ಗಳಿಗೂ ಇರುವಂತೆ ಪುನೀತ್‌ ಸುತ್ತಲೂ ಒಂದು ಅಗೋಚರ ಗೋಡೆಯಿತ್ತು. ಆದರೆ ಆ ಗೋಡೆಯನ್ನು ದಾಟಿ ಅವರ ದೃಷ್ಟಿ ನಾಲ್ಕೂ ನಿಟ್ಟಿನಲ್ಲಿ ಹಾಯುತ್ತಿತ್ತು ಮತ್ತು ಪ್ರತಿಭಾವಂತರನ್ನು ಥಟ್ಟನೆ ಗುರ್ತಿಸುತ್ತಿತ್ತು. ಹೊಸ ಆಲೋಚನೆಗಳು, ಹೊಸ ವಿಚಾರಗಳು, ಹೊಸ ದೃಷ್ಟಿಕೋನ ಯಾರಲ್ಲಿಯೇ ಕಂಡುಬಂದರೂ ಪುನೀತ್‌ ತಾವಾಗಿಯೇ ಅವರನ್ನು ಸಂಪರ್ಕಿಸುತ್ತಿದ್ದರು.

ಅವರು 2017ರಲ್ಲಿ ‘ಪಿಆರ್‌ಕೆ ಪ್ರೊಡಕ್ಷನ್ಸ್‌’ ಆರಂಭಿಸಿದ್ದೇ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು, ಜನರಿಗೆ ಇಷ್ಟವಾಗುವಂಥ ಪ್ರಯೋಗಶೀಲ ಸಿನಿಮಾಗಳನ್ನು ಮಾಡಬೇಕು ಎಂಬ ಉದ್ದೇಶದಿಂದ. ಆ ನಿರ್ಮಾಣ ಸಂಸ್ಥೆಯಲ್ಲಿ ತಯಾರಾದ ಮೊದಲ ಸಿನಿಮಾ ಹೇಮಂತ್ ರಾವ್ ನಿರ್ದೇಶನದ ‘ಕವಲುದಾರಿ’. ನಂತರ ಬಂದಿರುವ ‘ಮಾಯಾಬಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’ – ಈ ಮೂರೂ ಸಿನಿಮಾಗಳೂ ಹೊಸಬರ ಪ್ರಯತ್ನಗಳೇ. ಡಿ. ಸತ್ಯಪ್ರಕಾಶ್‌ ಅವರ ನಿರ್ದೇಶನದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’, ಅರ್ಜುನ್‌ ಕುಮಾರ್ ಎಸ್‌. ಅವರ ‘ಫ್ಯಾಮಿಲಿ ಪ್ಯಾಕ್‌’, ರಾಘವ ನಾಯಕ್, ಪ್ರಶಾಂತ್‌ ರಾಜ್ ನಿರ್ದೇಶನದ ‘02’ ಇವಿಷ್ಟು ಅವರ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾಗಳು. ಡ್ಯಾನೀಶ್‌ ಶೇಠ್ ಜೊತೆಗೆ ಇನ್ನೊಂದು ಸಿನಿಮಾವನ್ನೂ ಘೋಷಿಸಿದ್ದರು. ಇನ್ನು ಚರ್ಚೆಯ ಹಂತದಲ್ಲಿದ್ದ ಸಿನಿಮಾಗಳ ಪಟ್ಟಿ ದೊಡ್ಡದೇ ಇದೆ. ಇವೆಲ್ಲವೂ ಬರೀ ಕಮರ್ಷಿಯಲ್‌ ಉದ್ದೇಶಗಳ ಆಚೆಗೂ ಸಿನಿಮಾ ಪ್ರೀತಿ ಇರುವ ಹೊಸ ತಲೆಮಾರಿನ ನಿರ್ದೇಶಕರ ಸಿನಿಮಾಗಳು ಎಂಬುದನ್ನು ಗಮನಿಸಿದರೆ ಪುನೀತ್ ಅವರ ಗಮನ ಎತ್ತ ಕಡೆಗಿತ್ತು ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ. ಜೇಕಬ್‌ ವರ್ಗೀಸ್‌ ಅವರ ನಿರ್ದೇಶನದಲ್ಲಿ, ತಾವೇ ನಾಯಕರಾಗಿ ನಟಿಸಲಿರುವ ಸಿನಿಮಾವನ್ನೂ ಅವರು ಪಿಆರ್‌ಕೆ ನಿರ್ಮಾಣ ಸಂಸ್ಥೆಯಿಂದಲೇ ನಿರ್ಮಿಸಲು ಮುಂದಾಗಿದ್ದರು.

‘ಡಿಫರೆಂಟ್ ಆಗಿ ಏನಾದ್ರೂ ಮಾಡ್ಬೇಕು’ ಎಂಬುದು ಅವರು ಎಲ್ಲರ ಬಳಿಯೂ ಪದೇ ಪದೇ ಹೇಳಿಕೊಳ್ಳುತ್ತಲೇ ಇರುವ ಮಾತಾಗಿತ್ತು. ಅದು ಅವರೊಳಗಿನ ಹೊಸತನದ ತಹತಹದ ಅಭಿವ್ಯಕ್ತಿಯಾಗಿತ್ತು. ಬರೀ ನಿರ್ದೇಶಕರಷ್ಟೇ ಅಲ್ಲ, ಯಾವುದೋ ಸಿನಿಮಾದ ಸಂಭಾಷಣೆ ಇಷ್ಟವಾದರೆ, ಇನ್ಯಾವುದೋ ಹೊಸ ನಟರ ಅಭಿನಯ ಇಷ್ಟವಾದರೆ, ಹಾಡೊಂದು ಅವರ ಮನಸ್ಸನ್ನು ಕಾಡಿದರೆ, ವಿಶಿಷ್ಟ ಕಿರುಚಿತ್ರ ಕಣ್ಣಿಗೆ ಬಿದ್ದರೆ ಅದರ ಹಿಂದಿರುವವರನನ್ನು ಕರೆದು ಮಾತಾಡಿಸುತ್ತಿದ್ದರು. ‘ಸ್ಕ್ರಿಪ್ಟ್ ಮಾಡಿಕೊಂಡು ಬನ್ನಿ’ ಎಂದು ಹೇಳುತ್ತಿದ್ದರು. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಶೀಲ ಯುವ ಪೀಳಿಗೆಯ ದೊಡ್ಡ ಬಳಗವೇ ಪುನೀತ್‌ ಸುತ್ತಲೂ ಸೇರಲಾರಂಭಿಸಿತ್ತು.

‘ಕನ್ನಡದ ಹಲವು ಯುವ, ಪ್ರತಿಭಾವಂತ ಸಿನಿಕರ್ಮಿಗಳ ಜೊತೆಗೆ ಪುನೀತ್‌ ನಿರಂತರವಾಗಿ ಸಂಪರ್ಕದಲ್ಲಿದ್ದರು; ಚರ್ಚೆ ನಡೆಸುತ್ತಿದ್ದರು. ಅವರ ನಿರ್ಮಾಣ ಸಂಸ್ಥೆಯಿಂದ ಇನ್ನು ಎರಡು ಮೂರು ವರ್ಷಗಳಲ್ಲಿ ಬರಲಿದ್ದ, ಬರಬಹುದಾಗಿದ್ದ ಸಿನಿಮಾಗಳನ್ನು ಗಮನಿಸಿದರೆ ಅವರು ಎಂಥ ದೊಡ್ಡ ಪರಿವರ್ತನೆಯ ಕೆಲಸವನ್ನು ಆರಂಭಿಸಿದ್ದರು ಎಂಬುದರ ಅಂದಾಜು ಸಿಗುತ್ತದೆ. ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಇದು ಬಹುದೊಡ್ಡ ಹಿನ್ನಡೆ’ ಎನ್ನುತ್ತಾರೆ ಪುನೀತ್ ಅವರೊಡನೆ ಹತ್ತಿರದ ಒಡನಾಟ ಇದ್ದ ಯುವ ನಿರ್ದೇಶಕರೊಬ್ಬರು.

ಮತ್ತೆ ಆರಂಭದಲ್ಲಿ ಉಲ್ಲೇಖಿಸಿದ ಸಾಲುಗಳಿಗೇ ಬರುವುದಾದರೆ, ಇದು ಪುನೀತ್‌ ಅವರ ವ್ಯಕ್ತಿತ್ವದ ಇನ್ನೊಂದು ಮಗ್ಗುಲನ್ನು ಸೂಚಿಸುವ ಡಾಕ್ಯೂಫಿಲಂ ಒಂದರ ಕುರಿತಾಗಿ ಬರೆದ ಸಾಲುಗಳಾಗಿದ್ದವು. ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೆ ಸೇರಿ, ಕರ್ನಾಟಕದ ವನ್ಯಸಂಪತ್ತನ್ನು ಪರಿಚಯಿಸುವ ವಿಶಿಷ್ಟ ಡಾಕ್ಯೂಫಿಲಂ ಒಂದನ್ನು ಮಾಡುತ್ತಿದ್ದರು. ಸ್ವತಃ ಅವರೇ ಅದರ ಭಾಗವಾಗಿದ್ದರು. ‘ನಮ್ಮ ನೆಲದ, ಕಾಡಿನ ಸಂಪತ್ತನ್ನು ಜನರಿಗೆ ಪರಿಚಯಿಸಿಕೊಡುವ ಈ ಕೆಲಸ ತುಂಬ ಖುಷಿಕೊಡುತ್ತಿದೆ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು.

ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ ಚಿತ್ರೀಕರಣ ಮಾಡಿದ್ದರು. ಸುಮಾರು ಶೇ 90ರಷ್ಟು ಭಾಗ ಚಿತ್ರೀಕರಣ ಮುಗಿದಿತ್ತು. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಇದರ ಟೀಸರ್ ಬಿಡುಗಡೆ ಮಾಡಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಈ ಡಾಕ್ಯೂಫಿಲಂಗೆ ಅವರು ಇಡಬೇಕು ಎಂದುಕೊಂಡಿದ್ದ ಹೆಸರು:

‘ಗಂಧದ ಗುಡಿ’

ಈಗ ಆ ಗುಡಿಯಲ್ಲಿ ಮೂರ್ತಿಯಿಲ್ಲ. ಅವರು ಹಚ್ಚಿಹೋದ ದೀಪ ಉರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.